ಇನ್ಮುಂದೆ ರಾಜ್ಯದಲ್ಲಿ ದ್ವೇಷದ ರಾಜಕಾರಣ ಶುರುವಾಗುತ್ತಾ? ಯಾಕೆ ಈ ಪ್ರಶ್ನೆ?

ಬೆಂಗಳೂರು, ಸೆಪ್ಟೆಂಬರ್‌ 25: ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಜೋರಾಗಿದೆ. ಇಲ್ಲಿವರೆಗೆ ಒಂದು ಲೆಕ್ಕವಾದರೆ ಇನ್ನು ಮೇಲೆ ಒಂದು ಲೆಕ್ಕವಾಗಲಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರಕ್ಕೆ ಮೇಲಿಂದ ಮೇಲೆ ಮುಜುಗರ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಸಚಿವ ನಾಗೇಂದ್ರ ಅವರ ತಲೆ ದಂಡವಾಗಿದ್ದರೆ ಇದೀಗ ಮುಡಾ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬುಡಕ್ಕೆ ಬಂದಿದ್ದು, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಬಹುಶಃ ಇಲ್ಲಿವರೆಗೆ ಯಾವ ಮುಖ್ಯಮಂತ್ರಿಯೂ ಅನುಭವಿಸದ ಸವಾಲ್ ಗಳನ್ನು ಸಿದ್ದರಾಮಯ್ಯ ಅವರು ಎದುರಿಸುವಂತಾಗಿದ್ದು ವಿಶೇಷ. ಅಧಿಕಾರಕ್ಕೆ ಬಂದಲ್ಲಿಂದ ಇಲ್ಲಿವರೆಗೆ ವಿಪಕ್ಷಗಳು ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ಪೀಕಲಾಟಕ್ಕೆ ಸಿಲುಕಿಸುತ್ತಲೇ ಬಂದಿದ್ದಾರೆ. ಆರೋಪ, ಹೋರಾಟ, ಪ್ರತಿಭಟನೆ, ಪಾದಯಾತ್ರೆ ಮೊದಲಾದವುಗಳನ್ನು ಮಾಡುತ್ತಾ ಬಂದಿದ್ದು, ಅದೆಲ್ಲವನ್ನು ಮೀರಿ ಆಡಳಿತ ನಡೆಸಿಕೊಂಡು ಬಂದಿದ್ದ ಸಿದ್ದರಾಮಯ್ಯರಿಗೆ ಅಸಲಿ ಸಂಕಷ್ಟ ಈಗ ಶುರುವಾಗಿದೆ.

MUDA Scam Will The Politics Of Hatred Start In The State

ಇತ್ತೀಚೆಗೆ ರಾಜ್ಯದಲ್ಲಿ ದ್ವೇಷದ ರಾಜಕಾರಣ ಆರಂಭವಾಗಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಎಂಬುದು ಗೊತ್ತಾಗದಂತಾಗಿದೆ. ರಾಜಕೀಯದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಮಾಮೂಲಿಯಾಗಿ ನಡೆಯುತ್ತಲೇ ಇರುತ್ತದೆ. ಸರ್ಕಾರದ ವಿರುದ್ಧ ಹೋರಾಟ, ಪ್ರತಿಭಟನೆಗಳು ಇದ್ದೇ ಇರುತ್ತವೆ.

ಆದರೆ ರಾಜ್ಯದ ಮಟ್ಟಿಗೆ ನೋಡುವುದಾದರೆ ಅದೆಲ್ಲವನ್ನು ಮೀರಿದ ದ್ವೇಷದ ರಾಜಕಾರಣ ಶುರುವಾಗಿದೆ. ಇದರ ಪರಿಣಾಮ ಅಭಿವೃದ್ಧಿ ಕುಂಠಿತಗೊಂಡಿದೆ. ಜನಸಾಮಾನ್ಯರ ಬದುಕು ಸಂಕಷ್ಟಕ್ಕೀಡಾಗುತ್ತಿದೆ. ಎಲ್ಲವನ್ನೂ ರಾಜಕಾರಣದ ದೃಷ್ಟಿಯಿಂದ ನೋಡುತ್ತಾ ಲಾಭ ನಷ್ಟದ ಲೆಕ್ಕಾಚಾರದೊಂದಿಗೆ ಓಟ್ ಬ್ಯಾಂಕ್ ಗಾಗಿ ಓಲೈಕೆ ರಾಜಕೀಯ ಮಾಡುತ್ತಿರುವುದೇ ಇದಕ್ಕೆ ಕಾರಣವಾಗಿದೆ.

MUDA Scam Will The Politics Of Hatred Start In The State

ಕಾಂಗ್ರೆಸ್‌ಗೆ ಅಸ್ತ್ರವಾಗಿದ್ದ ಪಾರ್ಟಿಪರ್ಸೆಂಟ್

ಈ ದ್ವೇಷದ ರಾಜಕಾರಣ ಶುರುವಾಗಿದ್ದು ಲೋಕಸಭಾ ಚುನಾವಣಾ ಕಳೆದ ನಂತರ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿತ್ತು. ಈ ವೇಳೆ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಸಿಎಂ ಬಸವರಾಜಬೊಮ್ಮಾಯಿ ಸರ್ಕಾರದ ವಿರುದ್ಧ ಸಮರವನ್ನೇ ಸಾರಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕನಾಗಿದ್ದ ಸಿದ್ದರಾಮಯ್ಯ ಅವರಿಗೆ ಅವತ್ತು ಅಸ್ತ್ರವಾಗಿದ್ದು 40ಪರ್ಸೆಂಟ್ ಮತ್ತು ಪೇಸಿಎಂ ಅಭಿಯಾನ. ಇಡೀ ರಾಜ್ಯದಲ್ಲಿ 40ಪರ್ಸೆಂಟ್ ಭಾರೀ ಸದ್ದು ಮಾಡಿದ್ದರು.

40 ಪರ್ಸೆಂಟ್ ಆರೋಪ ಮಾಡಿದಾಗ ಅಂದಿನ ಬಿಜೆಪಿ ಸರ್ಕಾರ ದಾಖಲೆ ಕೊಡಿ ಕೇಳುತ್ತಾ ಹೋಯಿತಷ್ಟೆ ಏನೂ ಮಾಡಲಿಲ್ಲ. ಹಾಗೆಯೇ ವಿಪಕ್ಷವಾಗಿದ್ದ ಕಾಂಗ್ರೆಸ್ ಅದರ ತನಿಖೆ ಬೇಕಾಗಿರಲಿಲ್ಲ. ಬದಲಿಗೆ ಹೋರಾಟಕ್ಕೊಂದು ಅಸ್ತ್ರ ಬೇಕಾಗಿತ್ತು. ಅದನ್ನು ತುಂಬಾ ಚೆನ್ನಾಗಿ ಬಳಸಿಕೊಂಡ ಕಾಂಗ್ರೆಸ್ ನಾಯಕರು ಹೋದಲ್ಲಿ ಬಂದಲ್ಲಿ ಅದನ್ನು ಬಿಂಬಿಸುತ್ತಲೇ ಬಸವರಾಜಬೊಮ್ಮಾಯಿ ವಿರುದ್ಧ ಭ್ರಷ್ಟ ಸರ್ಕಾರ ಎಂಬುದನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದರು. ಅದರ ಲಾಭ ಕೂಡ ವಿಧಾನಸಭಾ ಚುನಾವಣೆಯಲ್ಲಿ ಆಯಿತು. ರಾಜ್ಯದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಸ್ಥಾನಪಡೆದು ರಾಜ್ಯದಲ್ಲಿ ಅಧಿಕಾರ ಹಿಡಿಯುವಂತಾಯಿತು.

MUDA Scam Will The Politics Of Hatred Start In The State

ಭ್ರಷ್ಟಾಚಾರದ ವಿರುದ್ಧ ಚಕಾರ ಎತ್ತಲಿಲ್ಲ

ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುವುದರ ಕಡೆಗೆ ಸಿದ್ದರಾಮಯ್ಯ ತಲೆಕೆಡಿಸಿಕೊಂಡರು. ಇಷ್ಟಕ್ಕೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನಿಭಾಯಿಸುವುದು ಘೋಷಣೆ ಮಾಡಿದಷ್ಟು ಸುಲಭವಾಗಿರಲಿಲ್ಲ. ಈ ಗ್ಯಾರಂಟಿ ಯೋಜನೆ ನಡುವೆ ಸಿದ್ದರಾಮಯ್ಯರವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾರೆ ಬಿಜೆಪಿ ಅವಧಿಯಲ್ಲಿ ಆಗಿದೆ ಎನ್ನಲಾದ (ಅವತ್ತು ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಆರೋಪ ಮಾಡಿದ) ಭ್ರಷ್ಟಾಚಾರದ ತನಿಖೆಗೆ ಮುಂದಾಗುತ್ತದೆ ಎಂದೇ ನಂಬಿದ್ದರು.

ಅಧಿಕಾರಕ್ಕೆ ಬರುತ್ತಿದ್ದಂತೆಯೇ ತಾವು ಮಾಡಿದ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಹಗರಣಗಳ ಬಗ್ಗೆ ಆರೋಪ ಮಾಡಿದವರು ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಗೋಜಿಗೆ ಹೋಗಲೇ ಇಲ್ಲ. ಬದಲಿಗೆ ಗ್ಯಾರಂಟಿ ಯೋಜನೆ ಮತ್ತು ಮುಂದಿನ ಲೋಕಸಭಾ ಚುನಾವಣೆ ಕಡೆಗೆ ಹೆಚ್ಚಿನ ಆದ್ಯತೆ ನೀಡಿದರು. ಎರಡು ಡಿಜಿಟ್ ತಲುಪಲೇ ಬೇಕು ಎಂಬ ಹಠಕ್ಕೆ ಬಿದ್ದರು. ಆದರೆ ಎಲ್ಲವೂ ಚೆನ್ನಾಗಿಯೇ ಇತ್ತು. ಯಾವಾಗ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಒಂದಾಗಿ ಲೋಕಸಭಾ ಚುನಾವಣೆ ಹೋದರೋ ಆಗಲೇ ರಾಜ್ಯದಲ್ಲಿ ದ್ವೇಷದ ರಾಜಕಾರಣ ಆರಂಭವಾಯಿತು ಎಂದರೆ ತಪ್ಪಾಗಲಾರದು.

ಬಿಜೆಪಿ ಕಾಲದ ಹಗರಣಗಳ ತನಿಖೆಗೆ ಸಮಿತಿ

ಇನ್ನು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಲ್ಲಿಂದ ಇಲ್ಲಿವರೆಗೆ ಸಿಎಂ ಸಿದ್ದರಾಮಯ್ಯರಿಗೆ ಸಿಎಂ ಕುರ್ಚಿ ಸುಖದ ಸುಪ್ಪತ್ತಿಗೆಯಾಗಿ ಉಳಿದಿಲ್ಲ. ಒಂದಲ್ಲ ಒಂದು ಸಮಸ್ಯೆಗಳು ಅವರನ್ನು ಸುತ್ತಿಕೊಳ್ಳುತ್ತಲೇ ಇವೆ. ಅವರನ್ನು ಆರಂಭದಿಂದಲೂ ಕಾಡಿದ್ದು ಹೆಚ್.ಡಿ.ಕುಮಾರಸ್ವಾಮಿ, ಟ್ರಾನ್ಸ್ ಫರ್ ಹಗರಣದ ಆರೋಪ ಮಾಡಿದ್ದ ಅವರು ಪೆನ್ ಡ್ರೈವ್ ಜೇಬಿನಲ್ಲಿಟ್ಟುಕೊಂಡೇ ಓಡಾಡಿದ್ದರು. ಇದಾದ ನಂತರ ವಿಪಕ್ಷಗಳಿಗೆ ಬಹುದೊಡ್ಡ ಅಸ್ತ್ರವಾಗಿ ಸಿಕ್ಕಿದ್ದು ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ. ಇದರ ವಿರುದ್ಧ ಹೋರಾಟವೇ ನಡೆದಿದ್ದು ಈಗಾಗಲೇ ಸಚಿವ ನಾಗೇಂದ್ರರ ತಲೆದಂಡವಾಗಿದ್ದು ಈಗಲೂ ಜೈಲಿನಲ್ಲಿದ್ದಾರೆ.

ಯಾವಾಗ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣದ ಸುದ್ದಿಯಾಯಿತೋ? ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ಮಾಡುವುದಾಗಿ ಘೋಷಣೆ ಮಾಡಿದ್ದರಲ್ಲದೆ, ಏನೇನು ಹಗರಣಗಳಾಗಿವೆ ಎಂಬುದರ 17 ಹಗರಣಗಳ ಪಟ್ಟಿ ಮಾಡಿ ಮಾಧ್ಯಮಗಳ ಮೂಲಕ ತೆರೆದಿಟ್ಟು ಎಲ್ಲವನ್ನು ತನಿಖೆ ಮಾಡುವುದಾಗಿ ಹೇಳಿಕೆ ನೀಡಿದ್ದಲ್ಲದೆ, ಇದಕ್ಕೊಂದು ಸಮಿತಿಯನ್ನು ರಚಿಸಿದರು. ಇನ್ನು ಕೋವಿಡ್ ಕಾಲದಲ್ಲಿ ಹಗರಣಗಳಾಗಿವೆ. ಅವತ್ತು ಆರೋಗ್ಯ ಸಚಿವರಾಗಿದ್ದವರು ಡಾ. ಕೆ.ಸುಧಾಕರ್. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ರಾಜ್ಯದ ಅಭಿವೃದ್ಧಿ ಕುಂಠಿತವಾಗದಿರಲಿ

ಇದೀಗ ಸಿದ್ದರಾಮಯ್ಯ ಅವರನ್ನು ಮುಡಾ ಹಗರಣ ಸುತ್ತಿಕೊಂಡಿದೆ. ಹೀಗಿರುವಾಗ ಅಧಿಕಾರದಲ್ಲಿರುವ ಕಾಂಗ್ರೆಸ್ ತಮ್ಮ ವಿರೋಧಿಗಳನ್ನು ಸದೆ ಬಡಿಯುವ ಕೆಲಸವನ್ನಂತು ಮಾಡಿಯೇ ಮಾಡುತ್ತಾರೆ. ಮತ್ತೆ ಜೆಡಿಎಸ್, ಬಿಜೆಪಿ ಕಾಲದ ಹಗರಣವನ್ನು ಹುಡುಕುವ ಕೆಲಸವಂತು ಮಾಡಿಯೇ ಮಾಡುತ್ತಾರೆ. ಆ ಮೂಲಕ ದ್ವೇಷದ ರಾಜಕಾರಣವಂತು ಮುನ್ನಲೆಗೆ ಬರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಒಂದು ಇದು ಆದರೆ ಜನಸಾಮಾನ್ಯರು ಖುಷಿಪಡುವಂತಾಗುತ್ತದೆ. ಎಲ್ಲರ ಬಣ್ಣವೂ ಕಳಚಿ ಬೀಳಲಿ ಉಪ್ಪು ತಿಂದವನು ನೀರು ಕುಡಿಯಲಿ. ಆದರೆ ಇವರ ತಿಕ್ಕಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗದಿದ್ದರೆ ಅಷ್ಟೇ ಸಾಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+