ಕರ್ನಾಟಕ ಚುನಾವಣೆ; ಹೋಟೆಲ್ ಮಾಲೀಕರು, ರಾಜಕೀಯ ಪಕ್ಷಗಳಿಗೆ ಸೂಚನೆಗಳು
ಬೆಂಗಳೂರು, ಏಪ್ರಿಲ್ 14; ಕರ್ನಾಟಕದಲ್ಲಿ ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಿದೆ. ಮೇ 10ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಅಲ್ಲದೇ ಅಭ್ಯರ್ಥಿಗಳು, ಅವರ ಬೆಂಬಲಿಗರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳು, ಹೋಟೆಲ್ ಮಾಲೀಕರ ಜೊತೆ ಸಭೆ ನಡೆಸಿದರು.
ಮಾರ್ಚ್ 29ರಂದು ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆಯೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದ್ದರಿಂದ ರಾಜಕೀಯ ಪಕ್ಷಗಳು, ಹೋಟೆಲ್ ಮಾಲೀಕರಿಗೆ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿ, ಆ ಕುರಿತು ಮಾಹಿತಿಗಳನ್ನು ಚುನಾವಣಾಧಿಕಾರಿಗಳು ನೀಡುತ್ತಿದ್ದಾರೆ.

ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಪ್ರಚಾರಕ್ಕೆ ಅಭ್ಯರ್ಥಿ ಆಗಮಿಸುವಾಗ ಪಟಾಕಿ ಸಿಡಿಸಲು ಸಹ ಅವಕಾಶವಿಲ್ಲ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕೇಸ್ ದಾಖಲಿಸಲಾಗುತ್ತದೆ.
ಸಮಾವೇಶ, ಮೆರವಣಿಗೆಗಳಿಗೆ ನಿಯಮಾನುಸಾರ ಅನುಮತಿ ಪಡೆಯಬೇಕು. ಅನುಮತಿ ರಹಿತ ಹಾಗೂ ಹೆಚ್ಚುವರಿ ವಾಹನಗಳಿದ್ದಲ್ಲಿ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಮೆರವಣಿಗೆಗೆ ಅರ್ಜಿ ಸಲ್ಲಿಸುವಾಗ, ಮೆರವಣಿಗೆಯ ಪ್ರಾರಂಭ ಹಾಗೂ ಮುಕ್ತಾಯದ ಸ್ಥಳ ಹಾಗೂ ಸಮಯವನ್ನು ನಮೂದಿಸಿ ಅನುಮತಿ ಪಡೆಯಬೇಕು. ಅನುಮತಿಯಂತೆಯೇ ನಿಯಮ ಹಾಗೂ ಷರತ್ತುಗಳನ್ನು ಪಾಲಿಸಬೇಕು ಎಂದು ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಲಾಗಿದೆ.
ಪ್ರಚಾರಕ್ಕೆ ನಿರ್ಬಂಧಗಳು;
ಚುನಾವಣಾ ಪ್ರಚಾರ ನಡೆಸುವ ರಾಜಕೀಯ ಪಕ್ಷ, ಅಭ್ಯರ್ಥಿಗಳು ರಾತ್ರಿ 10ರ ಬಳಿಕ ಪ್ರಚಾರ ನಡೆಸುವಂತಿಲ್ಲ. ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಪ್ರಚಾರ ಕೈಗೊಂಡರೆ ಇಂತಹ ಪ್ರಕರಣಗಳ ವಿರುದ್ಧ ಚುನಾವಣಾಧಿಕಾರಿಗಳು ಕ್ರಮಗಳನ್ನು ಕೈಗೊಳ್ಳುತ್ತಾರೆ.

ಪ್ರತಿ ಅಭ್ಯರ್ಥಿಗೆ ಗರಿಷ್ಟ ಚುನಾವಣಾ ವೆಚ್ಚ 40 ಲಕ್ಷಗಳನ್ನು ನಿಗದಿಪಡಿಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಚಾರ ಚಟುವಟಿಕೆಗಳನ್ನು ನಡೆಸಬೇಕು. ಆಯೋಗದ ಎಫ್‍ಎಸ್‍ಟಿ, ವಿಎಸ್‍ಟಿ, ಫ್ಲೈಯಿಂಗ್ ಸ್ಕ್ವಾಡ್‍ಗಳು ಎಲ್ಲ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದು, ಅಭ್ಯರ್ಥಿಯ ಚುನಾವಣಾ ವೆಚ್ಚದ ಲೆಕ್ಕವನ್ನು ಇಟ್ಟುಕೊಳ್ಳುತ್ತವೆ. ನಿಗದಿತ ಮೊತ್ತಕ್ಕಿಂತ ಹೆಚ್ಚು ವೆಚ್ಚವಾದಲ್ಲಿ, ಅಂತಹ ಅಭ್ಯರ್ಥಿಗಳೇ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ವಿಷಯವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ಅಭ್ಯರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ.
ಹೋಟೆಲ್‌ಗಳಿಗೆ ಸೂಚನೆಗಳು;
ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಅಕ್ರಮಗಳಿಗೆ ಸಹಕರಿಸದಂತೆ ಹೋಟೆಲ್ ಮಾಲೀಕರಿಗೆ ಸೂಚನೆ ಕೊಡಲಾಗಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಗರು ಗುಂಪು ಗುಂಪಾಗಿ ಹೋಟೆಲ್‌ಗಳಿಗೆ ಭೇಟಿ ನೀಡಿದಾಗ ಮತ್ತು ಅಭ್ಯರ್ಥಿಗಳ ಪರವಾಗಿ ಯಾರೇ ಚೀಟಿ ಅಥವಾ ಟೋಕನ್ ನೀಡಿ ಊಟ, ಉಪಹಾರ ನೀಡುವಂತೆ ಕೋರಿದಲ್ಲಿ ಅಂತಹವರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕಿದೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪ್ರಚಾರಕ್ಕೆ ತಗಲುವ ಎಲ್ಲಾ ವೆಚ್ಚಗಳನ್ನು ಚುನಾವಣಾ ವೆಚ್ಚ ವೀಕ್ಷಕರು ಅಭ್ಯರ್ಥಿಯ ಲೆಕ್ಕದಲ್ಲಿ ದಾಖಲು ಮಾಡುತ್ತಾರೆ. ಆದ್ದರಿಂದ ಊಟ, ಉಪಹಾರದ ವೆಚ್ಚಗಳನ್ನು ಸಹ ಅಭ್ಯರ್ಥಿಗಳ ಲೆಕ್ಕದಲ್ಲಿ ದಾಖಲಿಸಬೇಕಾಗುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕೈಗೊಳ್ಳುವ ವೆಚ್ಚಗಳ ಬಗ್ಗೆ ನಿಗಾ ವಹಿಸಲಾಗುತ್ತಿದ್ದು ಹೋಟೆಲ್ ಮಾಲೀಕರು ಸಹರಿಸಬೇಕು ಎಂದು ಮನವಿ ಮಾಡಲಾಗಿದೆ.
ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತದಾರರ ಸಹಾಯವಾಣಿ/ ಕಂಟ್ರೋಲ್ ರೂಂ 1950 ಸ್ಥಾಪನೆ ಮಾಡಲಾಗಿದೆ. ಜನರು ಸಹ ಚುನಾಣಾ ಅಕ್ರಮಗಳ ಕುರಿತು C-VIGIL ಅಪ್ಲಿಕೇಶನ್ ಮೂಲಕ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications