Congress Candidate List: ಮಾರ್ಚ್ 18ಕ್ಕೆ ರಾಜ್ಯದ ಎರಡನೇ ಪಟ್ಟಿ ಬಿಡುಗಡೆ: ಸಚಿವ
ಹುಬ್ಬಳ್ಳಿ, ಮಾರ್ಚ್ 15: ಲೋಸಕಭಾ ಚುನಾವಣೆ 2024ರ ಸಂಬಂಧ ಕಾಂಗ್ರೆಸ್ ಈವರೆಗೆ ಅಭ್ಯರ್ಥಿಗಳ ಮೊದಲ ಬಿಡುಗಡೆ ಕರ್ನಾಟಕದ ಏಳು ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಅಂತಿಮಗೊಳಿಸಿತ್ತು. ರಾಜ್ಯದ ಮಟ್ಟಿಗೆ ಎರಡನೇ ಪಟ್ಟಿ ಶುಕ್ರವಾರ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಇದು ಎರಡು ದಿನ ವಿಳಂಭವಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿರುವ ಕಾಂಗ್ರೆಸ್ ಇದೇ ಮಾರ್ಚ್ 18 ರಂದು ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳು ಇವೆ ಎಂದು ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟು ಸಡಿಲಿಸಿದ ಪರಿಣಾಮ ಅಭ್ಯರ್ಥಿ ಆಯ್ಕೆ ಕ್ಲಿಷ್ಟವಾಗಿತ್ತು. ಬಾಕಿ ಉಳಿದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ರಾಜ್ಯದ ನಾಯಕರು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಇದು ಶೀಘ್ರವೇ ಪ್ರಕಟಗೊಳ್ಳಲಿದೆ ಎಂದು ಹೇಳಲಾಗಿತ್ತು.
ಸಿಇಸಿ ಸಭೆ ಬಳಿಕ ಪ್ರಕಟ
ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವ ದಿನೇಶ್ ಗುಂಡೂರಾವ್ ಅವರು, ಕೇಂದ್ರ ಚುನಾವಣೆ ಸಮಿತಿ (ಸಿಇಸಿ) ಸಭೆಯು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಭೆ ಆದ ಬಳಿಕ ಬಾಕಿ ಇರುವ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿ ಮಾರ್ಚ್ 18ಕ್ಕೆ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.
ಕೇಂದ್ರ ಚುನಾವಣೆ ಆಯೋಗದ ವಿರುದ್ಧ ಕಿಡಿ ಕಾರಿರುವ ಸಚಿವರು, ಆಯೋಗವು ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತ ಕೆಲಸ ಮಾಡ್ತಿದೆ ಅನ್ನೋದು ಪ್ರಶ್ನೆಯಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳೂ ರಾಜೀನಾಮೆ ನೀಡಿರುವುದು ಇಂತಹವುಕ್ಕೆಲ್ಲ ಪುಷ್ಠಿ ಬಂದಂತಾಗಿದೆ ಎಂದು ತಿಳಿಸಿದರು.

ಬಿಜೆಪಿ ಪರವಾಗಿ ಸಂಸ್ಥೆಗಳು
ಸ್ವಾಯತ್ತ ಸಂಸ್ಥೆಗಳು ಬಿಜೆಪಿ ಅನುಸಾರ ನಡೆಯಬೇಕು, ಇದು ದೇಶದಲ್ಲಿ ನಡೆಯುತ್ತಿರುವ ಸತ್ಯ. ಆಯೋಗಗಳು, ಸಂಸ್ಥೆಗಳು ಎಲ್ಲವೂ ಬಿಜೆಪಿ ಪರವಾಗಿದೆ ಎಂದು ಅವರು ಆರೋಪಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. 6 ಸಾವಿರ ಕೋಟಿಗೂ ಅಧಿಕ ಹಣ ಬಿಜೆಪಿಗೆ ದೇಣಿಗೆ ಹೋಗಿದೆ. ಬಿಜೆಪಿ ಪಕ್ಷಕ್ಕೆ ಅನೇಕ ದೊಡ್ಡ ದೊಡ್ಡ ಕಂಪನಿಗಳು ದೇಣಿಗೆ ಕೊಟ್ಟಿವೆ.
ಇದು ಭ್ರಷ್ಟಾಚಾರದ ಪರಮಾವಧಿ. ಅತ್ಯಂತ ಭ್ರಷ್ಟ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ. ಪಕ್ಷಾಂತರ ಮಾಡಲು ಇಡಿ IT ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ದಿನವೂ ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿ ಆಗುತ್ತಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ದೂರಿದರು.












Click it and Unblock the Notifications