Muda scam: ಕೇಜ್ರಿವಾಲ್‌ಗೆ ಆದಂತೆ ಸಿದ್ದರಾಮಯ್ಯರಿಗೂ ಆಗುತ್ತಿದೆ- ಕೈ ನಾಯಕರ ಪ್ರತಿಕ್ರಿಯೆ
ಚಿಕ್ಕಮಗಳೂರು ಸೆಪ್ಟೆಂಬರ್ 24: ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಪ್ರಬಲ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿದೆ. ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದ್ದು, ರಾಜೀನಾಮೆಗೆ ವಿರೋಧ ಪಕ್ಷ ಬಿಜೆಪಿ ಒತ್ತಾಯಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೌರಾಡಳಿತ ಸಚಿವ ರಹೀಂ ಖಾನ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೇಸ್ ನಮ್ಮ ಪರ ಆಗುತ್ತೆಂಬ ವಿಶ್ವಾಸ ಇತ್ತು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರದ್ದು ಯಾವುದೇ ಪಾತ್ರವಿಲ್ಲ. ನ್ಯಾಯಾಲಯದಲ್ಲಿ ಆದೇಶವಾಗಿದೆ. ನಾವು ಕೋರ್ಟ್ ಬಗ್ಗೆ ಮಾತನಾಡುವುದು ಸರಿಯಲ್ಲ' ಎಂದು ಹೇಳಿದರು.

'ಆದರೆ ಮುಂದೆ ಡಬಲ್ ಬೆಂಚ್ ಇದೆ, ನಾಳೆ ಡಬಲ್ ಬೆಂಚ್ ನಲ್ಲಿ ನಮ್ಮವರು ಮನವಿ ಸಲ್ಲಿಸುತ್ತಾರೆ. ಸಿಎಂ ಸಿದ್ದರಾಮಯ್ಯನವರು 100% ಕರೆಕ್ಟ್ ಇದ್ದಾರೆ. ಅದು ಎಲ್ಲರಿಗೂ ಗೊತ್ತಿದೆ. ಆದರೂ ಈ ರೀತಿ ಜಡ್ಜ್ ಮೆಂಟ್ ಆಗಿದೆ' ಎಂದು ಸಚಿವ ರಹೀಂ ಖಾನ್ ಅವರು ಬೇಸರ ವ್ತಕ್ತಪಡಿಸಿದರು.
ಇನ್ನೂ ಈ ಬಗ್ಗೆ ಮುಂದುವರೆದು ಮಾತನಾಡಿದ ಅವರು, 'ದೆಹಲಿಯಲ್ಲಿ ಸಿಎಂ ಕೇಜ್ರಿವಾಲ್‌ಗೂ ಇದೇ ರೀತಿ ಆಗಿತ್ತು. ಸುಪ್ರಿಂ ಕೋರ್ಟ್‌ನಲ್ಲಿ ಅವರಿಗೆ ನ್ಯಾಯ ಸಿಕ್ಕಿತ್ತು. ನಮಗೂ ಡಬಲ್ ಬೆಂಚ್ ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಬರಲ್ಲ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ 'ಯಡಿಯೂರಪ್ಪನವರ ಕೇಸ್ ಬೇರೆ, ಸಿದ್ದು ಕೇಸ್ ಬೇರೆ. ರಾಜೀನಾಮೆ ಪ್ರಶ್ನೆಯೇ ಬರಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದಿಲ್ಲ' ಎಂದು ಚಿಕ್ಕಮಗಳೂರಿನಲ್ಲಿ ಸಚಿವ ರಹೀಂ ಖಾನ್ ಹೇಳಿದರು.
ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಪ್ರತಿಕ್ರಿಯೆ
ಇನ್ನೂ ಹೈಕೋರ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ತರೀಕೆರೆ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದರು. 'ವಿಷಯ ಕೇಳಿ ಒಂದು ನಿಮಿಷ ತಲೆಯಲ್ಲಿ ಚಕ್ರ ಬಂದಂತೆ ಆಯ್ತು, ಆಘಾತಕಾರಿ ವಿಷಯ ಇದು. ನಾವೆಲ್ಲಾ ಗೌರವಯುತವಾಗಿದ್ವಿ, ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇತ್ತು. ಏನೋ ತಪ್ಪಾಗಿದೆ ಎಂದು ನಮಗೆ ಅನ್ನಿಸಿದೆ. ಹಗರಣದಲ್ಲಿ ಸಿದ್ದರಾಮಯ್ಯನವರದ್ದು ಯಾವುದೇ ಪಾತ್ರ ಇಲ್ಲ' ಎಂದು ಹೇಳಿದರು.
ಗೌವರ್ನರ್ ಒತ್ತಡಕ್ಕೆ ಮಣಿದು ಹೀಗೆ ಮಾಡಿದ್ದಾರೆ. ಕೋರ್ಟ್ ನ್ಯಾಯಯುತವಾಗಿ ಪೂರ್ಣವಾಗಿ ಪರಿಶೀಲಿಸಿಲ್ಲ ಅನ್ನೋದು ನನ್ನ ಭಾವನೆ. ನಮಗೆ ಮುಂದಿನ ದಿನಗಳಲ್ಲಿ ನ್ಯಾಯ ಸಿಕ್ಕೇ ಸಿಗುತ್ತೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರದ್ದು ಎಳ್ಳಷ್ಟು ಪಾತ್ರವಿಲ್ಲ ಎಂದು ಚಿಕ್ಕಮಗಳೂರು ತರೀಕೆರೆ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ಸಿದ್ಧರಾಮಯ್ಯ ರಾಜೀನಾಮೆಗೆ ಬಿವೈ ರಾಘವೇಂದ್ರ ಒತ್ತಾಯ
ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ತೀರ್ಪು ಬಂದಿದೆ. ಕಾನೂನು ಎಲ್ಲರಿಗೂ ಒಂದೇ ಎಂಬುದು ಇದರಿಂದ ಗೊತ್ತಾಗಿದೆ. ಮುಖ್ಯಮಂತ್ರಿಗಳ ವಿರುದ್ಧ ನ್ಯಾಯಾಲಯ ಒಪ್ಪಿಗೆ ನೀಡಿದೆ. ಸಾಮಾನ್ಯ ವ್ಯಕ್ತಿಗೂ ಒಂದೇ, ರಾಜಕೀಯ ವ್ಯಕ್ತಿಗೂ ಒಂದೇ. ಸಿದ್ಧರಾಮಯ್ಯನವರು ಅಧಿಕಾರದಿಂದ ದೂರ ಇರಬೇಕು. ನೈತಿಕ ಹೊಣೆ ಹೊರಬೇಕಾದ ಪರಿಸ್ಥಿತಿ ನಿರ್ಮಾಣವಾಗಬೇಕು. ರಾಜಿನಾಮೆ ನೀಡಿ ವಿಚಾರಣೆಗೆ ಒಳಗಾಗಬೇಕು. ಬಹಳ ದಿನಗಳಿಂದ ತಪ್ಪು ಮಾಡಿಯೇ ಇಲ್ಲ ಎಂದು ಸಿದ್ಧರಾಮಯ್ಯ ಹೇಳುತ್ತಿದ್ದರು. ಆದರೆ ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡಬೇಕು. ದೇವರಲ್ಲಿ ನಾನು ಪ್ರಾರ್ಥನೆ ಸಲ್ಲಿಸುತ್ತೇನೆ, ಆರೋಪ ಮುಕ್ತರಾಗಿ ಸಿದ್ದರಾಮಯ್ಯ ಅವರು ಬರಲಿ ಎಂದು ಒತ್ತಾಯಿಸಿದರು.
ಇನ್ನೂ ಇಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ 10 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಇನ್ನೂ ಗುರುವಾರ ಮಧ್ಯಾಹ್ನ 12.30ಕ್ಕೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯನ್ನು ಸಿದ್ದರಾಮಯ್ಯ ನಡೆಸಲಿದ್ದಾರೆ. ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಸಚಿವರು ಸಿಎಂ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ. ಮುಂದಿನ ಬೆಳವಣಿಗೆಗಳು ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications