Bar Bandh: ನವೆಂಬರ್ 20ರ ಬಾರ್ ಬಂದ್ ಕರೆ ವಾಪಸ್
ಬೆಂಗಳೂರು, ನವೆಂಬರ್ 19: ಕರ್ನಾಟಕ ಸರ್ಕಾರದ ಮುಂದೆ ಅಬಕಾರಿ ಇಲಾಖೆಯ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವೆಂಬರ್ 20ರಂದು ರಾಜ್ಯಾದ್ಯಂತ ಬಾರ್‌ಗಳನ್ನು ಬಂದ್ ಮಾಡುವ ಘೋಷಣೆ ಮಾಡಲಾಗಿತ್ತು. ಆದರೆ ಈಗ ಮುಖ್ಯಮಂತ್ರಿಗಳ ಜೊತೆಗಿನ ಸಂಧಾನ ಸಭೆ ಸಫಲವಾಗಿದ್ದು, ಬಾರ್ ಬಂದ್ ಕರೆಯನ್ನು ವಾಪಸ್ ಪಡೆಯಲಾಗಿದೆ.
ಮಂಗಳವಾರ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕದ ಅಧ್ಯಕ್ಷ ಕರುಣಾಕರ ಹೆಗಡೆ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿತ್ತು. ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನವೆಂಬರ್ 20ರ ಬುಧವಾರದ ಬಾರ್ ಬಂದ್ ಕರೆ ವಾಪಸ್ ಪಡೆಯಲಾಗಿದೆ.

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟುಕೊಂಡು ನವೆಂಬರ್ 20ರಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ರಾಜ್ಯಾದ್ಯಂತ ಎಲ್ಲಾ ವೈನ್ ಸ್ಟೋರ್‌ಗಳ ಬಂದ್‌ಗೆ ಕರೆ ನೀಡಿತ್ತು.
ವರದಿ ಕೊಡಲು ಸೂಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕದ ಬೇಡಿಕೆಗಳನ್ನು ಆಲಿಸಿದರು. ಈ ಕುರಿತು ವರದಿ ನೀಡಲು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಆದ್ದರಿಂದ ನವೆಂಬರ್ 20ರಂದು ಕರೆ ನೀಡಿದ್ದ ಬಾರ್ ಬಂದ್ ಕರೆಯನ್ನು ವಾಪಸ್ ಪಡೆಯಲಾಗಿದೆ ಎಂದು ಅಸೋಸಿಯೇಷನ್ ಹೇಳಿದೆ.
ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ 700 ಕೋಟಿ ಸಂಗ್ರಹಿಸಿ ಮಹಾರಾಷ್ಟ್ರಕ್ಕೆ ಕಳುಹಿಸಿದೆ ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿಕೆಯನ್ನು ನೀಡಿದ್ದರು.
ಬಾರ್ ಬಂದ್ ಕರೆ ನೀಡುವ ವಿಚಾರದಲ್ಲಿಯೂ ಸಂಘಟನೆಗಳ ನಡುವೆ ಎರಡು ಬಣವಾಗಿತ್ತು. ಕೆಲವು ಸಂಘಟನೆಗಳು ನವೆಂಬರ್ 20ರಂದು ಬಾರ್‌ಗಳನ್ನು ಬಂದ್ ಮಾಡಲು ಒಪ್ಪಿಗೆ ನೀಡಿರಲಿಲ್ಲ. ಮದ್ಯ ಮಾರಾಟವನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದವು.
ಮದ್ಯ ಮಾರಾಟ ಬಂದ್‌ಗೆ ಬೆಂಬಲವಿಲ್ಲ ಎಂದು ಹೇಳಿರುವ ಕರ್ನಾಟಕ ವೈನ್ ಮರ್ಚೆಂಟ್ಸ್‌ನ ಹೊನ್ನಗಿರಿ ಗೌಡ ಮತ್ತು ಕರ್ನಾಟಕ ರಾಜ್ಯ ಲಿಕ್ಕರ್ ಮರ್ಚೆಂಟ್ಸ್ ಸೊಸೈಟಿ ಅಧ್ಯಕ್ಷ ಎಸ್. ಚಂದ್ರಶೇಖರ್ ನಮ್ಮ ಒಕ್ಕೂಟದ ಸದಸ್ಯರಲ್ಲ ಎಂದು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಕರ್ನಾಟಕ ಹೇಳಿತ್ತು.
ಮೂರು ಸಾವಿರಕ್ಕೂ ಅಧಿಕ ಸನ್ನದುದಾರರ ಸಭೆಯಲ್ಲಿ ನವೆಂಬರ್ 20ರಂದು ಮದ್ಯ ಮಾರಾಟ ಬಂದ್ ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು. ನಾವು ಬಂದ್ ಕರೆ ವಾಪಸ್ ಪಡೆದಿಲ್ಲ. ಹೊನ್ನಗಿರಿ ಗೌಡ ಮತ್ತು ಎಸ್. ಚಂದ್ರಶೇಖರ್ ನಮ್ಮ ತೀರ್ಮಾನದ ಭಾಗವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು.
ಮುಖ್ಯಮಂತ್ರಿಗಳ ಭೇಟಿ ಬಳಿಕ ನವೆಂಬರ್ 20ರ ಬಾರ್ ಬಂದ್ ಕರೆ ವಾಪಸ್ ಪಡೆಯಲಾಗಿದೆ ಎಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕ ಹೇಳಿದೆ. ಆದ್ದರಿಂದ ಬುಧವಾರ ರಾಜ್ಯಾದ್ಯಂತ ಬಾರ್‌ಗಳು ತೆರೆದಿರುತ್ತವೆ. ಅಬಕಾರಿ ಇಲಾಖೆಯನ್ನು ಹಣಕಾಸು ಇಲಾಖೆ ಜೊತೆ ವಿಲೀನ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications