ಕರ್ನಾಟಕಕ್ಕೆ ಹಿನ್ನಡೆ; ಮಹದಾಯಿ ಯೋಜನೆಗೆ ನೀಡಿದ್ದ ಒಪ್ಪಿಗೆ ವಾಪಸ್
ಬೆಂಗಳೂರು, ಡಿಸೆಂಬರ್ 18 : ಮಹದಾಯಿ ಯೋಜನೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ಯೋಜನೆಗೆ ನೀಡಿದ್ದ ಒಪ್ಪಿಗೆಯನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ತಡೆ ಹಿಡಿದಿದೆ. ಗೋವಾ ರಾಜ್ಯದ ಒತ್ತಾಯದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕದ ಸುಮಾರು 814 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಮೊದಲು ಒಪ್ಪಿಗೆ ನೀಡಿತ್ತು. ಈಗ ಮಹದಾಯಿ ಯೋಜನೆಗೆ ನೀಡಿದ್ದ ಒಪ್ಪಿಗೆಗೆ ತಡೆ ನೀಡಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಹದಾಯಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಗೋವಾ ಕಾಂಗ್ರೆಸ್ ಸಹ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಇದರಿಂದಾಗಿ ಸಚಿವಾಲಯ ಯೋಜನೆಗೆ ತಡೆ ನೀಡಿದೆ.
ಮಹದಾಯಿ ವಿವಾದದ ಕುರಿತ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ವಿವಾದ ಬಗೆಹರಿಯುವ ತನಕ ನೀಡಿರುವ ಒಪ್ಪಿಗೆಯನ್ನು ತಡೆ ಹಿಡಿದಿರುವುದಾಗಿ ಕೇಂದ್ರ ಅರಣ್ಯ ಸಚಿವಾಲಯ ಹೇಳಿದೆ. 2019ರ ಅಕ್ಟೋಬರ್ 17ರಂದು ಸಚಿವಾಲಯ ಒಪ್ಪಿಗೆ ನೀಡಿತ್ತು.
ಯೋಜನೆಗೆ ನೀಡಿರುವ ಒಪ್ಪಿಗೆಯನ್ನು ಅಮಾತನುಗೊಳಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮಕ್ಕೆ ಮಾಹಿತಿ ನೀಡಲಾಗಿದೆ. ಸಚಿವಾಲಯದ ಒಪ್ಪಿಗೆ ಸಿಕ್ಕ ಬಳಿಕ ಕರ್ನಾಟಕದ ಜನರು ಸಂತಸ ಪಟ್ಟಿದ್ದರು. ಈಗ ಜನರು ಆಕ್ರೋಶಗೊಳ್ಳುವ ಸಾಧ್ಯತೆ ಇದೆ.
ಕರ್ನಾಟಕ ಸರ್ಕಾರ ಮಹದಾಯಿ ನದಿಯಿಂದ 5.5 ಟಿಎಂಸಿ ನೀರನ್ನು ಬಳಸಿಕೊಂಡು ಕಳಸಾ-ಬಂಡೂರಿ ನಾಲೆಗಳ ಮೂಲಕ ಮಲಪ್ರಭಾ ನದಿಗೆ ಹರಿಸಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದೆ.
ಆದೇಶದ ಪ್ರತಿ













Click it and Unblock the Notifications