ಮೂವರು ಮಾಜಿ ಸಿಎಂಗಳು ಸ್ಪರ್ಧೆ: ಗೆಲ್ತಾರಾ? ಸೋಲ್ತಾರಾ? - ಯಾರಿಗೆ ಎದುರಾಗಲಿದೆ ಸಂಕಷ್ಟ!
ಬೆಂಗಳೂರು, ಏಪ್ರಿಲ್ 15: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಮಾಡಿಕೊಂಡಿದ್ದು, ಸರ್ಕಾರ ರಚಿಸಿರುವ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರಿಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಹಲವು ಸಮರ್ಥ ನಾಯಕರನ್ನ ಕಣಕ್ಕಿಳಿಸಿದೆ.
ಹೌದು, ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಗೆಲ್ಲುವ ಕುದುರೆಯನ್ನ ಕಣಕ್ಕಿಳಿಸಿದ್ದು, ಈ ಬಾರಿ ಮೂವರು ಮಾಜಿ ಮುಖ್ಯಮಂತ್ರಿಗಳಿಗೆ ಟಿಕೆಟ್ ನೀಡುವ ಮೂಲಕ ಗೆಲ್ಲುವ ತಂತ್ರಗಾರಿಕೆಯನ್ನ ಹಾಕಿಕೊಂಡಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಬೆಳಗಾವಿ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಅವರನ್ನ ಕಣಕ್ಕಿಳಿಸಿದೆ.

ಬೆಳಗಾವಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರಗಳು ಬಿಜೆಪಿಗೆ ಪ್ರತಿಷ್ಠೆಯಾದ್ರೆ ಇತ್ತ ಮಂಡ್ಯ ಲೋಕಸಭಾ ಕ್ಷೇತ್ರದ ದಳಪತಿಗಳಿಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಹೀಗಾಗಿ ಅಳೆದು ತೂಗಿ ಬಿಜೆಪಿ ಹೈಕಮಾಂಡ್ ಮೂವರು ಮಾಜಿ ಮುಖ್ಯಮಂತ್ರಿಗಳನ್ನ ಕಣಕ್ಕಿಳಿಸಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಮಂಗಳ ಅಂಗಡಿ ಅವರು ಈ ಬಾರಿ ಟಿಕೆಟ್‌ಗಾಗಿ ಬಿಜೆಪಿ ಹೈಕಮಾಂಡ್ ಬಳಿ ಲಾಬಿ ನಡೆಸಿದ್ರು. ಅಲ್ಲದೇ ಹಲವು ಸಮೀಕ್ಷೆಯನ್ನ ನಡೆಸಿರುವ ಬಿಜೆಪಿ ಈ ಬಾರಿ ಮಂಗಳ ಅಂಗಡಿ ಗೆಲುವು ಅನುಮಾನ ಎನ್ನಲಾಗಿತ್ತು. ಇತ್ತ ಮಂಗಳ ಅಂಗಡಿಗೆ ಟಿಕೆಟ್ ನೀಡಿದ್ರೆ, ಈ ಕ್ಷೇತ್ರವನ್ನ ಕಾಂಗ್ರೆಸ್ ವಶಪಡಿಸಿಕೊಳ್ಳೆತ್ತೆ ಎನ್ನುವ ನಿಟ್ಟಿನಲ್ಲಿ ಲಿಂಗಾಯತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮತ್ತೆ ಸೋಲಿನ ಸುಳಿಯಲ್ಲಿ ಜಗದೀಶ್ ಶೆಟ್ಟರ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ರು, ಆದರೆ, ಈ ಬಾರಿ ಬೆಳಗಾವಿ ಕ್ಷೇತ್ರವನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ.
ಇತ್ತ ಕಾಂಗ್ರೆಸ್ ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅಭ್ಯರ್ಥಿಯಾಗಿದ್ದು, ಕ್ಷೇತ್ರದಲ್ಲಿ ಅತೀ ಹೆಚ್ಚಾಗಿ ಪಂಚಮಸಾಲಿ ಸಮುದಾಯದವರಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಕಾರ್ಡ್ ಪ್ಲೇ ಮಾಡಿದ್ದು, ಜಗದೀಶ್ ಶೆಟ್ಟರ್ ಗೆ ದೊಡ್ಡ ಸವಾಲ್ ಆಗಿದೆ. ಬೆಳಗಾವಿಯಲ್ಲಿ ಪಂಚಮದಾಲಿ ಮತಗಳು ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕೈ ಹಿಡಿಯುತ್ತಾ? ಮತ್ತೆ ಸೋಲಿನ ಸುಳಿಯಲ್ಲಿ ಜಗದೀಶ್ ಶೆಟ್ಟರ್ ಸಿಲುಕುತ್ತಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಇತ್ತ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಗೆಲುವು ಅಷ್ಟು ಸುಲಭದ ಮಾತಲ್ಲ, ಇತ್ತ ಲಕ್ಷ್ಮೀ ಹೆಬ್ಬಾಳ್ಕರ್ ವರ್ಚಸ್ಸು ದಿನದಿಂದ ದಿನ ಹೆಚ್ಚಾಗುತ್ತಿದ್ದು, ರಾಜಕೀಯ ಎದುರಾಳಿಯಾಗಿರುವ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಜೊತೆಗೆ ಕೈ ಜೋಡಿಸಿದ್ದಾರೆ. ಇತ್ತ ಜಗದೀಶ್ ಶೆಟ್ಟರ್ ಅವರ ಗೆಲುವು ಸಹ ಸುಲಭವಲ್ಲ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರನ ಗೆಲುವಿಗೆ ಡಿ ಕೆ ಶಿವಕುಮಾರ್ ಅವರು ವಿಶೇಷ ತಂತ್ರಗಾರಿಕೆಯನ್ನ ನಡೆಸಿದ್ದು, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆ ದೊಡ್ಡ ಅಗ್ನಿ ಪರೀಕ್ಷೆ ಎದುರಾಗಿದೆ.
ತವರು ಕ್ಷೇತ್ರದ ಜನತೆ ಬೊಮ್ಮಾಯಿ ಕೈ ಹಿಡಿಯುತ್ತಾರಾ?
ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿ ಹಾವೇರಿ ಲೋಸಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಹಾವೇರಿ ಕ್ಷೇತ್ರದ ಜನತೆ ಬಸವರಾಜ ಬೊಮ್ಮಾಯಿ ಅವರ ಕೈ ಹಿಡಿಯುತ್ತಾರಾ ಎಂಬುದನ್ನ ಕಾದುನೋಡ್ಬೇಕಾಗಿದೆ. ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯ ಅಭಿವೃದ್ದಿಗಾಗಿ ಸಾಕಷ್ಟು ಅನುಮಾನವನ್ನ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಹಾವೇರಿ ಜನತೆ ಈ ಬಾರಿ ಕೈ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಇತ್ತ ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ಜನ ಕಾಂಗ್ರೆಸ್ ನಾಯಕರಿದ್ದು, ಕೈ ಗ್ಯಾರಂಟಿ ಹಾಗೂ ಸ್ಥಳೀಯ ಶಾಸಕ ವರ್ಚಸ್ಸು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣವಾಗುತ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಸದ್ಯ ಹಾವೇರಿ ಚಿತ್ರಣವನ್ನ ಗಮನಿಸಿದರೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೆಲುವಿನ ಸನಿಹದಲ್ಲಿದ್ದಾರೆ ಎನ್ನಲಾಗಿದೆ.
ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಅಳಿವು ಉಳಿವಿನ ಪ್ರಶ್ನೆ- ಹೆಚ್ಡಿಕೆ ಗೆಲ್ತಾರಾ?
ಹಳೇ ಮೈಸೂರು ಭಾಗದ ಕ್ಷೇತ್ರವಾದ ಮಂಡ್ಯ ಲೋಕಸಭಾ ಕ್ಷೇತ್ರವನ್ನ ಗೆಲ್ಲುವುದು ದಳಪತಿಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈಗಾಗಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸೋಲು ಅನುಭವಿಸಿದ್ದು, ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಸ್ತಿತ್ವವನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕುಮಾರಸ್ವಾಮಿ ಸ್ಪರ್ಧೆ ನಡೆಸಿದ್ದು, ಮಂಡ್ಯದಲ್ಲಿ ಈ ಬಾರಿ ಕುಮಾರಸ್ವಾಮಿ ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಮಂಡ್ಯದ ಜನತೆ ಕುಮಾರಸ್ವಾಮಿ ಅವರ ಕೈ ಹಿಡಿಯುತ್ತಾರಾ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications