ಸತ್ಯಹರಿಶ್ಚಂದ್ರ ಸತ್ತ ಮೇಲೆ ಇಬ್ಬರು ಮಾಜಿ ಸಿಎಂ ಗಳು ಸತ್ಯಹರಿಶ್ಚಂದ್ರರು: ಹೆಚ್.ವಿಶ್ವನಾಥ್ ವ್ಯಂಗ್ಯ
ಮೈಸೂರು, ಆಗಸ್ಟ್ 05: ಸತ್ಯಹರಿಶ್ಚಂದ್ರ ಸತ್ತ ಮೇಲೆ ಇಬ್ಬರೇ ಸತ್ಯಹರಿಶ್ಚಂದ್ರರು ಇರುವುದು. ಒಬ್ಬರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಇನ್ನೊಬ್ಬರು ಬಸವರಾಜ ಬೊಮ್ಮಾಯಿ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಇಬ್ಬರೂ ಮುಖ್ಯಮಂತ್ರಿ ಆಗಿದ್ದವರು. ನೀವು ಆಗ ಮಾಡಿದ ಅದ್ವಾನಗಳನ್ನ ಜನ ಈಗಲೂ ಅನುಭವಿಸ್ತಿದ್ದಾರೆ. ಕುಮಾರಸ್ವಾಮಿ ಅವರೇ ಆ ಪೆನ್ ಡ್ರೈವ್ ಏನಾಯ್ತು..? ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಅವರೇ ಏನೇನೋ ಆರೋಪ ಮಾಡ್ತೀರಿ. ಬಾಯಿಗೆ ಬಂದಂತೆ ಮಾತ್ನಾಡಬೇಡಿ, ಆದರೆ, ಮಾಡಿದ ಆರೋಪಗಳಲ್ಲಿ ಯಾವುದನ್ನ ಸಾಬೀತು ಮಾಡಿದ್ದೀರಿ..? ಎಂದು ಪ್ರಶ್ನಿಸಿದ ಅವರು, ನೀವು ಮುಖ್ಯಮಂತ್ರಿ ಆಗಿದ್ದವರು, ಮಾತಿನಿಂದ ನಿಮ್ಮ ಘನತೆ ಕಡಿಮೆ ಆಗುತ್ತಿದೆ ಎಂದು ಕುಮಾರಸ್ವಾಮಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆಗಳಿಗೆ SCSP-TSP ಹಣ ಬಳಕೆ ವಿಚಾರವಾಗಿ ಮಾತನಾಡಿದ ಅವರು, ಅಗತ್ಯ ಇರುವ ಕಡೆಗೆ ಅನುದಾನ ಬಳಸಿಕೊಳ್ಳಲು ಅಧಿಕಾರವಿದೆ. ಅನುದಾನ ಬಳಕೆಗೆ ಸರ್ಕಾರಕ್ಕೆ ಅನುವಂಶೀಯವಾದ ಅಧಿಕಾರವಿದೆ. ಅದನ್ನೇ ಬಿಜೆಪಿ ಹಾಗೂ ಜೆಡಿಎಸ್ ನವರು ದೊಡ್ಡದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ದಲಿತರಿಗೆ ಏನು ಮಾಡಿದರು..? ಎಂದು ಪ್ರಶ್ನಿಸುವ ಮೂಲಕ, ರಾಜ್ಯ ಸರ್ಕಾರದ ನಿಲುವನ್ನ ಹೆಚ್ ವಿಶ್ವನಾಥ್ ಸಮರ್ಥನೆ ಮಾಡಿಕೊಂಡರು.
ನಾನೂ ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದೆ. ಮೈತ್ರಿ ವೇಳೆ 12 ಜನ ಸಚಿವ ಸ್ಥಾನ ಸಿಕ್ಕಿತ್ತು, ಇದರಲ್ಲಿ 7 ಸಚಿವರು ಕುಮಾರಸ್ವಾಮಿ ಮನೆಯವರೇ ಆಗಿದ್ದರು. ಬಂಡೆಪ್ಪ ಕಾಶೆಂಪೂರ್ ಒಬ್ಬ ಕುರುಬ, ಇನ್ನಿಬ್ಬರು ಲಿಂಗಾಯತರು. 12ರ ಪೈಕಿ 2 ಸಚಿವ ಸ್ಥಾನಗಳು ಖಾಲಿಯಾಗಿಯೇ ಇತ್ತು. ಅದನ್ನ ದಲಿತರು ಹಾಗೂ ಮುಸ್ಲಿಮರಿಗೆ ಕೊಡಿ ಅಂತ ಕೇಳಿದ್ದೆ. ಆದರೆ, ಖಾಲಿ ಬಿಟ್ಟರೇ ಹೊರತು ದಲಿತರಿಗೆ ಸಚಿವ ಸ್ಥಾನ ಸಿಗಲಿಲ್ಲ. ಅಂತಹವರು ಈಗ ದಲಿತರ ಉದ್ಧಾರದ ಬಗ್ಗೆ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು.












Click it and Unblock the Notifications