KPSC; ನೇಮಕಾತಿಗೆ ಇನ್ನು ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು
ಬೆಂಗಳೂರು, ಆಗಸ್ಟ್ 02: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯಲ್ಲಿ ಸಂಪೂರ್ಣವಾಗಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿದೆ. ಈ ಹಿಂದೆ ನಿಯಮಗಳನ್ನು ರೂಪಿಸುವಂತೆ ನಿರ್ದೇಶಿಸಿದ್ದ ಹೈಕೋರ್ಟ್ ಇದೀಗ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಹೇಳಿರುವುದರಿಂದ ಸರ್ಕಾರ ಇನ್ನು ಮುಂದೆ ಮನಸ್ಸಿಗೆ ಬಂದಂತೆ ನೇಮಕ ಮಾಡುವಂತಿಲ್ಲ. ಬದಲಿಗೆ ಸುಪ್ರೀಂಕೋರ್ಟ್ ಆದೇಶ ಅನುಸರಿಸಬೇಕಾಗುತ್ತದೆ.
ಕೆಪಿಎಸ್‌ಸಿ ಅಧ್ಯಕ್ಷ ಮತ್ತು 11 ಮಂದಿ ಸದಸ್ಯರ ನೇಮಕಾತಿ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾಮಾಜಿಕ ಕಾರ್ಯಕರ್ತ ಟಿ. ನರಸಿಂಹ ಮೂರ್ತಿ ಮತ್ತು ಶಶಿಪ್ರಸಾದ್ ಗಾಂಧಿ ಸಲ್ಲಿಸಿದ್ದ ಪ್ರತ್ಯೇಕ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠ ಆದೇಶ ನೀಡಿದೆ.

ಸುಪ್ರೀಂ ಮಾರ್ಗಸೂಚಿ ಪಾಲನೆ: ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳು ಉನ್ನತ ಮಟ್ಟದ ಮತ್ತು ಅತಿಸೂಕ್ಷ್ಮ ಸಾಂವಿಧಾನಿಕ ಹುದ್ದೆಗಳಾಗಿವೆ. ಅವುಗಳಿಗೆ ನೇಮಕ ಮಾಡುವ ವೇಳೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಆಕ್ಷೇಪಣೆ, ಆರೋಪ ಮತ್ತು ನಿರಂಕುಶತ್ವ ಮತ್ತು ಸ್ವೇಚ್ಛೆಯಿಂದ ಅಧಿಕಾರ ಬಳಕೆ ಮಾಡುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದಿದೆ.
ಲೋಕಸೇವಾ ಆಯೋಗದ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಪ್ರಕ್ರಿಯೆ ಕುರಿತಂತೆ ಪಂಜಾಬ್ ಸರ್ಕಾರ ಮತ್ತು ಸಲೀಲ್ ಸಬ್‌ಲೋಕ್ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳು ಪಾಲನೆಯಾಗುವಂತೆ ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ ನಡೆಸಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ನಿರ್ದೇಶಿಸಿದೆ.
ಶೋಧನಾ ಸಮಿತಿ ಉಲ್ಲೇಖವಿಲ್ಲ: ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ನಿರ್ದಿಷ್ಟ ನಿಯಮಗಳಿಲ್ಲ. ಆ ನಿಯಮಗಳನ್ನು ರೂಪಿಸುವವರೆಗೆ ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಹೋಟಾ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಮಾಗಸೂರ್ಚಿಗಳನ್ನು ಪಾಲಿಸಬೇಕು. ಮಾರ್ಗಸೂಚಿಯಂತೆ ಅಧ್ಯಕ್ಷರ ನೇಮಕಾತಿ ಹಾಗೂ ಶೋಧನಾ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂಬ ಅರ್ಜಿದಾರರ ಮನವಿ ಕುರಿತು ಹೈಕೋರ್ಟ್ ಯಾವುದೇ ನಿರ್ದೇಶನವನ್ನು ನೀಡಿಲ್ಲ.
"ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ವೇಳೆ ಶೋಧನಾ ಸಮಿತಿ ರಚನೆ ಮಾಡಬೇಕು ಎಂಬ ಪಿ. ಸಿ. ಹೋಟಾ ಸಮಿತಿಯ ಶಿಫಾರಸನ್ನು ಕೈ ಬಿಡಲು ರಾಜ್ಯ ಸಚಿವ ಸಂಪುಟವು 2013ರ ಆ.23ರಂದು ನಿರ್ಣಯ ಕೈಗೊಂಡಿದೆ. ಇದರಿಂದ 2021ರಲ್ಲಿ ಶಿವಶಂಕರ ಎಸ್. ಸಾಹುಕಾರ್ ಅವರನ್ನು ಸದಸ್ಯರಾಗಿ ನಂತರ ಅವರನ್ನೇ ಅಧ್ಯಕ್ಷರಾಗಿ ಹಾಗೂ ಡಾ. ಚಂದ್ರಕಾಂತ್ ಡಿ. ಶಿವಕೇರಿ ಸೇರಿದಂತೆ 11 ಮಂದಿ ಸದಸ್ಯರನ್ನು ನೇಮಿಸಿದ ವೇಳೆ ಹೋಟಾ ಸಮಿತಿ ಮಾರ್ಗಸೂಚಿ ಅನುಸರಿಸಬೇಕಿತ್ತು ಎಂಬ ನಿಯಮ ಪ್ರಚಲಿತದಲ್ಲಿರಲಿಲ್ಲ. ಹಾಗಾಗಿ, ಕೆಪಿಎಸ್‌ಸಿ ಅಧ್ಯಕ್ಷರ ಹಾಗೂ ಸದಸ್ಯರ ನೇಮಕ್ಕೆ ಹೋಟಾ ಸಮಿತಿಯ ಮಾರ್ಗಸೂಚಿ ಪಾಲಿಸಬೇಕು ಮತ್ತು ನಿರ್ದಿಷ್ಟ ನಿಯಮ ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬ ಅರ್ಜಿದಾರರ ಮನವಿ ಪರಿಗಣಿಸಲು ಅಗತ್ಯವಿಲ್ಲವಾಗಿದೆ" ಆದೇಶದಲ್ಲಿನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ನಿರ್ದಿಷ್ಟ ನಿಯಮಗಳನ್ನು ರೂಪಿಸಬೇಕು. ಆ ನಿಯಮಗಳನ್ನು ರೂಪಿಸುವವರೆಗೆ ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಹೋಟಾ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಮಾಗಸೂರ್ಚಿಗಳನ್ನು ಪಾಲಿಸಬೇಕು ಎಂದು 2016ರಲ್ಲಿಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು.
ಆದರೆ, ಹೋಟಾ ಸಮಿತಿ ಮಾರ್ಗಸೂಚಿಯಂತೆ ಶೋಧನಾ ಸಮಿತಿ ರಚಿಸದೆ ಮತ್ತು ಯಾವುದೇ ನಿಯಮ ರೂಪಿಸದೆ ರಾಜ್ಯ ಸರ್ಕಾರವು ಕೆಪಿಎಸ್‌ಎಸಿಗೆ ಸದಸ್ಯರನ್ನು ನೇಮಿಸಿದೆ. ಹಾಗಾಗಿ, ಕಪಿಎಸ್‌ಸಿ ಸದಸ್ಯರನ್ನು ನೇಮಕಾತಿ ಆದೇಶ ರದ್ದುಪಡಿಸಬೇಕು. ಹೋಟಾ ಸಮಿತಿ ಅನುಸಾರ ಹೊಸದಾಗಿ ಸದಸ್ಯರನ್ನು ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬುದು ಅರ್ಜಿದಾರ ಮನವಿಯಾಗಿತ್ತು.












Click it and Unblock the Notifications