ಜೆಡಿಎಸ್ ಪಾಲಿಗೆ 3 ಕ್ಷೇತ್ರಗಳು ಫಿಕ್ಸ್: ಮೈತ್ರಿ ಗೊಂದಲಕ್ಕೆ ತೆರೆ!
ಲೋಕಸಭೆ ಚುನಾವಣೆ 2024ರ ವೋಟಿಂಗ್ ಡೇ ಹತ್ತಿರ ಆಗುತ್ತಿದ್ದು, ಬಿಜೆಪಿ & ಜೆಡಿಎಸ್‌ನ ನಡುವೆ ಮೈತ್ರಿ ವಿಚಾರವಾಗಿ ಭಾರಿ ಗೊಂದಲ ಏರ್ಪಟ್ಟಿತ್ತು. ಅತ್ತ ಜೆಡಿಎಸ್ ಪಾಲಿಗೆ ಬರೀ 2 ಸ್ಥಾನ ಸಿಗಲಿದೆ ಅಂತಾ ಹೇಳಲಾಗಿತ್ತು. ಇದೇ ಕಾರಣಕ್ಕೆ ಜೆಡಿಎಸ್ ವರಿಷ್ಠ ಹಾಗೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ಗರಂ ಆಗಿದ್ದರು. ಆದರೆ ಇದೀಗ ಜೆಡಿಎಸ್ ಮನಸ್ಸು ತಣಿಸುವ ಕೆಲಸ ಮಾಡಿದೆ ಬಿಜೆಪಿ ಹೈಕಮಾಂಡ್!
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದ, ಲೋಕಸಭೆ ಚುನಾವಣೆಗೆ ಡೇಟ್ ಫೈನಲ್ ಆಗಿದೆ. ಬಿಜೆಪಿ & ಕಾಂಗ್ರೆಸ್ ನಡುವೆ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಅದರಲ್ಲೂ ಕರ್ನಾಟಕ ರಣರಂಗದಲ್ಲಿ ಗೆಲುವು ಯಾವ ಪಕ್ಷಕ್ಕೆ? ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಿದ್ದಾಗ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವರ್ಕೌಟ್ ಆಗಲ್ಲ ಎಂಬ ಆರೋಪಗಳು ಕೂಡ ಕೇಳಿಬಂದವು. ಇದು ಬಿಜೆಪಿ ಕೇಂದ್ರ ನಾಯಕರಿಗೆ ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿಯೇ ಬಿಜೆಪಿಗೆ ಕನ್ಫ್ಯೂಸ್ ಆಗಿ, ಜೆಡಿಎಸ್ ಪಕ್ಷಕ್ಕೆ ಎಷ್ಟು ಸ್ಥಾನ ಕೊಡಬೇಕು? ಅನ್ನೋದು ಗೊತ್ತಾಗಲಿಲ್ಲ. ಆದರೆ ಅಂತಿಮವಾಗಿ ಜೆಡಿಎಸ್‌ಗೆ 3 ಸ್ಥಾನ ಈಗ ಫಿಕ್ಸ್ ಆಗಿದೆ.

ಹಾಸನ & ಮಂಡ್ಯ ಸೇರಿದಂತೆ..
ಈ ಬಾರಿ ಜೆಡಿಎಸ್ ಜೊತೆ ಕೈಜೋಡಿಸಿದರೆ ಕರ್ನಾಟಕದಲ್ಲಿ ಭರ್ಜರಿ ಗೆಲುವು ಸಾಧಿಸೋಕೆ ಸಾಧ್ಯ ಎಂಬ ಲೆಕ್ಕಾಚಾರ ಹಾಕಿಕೊಂಡ ಬಿಜೆಪಿ ಹೈಕಮಾಂಡ್ ದಳಪತಿಗಳ ಜೊತೆ ಭರ್ಜರಿ ದೋಸ್ತಿ ಮಾಡಿಕೊಂಡಿದೆ. ಆದರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದ್ದು ಇದೇ ಕಾರಣಕ್ಕೆ, ಹಳೇ ಮೈಸೂರಿನಲ್ಲಿ ಹೆಚ್ಚಿನ ಸ್ಥಾನ ಬೇಕು ಎಂದು ದಳಪತಿಗಳು ಭಾರಿ ಹಠ ಹಿಡಿದಿದ್ದರು. ಇದು ಬಿಜೆಪಿ ಹೈಕಮಾಂಡ್‌ಗೆ ತಲೆನೋವು ತರಿಸಿತ್ತು. ಯಾಕಂದ್ರೆ, ಈ ಹಿಂದಿನ 2019ರ ಚುನಾವಣೆಯಲ್ಲಿ ಜೆಡಿಎಸ್ ಹಾಸನ ಮಾತ್ರ ಗೆದ್ದಿತ್ತು. ಹೀಗಾಗಿ ಕೋಲಾರ ಮತ್ತು ಮಂಡ್ಯ ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ಪಡೆಯಲು ಜೆಡಿಎಸ್ ಪಣತೊಟ್ಟಿತ್ತು.
ಹೀಗೆ ಇಬ್ಬರ ನಡುವಿನ ತಿಕ್ಕಾಟ ಈಗ ಬಗೆಹರಿದಿದ್ದು, ಕೊನೆಗೂ ಹಾಸನ & ಮಂಡ್ಯ ಸೇರಿ ಕೋಲಾರ ಲೋಕಸಭಾ ಕ್ಷೇತ್ರವನ್ನ ಕೂಡ ಜೆಡಿಎಸ್ ಪಾಲಿಗೆ ಬಿಟ್ಟುಕೊಡಲು ಈಗ ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ. ಹೀಗಾಗಿ ದಳಪತಿಗಳು ಖುಷ್ ಆಗಿದ್ದು, ಜೆಡಿಎಸ್ ಜತೆ ಯಾವುದೇ ಕಿರಿಕ್ ಇಲ್ಲದೆ ಚುನಾವಣೆಗೆ ಎಂಟ್ರಿ ಪಡೆಯಲು ಬಿಜೆಪಿ ವರಿಷ್ಠರು ಸಿದ್ಧರಾಗಿದ್ದಾರೆ. ಈ ಮೂಲಕ ಕಳೆದ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಜೆಡಿಎಸ್ ಈ ಬಾರಿ, ಮಂಡ್ಯ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ಪಡೆಯಲು ಸನ್ನದ್ಧವಾಗಿದೆ.

ಕರ್ನಾಟಕದಲ್ಲಿ 2 ಹಂತದ ಚುನಾವಣೆ
ಲೋಕಸಭೆ ಚುನಾವಣೆ ಅಖಾಡಕ್ಕೆ, ಅಭ್ಯರ್ಥಿಗಳು ಸನ್ನದ್ಧವಾಗಿದ್ದಾರೆ. ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಇನ್ನೇನು ಕೆಲ ದಿನದಲ್ಲೇ ಭಾರತೀಯರು ಹೊಸ ಸರ್ಕಾರ ಆಯ್ಕೆ ಮಾಡಲು ಮತದಾನ ಮಾಡಲಿದ್ದಾರೆ. ಹಾಗೆಯೇ ಇದಕ್ಕೆ ಬೇಕಾದ ತಯಾರಿಗಳು ಕೂಡ ಸಾಗಿವೆ. ಹಾಗೇ ಕರ್ನಾಟಕದಲ್ಲಿ ಕೂಡ ಎಲ್ಲಾ ರೀತಿ ತಯಾರಿ ನಡೆದಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ಇದ್ದು ಏಪ್ರಿಲ್ 26ರಂದು & ಮೇ 7ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಚುನಾವಣೆ ಫಲಿತಾಂಶ ಜೂನ್ 4ಕ್ಕೆ ಹೊರಬೀಳಲಿದೆ. ಈ ಮೂಲಕ ಇಡೀ ಪ್ರಪಂಚದ ಗಮನ ಸೆಳೆದಿರುವ ಭಾರತದ ಲೋಕಸಭಾ ಚುನಾವಣೆ ಅಂತಿಮ ಹಂತಕ್ಕೆ ತಲುಪುತ್ತಿದೆ.












Click it and Unblock the Notifications