Lok Sabha Election: ನಿಜವಾಗ್ಲೂ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಮೈತ್ರಿಧರ್ಮ ಪಾಲನೆ ಆಗುತ್ತಾ?
ಬೆಂಗಳೂರು, ಏಪ್ರಿಲ್ 19: ರಾಜಕೀಯ ಲಾಭಕ್ಕಾಗಿ ಮಾಡಿಕೊಳ್ಳುವ ಮೈತ್ರಿಗಳು ಹೆಚ್ಚು ದಿನ ಬಾಳಿದ ಉದಾಹರಣೆಗಳು ಕಡಿಮೆಯೇ ಮತ್ತು ಅಂತಹ ಬೆಳವಣಿಗೆಯನ್ನೆಲ್ಲ ನೋಡಿಕೊಂಡೇ ನಾವೆಲ್ಲರೂ ಬಂದಿದ್ದೇವೆ. ಸ್ವಾರ್ಥದ ರಾಜಕಾರಣದಲ್ಲಿ ಎಲ್ಲವೂ ಪ್ರಾಮಾಣಿಕವಾಗಿ ನಡೆಯುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಲಾಗದು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗಿದ್ದ ಜೆಡಿಎಸ್ ಈ ಬಾರಿ ಬಿಜೆಪಿ ಜತೆಗಿದೆ. ಹೀಗಾಗಿ ಮೈತ್ರಿ ಧರ್ಮಪಾಲನೆ ಎಷ್ಟರ ಮಟ್ಟಿಗೆ ಆಗಬಹುದು? ಎಂಬ ಕುತೂಹಲ ಎಲ್ಲರಲ್ಲೂ ಕಾಡಲಾರಂಭಿಸಿದೆ.
ಬಹಳಷ್ಟು ಸಂದರ್ಭಗಳಲ್ಲಿ ಕೇವಲ ಅಧಿಕಾರದ ಸ್ವಾರ್ಥಕ್ಕಾಗಿ ಮೇಲ್ಮಟ್ಟದ ನಾಯಕರು ತಮ್ಮ ಎದುರಾಳಿಗಳೊಂದಿಗೆ ಮೈತ್ರಿ ಮಾಡಿಕೊಂಡು ಬಿಡುತ್ತಾರೆ. ಅಷ್ಟೇ ಅಲ್ಲದೆ ಅವರು ಪಕ್ಷದ ಭದ್ರಬುನಾದಿಗಳಾಗಿರುವ ಕಾರ್ಯಕರ್ತರು ಮತ್ತು ತಳಮಟ್ಟದ ನಾಯಕರ ಸಲಹೆ, ಒಪ್ಪಿಗೆಯನ್ನು ಪಡೆಯದೆ ಮೈತ್ರಿ ಘೋಷಣೆ ಮಾಡಿ ಬಿಡುತ್ತಾರೆ. ಈ ವೇಳೆ ತಮ್ಮ ರಾಜಕೀಯ ಆರಂಭದಿಂದಲೂ ಎದುರಾಳಿಯಾಗಿ ನೋಡಿಕೊಂಡು ಆತನ ವಿರುದ್ಧ ಹೋರಾಟ ಮಾಡಿಕೊಂಡು ಬಂದ ವ್ಯಕ್ತಿಯನ್ನು ಒಪ್ಪಿಕೊಂಡು ಹೋಗುವುದು ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರಿಗೆ ಕಷ್ಟವಾಗುತ್ತದೆ.

ಇವತ್ತು ರಾಜ್ಯದ ರಾಜಕೀಯವನ್ನು ನೋಡಿದ್ದೇ ಆದರೆ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎದುರಾಳಿಗಳಾಗಿಯೇ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ನಿಂದ ಮೋಸ ಹೋದವರು, ಅಸಮಾಧಾನಗೊಂಡವರು, ಟಿಕೆಟ್ ಸಿಗದ ವಂಚಿತರು ಹೀಗೆ ಹಲವು ಕಾರಣಕ್ಕೆ ಕಾಂಗ್ರೆಸ್ ನ್ನು ತೊರೆದವರು ನೇರವಾಗಿ ಜೆಡಿಎಸ್ ಗೆ ಬಂದು ರಾಜಕೀಯ ಭವಿಷ್ಯ ಕಂಡುಕೊಂಡಿದ್ದಾರೆ.
ಹಿಂದೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಫಲಕೊಡಲಿಲ್ಲ
ಇದರಿಂದ ಕಾಂಗ್ರೆಸ್ ನ ಮತಬ್ಯಾಂಕ್ ಆಗಿದ್ದ ಅಲ್ಪಸಂಖ್ಯಾತ ಮತ್ತು ದಲಿತ ಮತಗಳನ್ನು ಜೆಡಿಎಸ್ ಕಿತ್ತುಕೊಳ್ಳಲು ಸಾಧ್ಯವಾಗಿತ್ತು. ಕಾಂಗ್ರೆಸ್ ಕ್ಷೀಣಗೊಂಡಾಗಲೆಲ್ಲ ಜೆಡಿಎಸ್ ಮೇಲೆದ್ದು ಬಂದಿತ್ತು. ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಹುತೇಕ ಕಡೆಗಳಲ್ಲಿ ಇವತ್ತಿಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ರಾಜಕೀಯ ವಿರೋಧಿಗಳಾಗಿಯೇ ಉಳಿದು ಹೋಗಿದ್ದಾರೆ. ತಳಮಟ್ಟದ ಪರಿಸ್ಥಿತಿ ಹೀಗಿರುವಾಗ ಇದೆರಡು ಪಕ್ಷ ಮೈತ್ರಿ ಮಾಡಿಕೊಂಡರೆ ಉದ್ಧಾರವಾಗಲ್ಲ ಎಂಬುದು ಕಳೆದ ಬಾರಿಯ ಮೈತ್ರಿ ಸರ್ಕಾರ ರಚನೆ ಮತ್ತು ಲೋಕ ಸಭಾ ಚುನಾವಣೆಯಿಂದ ಜನರಿಗೆ ಗೊತ್ತಾಗಿದೆ.

ಈಗ ಬಿಜೆಪಿ ಮತ್ತು ಜೆಡಿಎಸ್ ನ ಸರದಿಯಾಗಿದೆ. 2023ರ ವಿಧಾನಸಭಾ ಚುನಾವಣೆ ಬಳಿಕ ಜೆಡಿಎಸ್ ಮಂಕಾಗಿತ್ತು. ಹೆಚ್ಚಿನ ಸ್ಥಾನದಲ್ಲಿ ಗೆಲುವು ಪಡೆಯಬಹುದೆಂದು ನಿರೀಕ್ಷಿಸಿದ ಪಕ್ಷಕ್ಕೆ ದೊಡ್ಡ ಶಾಕ್ ಆಗಿತ್ತು. ಜತೆಗೆ ತಾವು ಅಧಿಕಾರದಲ್ಲಿದ್ದ ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿತ್ತು. ಕಾಂಗ್ರೆಸ್ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದು, ಬಿಜೆಪಿ ಕೂಡ ಪ್ರಬಲ ವಿರೋಧ ಪಕ್ಷವಾಗಿದೆ. ಹೀಗಾಗಿ ಇದೆರಡು ಪಕ್ಷವನ್ನು ಎದುರು ಹಾಕಿಕೊಂಡು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭವಲ್ಲ ಎಂಬುದು ದಳಪತಿಗಳ ಗಮನಕ್ಕೆ ಬಂದಿತ್ತು.
ಜೆಡಿಎಸ್ ಬಿಜೆಪಿ ಸಖ್ಯ ಬೆಳೆಸಿದ್ದೇಕೆ?
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಮತ ಪಡೆದಿರುವುದು ಮುಖ್ಯ ಕಾರಣವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಬಿಜೆಪಿ ಪಡೆದ ಮತಗಳ ಪೈಕಿ ಹೆಚ್ಚಿನವು ಜೆಡಿಎಸ್ ನಿಂದ ಸೆಳೆದ ಮತಗಳಾಗಿತ್ತು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರಿಗಾಗಿ ಹೋರಾಟ ನಡೆಸಿ ಗೆಲ್ಲಿಸುವುದು ಜೆಡಿಎಸ್ ಗೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಹೀಗಾಗಿಯೇ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬಿಜೆಪಿ ಸಖ್ಯ ಬೆಳೆಸುವಲ್ಲಿ ಮುಂದಾದರು. ಅದು ಯಶಸ್ವಿಯಾಗಿದ್ದು, ಸದ್ಯ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಲೋಕಸಮರವನ್ನು ಎದುರಿಸುತ್ತಿದ್ದಾರೆ.

ಜೆಡಿಎಸ್ ಮೂರು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಉಳಿದಂತೆ ಇಪ್ಪತೈದು ಸ್ಥಾ ನಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಿದೆ. ಬಹುತೇಕ ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವಿನ ವೈಮನಸ್ಸು ದೂರ ಮಾಡುವ ಪ್ರಯತ್ನಗಳು ಆಗಿವೆ. ಕೆಲವೆಡೆ ನಾಯಕರ ನಡುವೆ ಅಂತರಗಳು ಕಂಡು ಬರುತ್ತಿವೆ. ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿ ಸೇರ್ಪಡೆಯಾದ ಮೇಲೂ ಹೆಚ್.ಡಿ.ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರಕ್ಕೆ ಹೋದಂತೆ ಕಾಣುತ್ತಿಲ್ಲ.
ರಾಜ್ಯದಲ್ಲಿ ಮೈತ್ರಿಧರ್ಮ ಪಾಲನೆಯಾಗುತ್ತಾ?
ಮೈಸೂರು ಭಾಗದಲ್ಲಿ ಒಗ್ಗಟ್ಟಿನ ಹೋರಾಟಗಳು ಕಾಣುತ್ತಿವೆ. ಕೆಲವು ಭಾಗಗಳಲ್ಲಿ ಸಣ್ಣಗಿನ ಅಸಮಾಧಾನವಿದ್ದು ಅದನ್ನು ಸರಿಪಡಿಸುವ ಕೆಲಸಗಳನ್ನು ರಾಜ್ಯ ನಾಯಕರು ಮಾಡುತ್ತಲೇ ಇದ್ದಾರೆ. ಕೆಲವು ಕಡೆ ಸಣ್ಣಗಿನ ಅಂತರವಂತು ಕಾಣಿಸುತ್ತಲೇ ಇದೆ. ರಾಜ್ಯ ನಾಯಕರು ಮಾತ್ರ ಎಲ್ಲವನ್ನೂ ಸರಿಪಡಿಸಿದ್ದೇವೆ. ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟು ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ಮಾತುಗಳನ್ನು ಆಡುತ್ತಲೇ ಇದ್ದಾರೆ.
ಇತ್ತ ಹಳೇ ಮೈಸೂರು ಭಾಗದಲ್ಲಿ ಎಲ್ಲರ ಚಿತ್ತ ಮಂಡ್ಯ ಸಂಸದೆ ಸುಮಲತಾ ಅವರತ್ತ ನೆಟ್ಟಿದೆ. ಅವರು ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ಮಾಡುತ್ತಾರಾ? ಅದೇ ರೀತಿ ಹಾಸನದಲ್ಲಿ ಪ್ರೀತಂಗೌಡ ಮತ್ತು ಪ್ರಜ್ವಲ್ ರೇವಣ್ಣ ಒಂದಾಗುತ್ತಾರಾ? ಇದೆಲ್ಲಕ್ಕಿಂತ ಹೆಚ್ಚಾಗಿ ಎರಡು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮೈತ್ರಿ ಧರ್ಮ ಪಾಲನೆ ಮಾಡುತ್ತಾರಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಫಲಿತಾಂಶದ ತನಕ ಕಾಯುವುದು ಅನಿವಾರ್ಯವಾಗಿದೆ.












Click it and Unblock the Notifications