ಲೋಕಸಭೆ ಚುನಾವಣೆ: ಕರ್ನಾಟಕ ಕಾಂಗ್ರೆಸ್‌ನಲ್ಲಿ ಟಿಕೆಟ್ ವಾರ್- ಬೆಂಗಳೂರು, ಮೈಸೂರು ಸೇರಿ ಹಲವು ಕ್ಷೇತ್ರಗಳಲ್ಲಿ ಭಾರೀ ಲಾಬಿ
ಬೆಂಗಳೂರು, ಆಗಸ್ಟ್ 14: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿರುವ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಈಗಾಗಲೇ ಸಿದ್ದತೆ ನಡೆಸಿದೆ. ಕರ್ನಾಟಕದಲ್ಲಿ ಸುಮಾರು 20 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಮಹದಾಸೆಯನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ. ಆದರೆ, ಇದೀಗ ಕಾಂಗ್ರೆಸ್‌ನಲ್ಲಿ ಲೋಕಸಭೆ ಟಿಕೆಟ್‌ಗಾಗಿ ಸಂಘರ್ಷ ಶುರುವಾಗಿದೆ. ಹಲವು ಜಿಲ್ಲೆಗಳಲ್ಲಿ ನಾಯಕರು ಭಾರೀ ಲಾಬಿ ನಡೆಸುತ್ತಿರುವುದು ತಿಳಿದುಬಂದಿದೆ.
ಮೇ 2024 ರ ಲೋಕಸಭೆ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಲು ಕರ್ನಾಟಕ ಕಾಂಗ್ರೆಸ್ ಇಂದು ಸಾಮಾನ್ಯ ಸಭೆಯನ್ನು ನಡೆಸಲಿದೆ. ಟಿಕೆಟ್‌ಗಾಗಿ ಈಗಾಗಲೇ ಲಾಬಿ ಪ್ರಾರಂಭವಾಗಿದೆ. ಹಲವಾರು ನಾಯಕರು ಪಕ್ಷದ ಟಿಕೆಟ್ ಮೇಲೆ ಕಣ್ಣಿಟ್ಟಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಮಾಜಿ ಸಚಿವ, ಹಾಲಿ ಎಂಎಲ್‌ಸಿ ಎಚ್ ವಿಶ್ವನಾಥ್ ಮೈಸೂರಿನ ಲೋಕಸಭೆ ಟಿಕೆಟ್‌ಗೆ ಬೇಡಿಕೆ ಇಡುವುದಾಗಿ ಹೇಳಿದ್ದಾರೆ.
'ಈ ಬಗ್ಗೆ ಇನ್ನೂ ಯಾವುದೇ ಚರ್ಚೆಗಳು ನಡೆದಿಲ್ಲ. ಆದರೆ, ನಾನು ಕಾಂಗ್ರೆಸ್‌ನಿಂದ ಮತ್ತೊಂದು ಅವಕಾಶವನ್ನು ಕೇಳುತ್ತೇನೆ. ನಾನು ಈ ಹಿಂದೆ ಕಾಂಗ್ರೆಸ್‌ನಿಂದ ಸಂಸದನಾಗಿದ್ದೆ. ಮತ್ತೊಮ್ಮೆ ಅವಕಾಶ ಪಡೆಯಲು ನಿರ್ಧರಿಸಿದ್ದೇನೆ' ಎಂದು ವಿಶ್ವನಾಥ್ ತಿಳಿಸಿದ್ದಾರೆ. ವಿಶ್ವನಾಥ್ ಅವರು 2009-2014ರ ನಡುವೆ ಮೈಸೂರು ಸಂಸದರಾಗಿದ್ದರು.
ಬಳ್ಳಾರಿ
ಕಾಂಗ್ರೆಸ್‌ನ ಮತ್ತೋರ್ವ ನಾಯಕ, ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರು ಬಳ್ಳಾರಿ ಟಿಕೆಟ್ ಬಯಸಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಉಗ್ರಪ್ಪ 2018ರಲ್ಲಿ ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು.

ಬೆಂಗಳೂರು ಸೆಂಟ್ರಲ್
ಮಾಜಿ ಸಚಿವ ಎಚ್‌ಎಂ ರೇವಣ್ಣ ಅವರು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಬಯಸಿದ್ದಾರೆ. ಪ್ರಸ್ತುತ ಈ ಕ್ಷೇತ್ರವನ್ನು ಬಿಜೆಪಿಯ ಪಿಸಿ ಮೋಹನ್ ಪ್ರತಿನಿಧಿಸುತ್ತಿದ್ದಾರೆ. ರೇವಣ್ಣ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಾದರೂ ಟಿಕೆಟ್ ನೀಡುವಂತೆ ರೇವಣ್ಣ ಅವರು ಒತ್ತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್‌ಎ ಹರೀಸ್ ಪುತ್ರ ಹಾಗೂ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಕೂಡ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಚಾಮರಾಜನಗರ
ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಚಾಮರಾಜನಗರ ಲೋಕಸಭೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಜಿಲ್ಲೆಯ 8 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ ಖಾತೆ ತೆರೆಯಲು ವಿಫಲವಾಗಿದ್ದು, ಜೆಡಿಎಸ್ ಒಂದು ಸ್ಥಾನವನ್ನು ಹೊಂದಿದೆ.

ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸುನೀಲ್ ಬೋಸ್ ಲಾಬಿ ನಡೆಸಿದ್ದರು. ಆದರೆ, ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಕಾಂಗ್ರೆಸ್ ಮುಖಂಡ ದಿವಂಗತ ಧ್ರುವನಾರಾಯಣ ಅವರ ಪುತ್ರ ದರ್ಶನ್ ಅವರಿಗೆ ಟಿಕೆಟ್ ನೀಡಲಾಗಿತ್ತು. ದರ್ಶನ್ ಅವರು ಜಯ ಗಳಿಸಿದರು.
ಬಾಗಲಕೋಟೆ
ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್ ಅವರು ಬಾಗಲಕೋಟೆ ಜಿಲ್ಲೆಯಿಂದ ಲೋಕಸಭೆಗೆ ಲಾಬಿ ನಡೆಸುತ್ತಿದ್ದಾರೆ. ಕ್ಷೇತ್ರದಿಂದ 4 ಬಾರಿ ಸಂಸದರಾಗಿರುವ ಬಿಜೆಪಿಯ ಪಿಸಿ ಗದ್ದಿಗೌಡರ ವಿರುದ್ಧ 2019 ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅದೇ ಕ್ಷೇತ್ರದಿಂದ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಸಹ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications