Breaking: ಸೆ. 9ರ ತನಕ ಸಿದ್ದರಾಮಯ್ಯಗೆ ರಿಲೀಫ್ ಕೊಟ್ಟ ಹೈಕೋರ್ಟ್
ಬೆಂಗಳೂರು, ಸೆಪ್ಟೆಂಬರ್ 02: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೆಪ್ಟೆಂಬರ್ 9ರ ತನಕ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿಕೆ ಮಾಡಿದ್ದು, ಆಗಸ್ಟ್ 19ರ ಮಧ್ಯಂತರ ಆದೇಶವು ಅಲ್ಲಿಯ ತನಕ ಜಾರಿಯಲ್ಲಿರುತ್ತದೆ.
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸೋಮವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು.

ಸೋಮವಾರ ಮಧ್ಯಾಹ್ನ 2.30ಕ್ಕೆ ಕೋರ್ಟ್ ಕಲಾಪ ಆರಂಭವಾದಾಗ ದೂರದಾರ ಸ್ನೇಹಮಯಿ ಕೃಷ್ಣ ಪರವಾಗಿ ವಕೀಲ ಕೆ. ಜಿ. ರಾಘವನ್ ವಾದ ಮಂಡನೆ ಆರಂಭಿಸಿದರು. ಹಲವು ಅಂಶಗಳನ್ನು ಉಲ್ಲೇಖಿಸಿದ ಅವರು ಖಾಸಗಿ ದೂರು ಆಧರಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ವಿಚಾರಣೆ ನಡೆಸಿ, ತೀರ್ಪು ನೀಡುವ ಅಧಿಕಾರ ಹೈಕೋರ್ಟ್‌ಗೆ ಇದೆ ಎಂದು ವಾದಿಸಿದರು.
ಕೆ. ಜಿ. ರಾಘವನ್ ವಾದ ಮಂಡನೆ ಬಳಿಕ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅರ್ಜಿಯ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿಕೆ ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ವಾರಾಂತ್ಯದಲ್ಲಿ ಹಬ್ಬದ ರಜೆಗಳಿವೆ, ಆದ್ದರಿಂದ ಮುಂದಿನ ವಾರಕ್ಕೆ ವಿಚಾರಣೆ ಮುಂದೂಡಿಕೆ ಮಾಡಿ ಎಂದು ಮನವಿ ಸಲ್ಲಿಸಿದರು.
ಆಗ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅಡ್ವೊಕೇಟ್ ಜನರಲ್ ವಾದ ಮಂಡನೆ ಬಳಿಕ ತಾವು ವಾದ ಮಂಡಿಸುವುದಾಗಿ ಕೋರ್ಟ್‌ಗೆ ತಿಳಿಸಿದರು. ಆಗ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಎಲ್ಲರ ವಾದವನ್ನು ವಿವರವಾಗಿ ಆಲಿಸಬೇಕಿದೆ. ಬೇಗ ವಾದ ಮಂಡನೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಬಳಿಕ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 9ರ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಲಾಯಿತು. ಅಂದು ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ಸೆಪ್ಟೆಂಬರ್ 12ರಂದು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ. ಸೆಪ್ಟೆಂಬರ್ 12ರಂದು ವಾದವನ್ನು ಸಂಪೂರ್ಣವಾಗಿ ಮುಗಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ.
ಕೆ. ಜಿ. ರಾಘವನ್ ವಾದ ಮಂಡನೆ ಮಾಡುವಾಗ ಸರ್ಕಾರವೇ ಈ ಪ್ರಕರಣದಲ್ಲಿ ತನಿಖೆ ಅಗತ್ಯವಿದೆ ಎಂದು ಭಾವಿಸಿ ಆಯೋಗ ರಚನೆ ಮಾಡಿದೆ. ಆದ್ದರಿಂದ ರಾಜ್ಯಪಾಲರು 17ಎ ಅಡಿ ಅನುಮತಿ ನೀಡಿರುವುದು ಸರಿ ಇದೆ. ಈ ಹಂತದಲ್ಲಿ ತನಿಖೆಯನ್ನು ತಡೆಹಿಡಿಯಬಾರದು ಎಂದು ವಾದಿಸಿದರು.
ಮುಖ್ಯಮಂತ್ರಿಗಳ ಪತ್ನಿಗೆ ಬೇಕಾದಂತೆ ನಿಯಮಗಳನ್ನು ಬದಲಾಯಿಸಿಕೊಳ್ಳಲಾಗಿದೆ. 2017ರಲ್ಲಿ 50:50 ಕೊಡಲು ನಿರ್ಣಯ ಮಾಡಲಾಗಿತ್ತು. ಆಗ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು. ಈ ಪ್ರಕರಣ ಮುಖ್ಯಮಂತ್ರಿಗಳಿಗೆ ಹೇಗೆ ಸಂಬಂಧಿಸಿದೆ ಎಂದು ಕೇಳುತ್ತಿದ್ದೀರಿ. ಸಂಬಂಧ ಇಲ್ಲಿದೆ ಎಂದು ವಾದದಲ್ಲಿ ಉಲ್ಲೇಖಿಸಿದರು.
ಅಂತಿಮವಾಗಿ ಕೋರ್ಟ್ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ಆಗಸ್ಟ್ 19ರ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿ, ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 9ರ ಮಧ್ಯಾಹ್ನಕ್ಕೆ ಮುಂದೂಡಿಕೆ ಮಾಡಿತು. ಸಿದ್ದರಾಮಯ್ಯ ಸಲ್ಲಿಕೆ ಮಾಡಿರುವ ಅರ್ಜಿಯ ಕುರಿತು ಆ. 19, 29, 31 ಮತ್ತು ಸೆಪ್ಟೆಂಬರ್ 2 ಸೇರಿ ನಾಲ್ಕು ದಿನಗಳ ಕಾಲ ಕರ್ನಾಟಕ ಹೈಕೋರ್ಟ್‌ನಲ್ಲಿ ಸುಧೀರ್ಘ ವಿಚಾರಣೆ ನಡೆದಿದೆ.












Click it and Unblock the Notifications