ಬೆಂಗಳೂರಿನ ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಡೆಡ್‌ಲೈನ್ ಫಿಕ್ಸ್ ಮಾಡಿದ ಸಚಿವರು!
ಬೆಂಗಳೂರು: ಸಣ್ಣ ಕೆಲಸ ಇದ್ದರೂ ಸರ್ಕಾರಿ ಕಚೇರಿಗೆ ಅಲೆದಾಡಿ, ಅಲೆದಾಡಿ ಸಾಮಾನ್ಯ ಜನರು ತೀವ್ರವಾಗಿ ಪರದಾಡುತ್ತಾರೆ. ಅದರಲ್ಲೂ ಈ ಮೊದಲು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಅಂದ್ರೆ, ತಿಂಗಳು ತನಕ ಅಲೆಯುವ ಸ್ಥಿತಿ ಇತ್ತು. ಆದ್ರೆ ಇದೀಗ ಎಲ್ಲವೂ ಮಾಯವಾಗಿ, ದಿನದಲ್ಲಿ ಇಲ್ಲ ಗಂಟೆಗಳ ಲೆಕ್ಕದಲ್ಲಿ ಕೆಲಸ ಮುಗಿಯುತ್ತಿದೆ. ಈ ನಡುವೆ ಮತ್ತೊಮ್ಮೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಬಿಸಿ ಮುಟ್ಟಿಸಿದ್ದಾರೆ.
ಅಂದಹಾಗೆ ಬೆಂಗಳೂರು ಡಿಸಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ಶೀಘ್ರ ಇತ್ಯರ್ಥಗೊಳಿಸಿ, ಜನರಿಗೆ ನೆಮ್ಮದಿ ನೀಡಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಖಡಕ್ ಸೂಚನೆ ಕೂಡ ನೀಡಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ಗ್ರಾಮೀಣ ಜಿಲ್ಲಾಧಿಕಾರಿಗಳಾದ ಶವಶಂಕರ್, ಪ್ರಾದೇಶಿಕ ಆಯುಕ್ತ ಆದಿತ್ಯ ಬಿಶ್ವಾಸ್ & ಕಂದಾಯ ಇಲಾಖೆ ಆಯುಕ್ತ ಸುನೀಲ್ ಕುಮಾರ್ ಹಾಗೂ ಎರಡೂ ಜಿಲ್ಲೆಗಳ ಉಪವಿಭಾಗಾಧಿಕಾರಿಗಳ ಜೊತೆಗೆ ಇಂದು ವಿಕಾಸಸೌಧದಲ್ಲಿ ಮಾಸಿಕ ಪ್ರಗತಿ ಪರಿಶೀಲನೆ ಮೀಟಿಂಗ್ ನಡೆಸಿದರು ಸಚಿವ ಕೃಷ್ಣ ಬೈರೇಗೌಡ.

ಅಧಿಕಾರಿಗಳ ವಿರುದ್ಧ ಸಚಿವರು ಗರಂ
ಸಭೆಯಲ್ಲಿ ಕಳೆದ 4 ತಿಂಗಳಿಂದ ಯಾವ ಪ್ರಮಾಣದಲ್ಲಿ ತಕರಾರು ಪ್ರಕರಣ ಇತ್ಯರ್ಥವಾಗುತ್ತಿದೆ ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಇದೇ ವೇಳೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿರುವ ಸಚಿವ ಕೃಷ್ಣ ಬೈರೇಗೌಡ, ಕಳೆದ 4 ತಿಂಗಳಲ್ಲಿ ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗಿದೆ. 3 ಬಾರಿ ಜಿಲ್ಲಾಧಿಕಾರಿ ಸಭೆ ನಡೆಸಲಾಗಿದೆ. ಅಲ್ಲದೆ, ಜಿಲ್ಲೆಗಳಿಗೂ ಭೇಟಿ ನೀಡಿ ಸಭೆ ನಡೆಸಲಾಗಿದೆ. ಈ ವೇಳೆ ತಕರಾರು ಕೇಸ್ ಶೀಘ್ರ ಇತ್ಯರ್ಥಕ್ಕೆ ಸೂಚಿಸಲಾಗಿದೆ. ಆದರೂ, ಈ ವಿಚಾರದಲ್ಲಿ ನಿರೀಕ್ಷಿತ ಪ್ರಗತಿ ಕಾಣದಿರುವುದು ಏಕೆ? ಎಂದು ಸಚಿವರು ಪ್ರಶ್ನಿಸಿದರು.
ಜನರ ಸಂಕಷ್ಟ ಅರ್ಥ ಆಗಲ್ವಾ?
ಬೆಂಗಳೂರು ನಗರ, ಗ್ರಾಮೀಣ ಭಾಗದಲ್ಲಿ ಮಾತ್ರ 18000 ಕ್ಕೂ ಹೆಚ್ಚು ತಕರಾರು ಪ್ರಕರಣಗಳು ಬಾಕಿ ಇವೆ. ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಂತೂ ಯಾವುದೇ ಪ್ರಗತಿಯು ಕಾಣ್ತಿಲ್ಲ. ಒಟ್ಟಾರೆ ಪ್ರಕರಣ ಪೈಕಿ ಈ ನ್ಯಾಯಾಲಯಗಳಲ್ಲೇ 16440 ಪ್ರಕರಣ ಬಾಕಿ ಇವೆ. ಇಷ್ಟೊಂದು ಪ್ರಕರಣ ಬಾಕಿ ಉಳಿಯಲು ಕಾರಣವೇನು? 5 ವರ್ಷಕ್ಕೂ ಹಿಂದಿನ ಪ್ರಕರಣಗಳು ಈಗ ಕೂಡ ಇತ್ಯರ್ಥವಾಗದಿದ್ದರೆ ಜನರ ಪಾಡು ಏನಾಗಬೇಕು? ಅವರೇನು ಪ್ರತಿದಿನ ಡಿಸಿ, ಎಸಿ ಸೇರಿದಂತೆ ತಹಶೀಲ್ದಾರ್ ಕಚೇರಿಗಳಿಗೆ ಅಲೆಯುತ್ತಲೇ ಇರಬೇಕೆ? ಇದಕ್ಕೆ ಪರಿಹಾರವಾದರೂ ಏನು ಎಂದು ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಜನರ ಸಮಸ್ಯೆ ಬಗೆಹರಿಸಲು ಡೆಡ್‌ಲೈನ್
ಅಲ್ಲದೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ತಕರಾರು ಪ್ರಕರಣಗಳ ಶೀಘ್ರ ಇತ್ಯರ್ಥಗೊಳಿಸಿ ಜನರ ಸಮಸ್ಯೆಗಳ ನಿವಾರಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ಈ ಕೇಸ್‌ಗಳನ್ನ ಶೀಘ್ರ ವಿಲೇವಾರಿ ಮಾಡಬೇಕು ಎಂದರು. ಅಗತ್ಯ ಇದ್ದರೆ ವಿಶೇಷ ಜಿಲ್ಲಾಧಿಕಾರಿಗಳಿಗೆ ತಕರಾರು ಪ್ರಕರಣಗಳ ಇತ್ಯರ್ಥದ ಜವಾಬ್ದಾರಿ ವಹಿಸಿ, ಮುಂದಿನ ಏಪ್ರಿಲ್ ಒಳಗಾಗಿ ಶೇ.50 ರಷ್ಟು ಕೇಸ್ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಎಂದರು. ಮುಂದಿನ ತಿಂಗಳ ಸಭೆಯಲ್ಲಿ ಸಕಾರಾತ್ಮಕ ಫಲಿತಾಂಶ ನೀಡಿ ಎಂದು ಇದೇ ವೇಳೆ, ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಒಟ್ನಲ್ಲಿ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನ ತಂದಿರುವ ಸಚಿವ ಕೃಷ್ಣ ಬೈರೇಗೌಡ, ಈಗ ಮತ್ತಷ್ಟು ಸುಧಾರಣೆ ತರಲು ಮುಂದಾಗಿದ್ದಾರೆ. ಅದರಲ್ಲೂ ಸಾಮಾನ್ಯ ಜನರ ಸಮಸ್ಯೆ ಬಗೆಹರಿಸಲು ಸಚಿವ ಕೃಷ್ಣ ಬೈರೇಗೌಡ ಅವರು ಆದ್ಯತೆ ನೀಡುತ್ತಿದ್ದಾರೆ. ಈ ಮೂಲಕ ಕಂದಾಯ ಇಲಾಖೆಯಲ್ಲಿ ಜನ ಸಾಮಾನ್ಯರಿಗೆ ತೊಂದರೆ ಆಗಬಾರದು ಎಂಬ ಎಚ್ಚರಿಕೆ ಸಂದೇಶವನ್ನು ಅಧಿಕಾರಿಗಳಿಗೆ ರವಾನಿಸಿದ್ದಾರೆ. ಹೀಗಾಗಿ ಅಧಿಕಾರಿಗಳೂ ಜನರ ಸಮಸ್ಯೆ ಬಗೆಹರಿಸಲು ಮತ್ತಷ್ಟು ಅಲರ್ಟ್ ಆಗಬೇಕಿದೆ.












Click it and Unblock the Notifications