ಪತ್ನಿ ಆಸ್ತಿ ವಿವರ ಮುಚ್ಚಿಟ್ಟ ಆರೋಪ: ಎಂಎಲ್ ಸಿ ಸೂರಜ್ ರೇವಣ್ಣಗೆ ಸಮನ್ಸ್ ಜಾರಿಗೊಳಿಸಿದ ಹೈಕೋರ್ಟ್
ಬೆಂಗಳೂರು ಮಾ.11. ಹಾಸನ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಿಂದ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತಗೊಂಡಿರುವ ಜೆಡಿಎಸ್ ಅಭ್ಯರ್ಥಿ ಡಾ. ಸೂರಜ್ ರೇವಣ್ಣ ತಮ್ಮ ಪತ್ನಿ ಆಸ್ತಿ ವಿವರ ಮುಚ್ಚಿಟ್ಟಿರುವ ಹಿನ್ನೆಲೆಯಲ್ಲಿ ಅವರ ಆಯ್ಕೆ ಅಸಿಂಧು ಗೊಳಿಸಬೇಕೆಂಬ ಅರ್ಜಿ ಸಂಬಂಧ ಹೈಕೋರ್ಟ್, ಸೂರಜ್ ರೇವಣ್ಣಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿದೆ.
ಹೊಳೆನರಸೀಪುರ ತಾಲ್ಲೂಕಿನ ಕಾಮಸಮುದ್ರ ಗ್ರಾಮ ಪಂಚಾಯಿತಿ ಸದಸ್ಯ ಎಲ್. ಹನುಮೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಶುಕ್ರವಾರ ಆಲಿಸಿತು. ಬಳಿಕ ಸಮನ್ಸ್ ಜಾರಿಗೊಳಿಸಿ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಪ್ರತಿವಾದಿ ಸೂರಜ್ ರೇವಣ್ಣ ನೋಟಿಸ್ ಸ್ವೀಕರಿಸುವ ಕಾನೂನು ಪ್ರಕ್ರಿಯೆಗೆ ಸಹಕರಿಸುತ್ತಿಲ್ಲ. ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ, ಸ್ಥಳೀಯ ಜಿಲ್ಲಾ ನ್ಯಾಯಾಧೀಶರ ಮೂಲಕ ನೋಟಿಸ್ ಜಾರಿಗೆ ಆದೇಶಿಸಬೇಕೆಂದು ಕೋರಿದರು.

ನ್ಯಾಯಪೀಠ, ಕಾನೂನು ಪ್ರಕಾರ ಈಗ ಸಮನ್ಸ್ ಜಾರಿ ಮಾಡಲಾಗುವುದು, ಅವರು ಅದನ್ನು ಸ್ವೀಕರಿಸದೇ ಹೋದರೆ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತು.'
ಪತ್ನಿ ಆಸ್ತಿ ವಿವರ ನೀಡಿಲ್ಲ:
ಸೂರಜ್ ರೇವಣ್ಣ 2017ರ ಮಾರ್ಚ್ 4ರಂದು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಪುತ್ರಿಯನ್ನು ಮದುವೆಯಾಗಿದ್ದರು. ಆದರೆ, ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದ ಅರ್ಜಿ ನಮೂನೆ 26ರಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ವಿವರಿಸಿಲ್ಲ' ಎಂಬುದು ಅರ್ಜಿದಾರರ ಆರೋಪಿಸಿದ್ದಾರೆ.
ಪತ್ನಿಗೆ ಸಂಬಂಧಿಸಿದ ವಿವರಗಳನ್ನು ನಮೂದಿಸುವ ಕಾಲಂನಲ್ಲಿ 'ಅನ್ವಯವಾಗುವುದಿಲ್ಲ' ಎಂದು ತಿಳಿಸಿದ್ದಾರೆ. ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡಿಲ್ಲ ಎಂದು ಆಕ್ಷೇಪಿಸಿದ್ದಾರೆ. ಆದ್ದರಿಂದ ಚುನಾವಣೆಯಲ್ಲಿ ಅಕ್ರಮಗಳನ್ನು ಎಸಗಿದ್ದು, ಅವರ ಆಯ್ಕೆ ಜನತಾ ಪ್ರತಿನಿಧಿ ಕಾಯ್ದೆ-1951ರ ಕಲಂ 123 (1) (ಎ) (ಬಿ) ಮತ್ತು 123 (2)ಗೆ ವಿರುದ್ಧವಾಗಿದೆ. ಹಾಗಾಗಿ ಅವರ ಆಯ್ಕೆ ಅಸಿಂಧುವೆಂದು ಘೋಷಿಸಬೇಕೆಂದು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ.












Click it and Unblock the Notifications