ಸ್ವಿಗ್ಗಿ, ಜೊಮಾಟೊ ಸೇರಿದಂತೆ ಡೆಲಿವರಿ ಬಾಯ್‌ಗಳಿಗೆ ₹ 4 ಲಕ್ಷಗಳ ಜೀವ, ಅಪಘಾತ ವಿಮೆ: ಸಿದ್ದು ಮಹತ್ವದ ಘೋಷಣೆ
ಬೆಂಗಳೂರು, ಜುಲೈ 07: ಮುಖ್ಯಮಂತ್ರಿ ಸಿದ್ದರಾಮಯ್ಯನವರು 14 ನೇ ಬಜೆಟ್ ಅನ್ನು ಇಂದು ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಸೇರಿದಂತೆ ಶ್ರೀಸಾಮಾನ್ಯರಿಗೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಇ- ಕಾಮರ್ಸ್ ಡೆಲಿವರಿ ಬಾಯ್‌ಗಳಿಗೆ ಸಿದ್ದರಾಮಯ್ಯನವರು ಜೀವ ಹಾಗೂ ಅಪಘಾತ ವಿಮೆಯನ್ನು ಘೋಷಿಸಿದ್ದಾರೆ.
ಸ್ವಿಗ್ಗಿ, ಜೊಮಾಟೊ, ಅಮೆಜಾನ್ ಸೇರಿದಂತೆ ಇತ್ಯಾದಿಗಳಲ್ಲಿ ಕೆಲಸ ಮಾಡುವ ಇ-ಕಾಮರ್ಸ್ ಡೆಲಿವರಿ ಉದ್ಯೋಗಿಗಳಿಗೆ ರೂ 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದು ರೂ 2 ಲಕ್ಷ ಜೀವ ವಿಮೆ ಮತ್ತು ರೂ 2 ಲಕ್ಷ ಅಪಘಾತ ವಿಮೆಯನ್ನು ಒಳಗೊಂಡಿದೆ. ಇದು ಪೂರ್ನ ಸಮಯ ಹಾಗೂ ಅರೆಕಾಲಿಕ ಡೆಲಿವರಿ ಬಾಯ್‌ಗಳನ್ನು ಒಳಗೊಂಡಿದೆ.

ಸಿದ್ದರಾಮಯ್ಯ ಬಜೆಟ್ ಪ್ರಮುಖಾಂಶಗಳು
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಬೆಂಬಲ
•ಕೃಷಿ ಭಾಗ್ಯ ಯೋಜನೆ 100 ಕೋಟಿ ರೂ. ವೆಚ್ಚದಲ್ಲಿ ಮರುಜಾರಿ.
•ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಐದು ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ.
•ಜಾನುವಾರುಗಳ ಆಕಸ್ಮಿಕ ಸಾವಿನ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆ ಮರುಜಾರಿ.
ಮೀನುಗಾರಿಕೆಗೆ ಉತ್ತೇಜನ
•ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿ 50,000 ರೂ. ಗಳಿಂದ 3 ಲಕ್ಷ ರೂ. ಗಳಿಗೆ ಹೆಚ್ಚಳ.
•ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದ ಡೀಸೆಲ್ ಮಿತಿ
2 ಲಕ್ಷ ಕಿಲೋ ಲೀಟರ್‌ಗಳವರೆಗೆ ಹೆಚ್ಚಿಸಲು 250 ಕೋಟಿ ರೂ. ನೆರವು.
•ಮೀನುಗಾರಿಕಾ ದೋಣಿಗಳ ಸೀಮೆ ಎಣ್ಣೆ ಇಂಜಿನ್‌ಗಳನ್ನು ಪೆಟ್ರೋಲ್ ಇಂಜಿನ್‌ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ; 5ಕೋಟಿ ರೂ. ನೆರವು.
ಅನ್ನದಾತನಿಗೆ ಸಾಲ ಸೌಲಭ್ಯ
•ಶೂನ್ಯ ಬಡ್ಡಿ ದರದಲ್ಲಿ ನೀಡುವ ಅಲ್ಪಾವಧಿ ಸಾಲದ ಮಿತಿ 5 ಲಕ್ಷ ರೂ. ಗಳಿಗೆ ಹೆಚ್ಚಳ.
•ಶೇ. 3ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿ 10 ಲಕ್ಷ ರೂ. ಗಳಿಂದ 15 ಲಕ್ಷ ರೂ. ಗಳಿಗೆ ಹೆಚ್ಚಳ.

ನೀರಾವರಿಗೆ ಉತ್ತೇಜನ
•ಪ್ರಗತಿಯಲ್ಲಿರುವ 940 ಕೋಟಿ ರೂ. ಬಾಕಿ ಮೊತ್ತದ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ.
•770 ಕೋಟಿ ರೂ. ವೆಚ್ಚದಲ್ಲಿ 899 ಕೆರೆ ತುಂಬಿಸುವ 19 ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ.
•ಎತ್ತಿನಹೊಳೆ ಯೋಜನೆ ಬಾಕಿ ಕಾಮಗಾರಿ ಪೂರ್ಣಗೊಳಿಸಲು, ಮೇಕೆದಾಟು ಯೋಜನೆಗೆ ಅರಣ್ಯ ಭೂಮಿ ಸ್ವಾಧೀನ, ಭೂಸ್ವಾಧೀನಕ್ಕೆ ಕ್ರಮ.
ಶಿಕ್ಷಣಕ್ಕೆ ಆದ್ಯತೆ
•ಸಮಾಜದ ಸ್ವಾಸ್ಥ್ಯ ಕಾಪಾಡುವ ಆಶಯದಿಂದ ಪಠ್ಯಪುಸ್ತಕ ಮರುಪರಿಷ್ಕರಣೆಗೆ ಕ್ರಮ.
* ಸ್ಥಳೀಯವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಾಸ್ತವಿಕತೆಯನ್ನು ಆಧರಿಸಿ ಹೊಸ ಶಿಕ್ಷಣ ನೀತಿ ರೂಪಿಸಲು ಕ್ರಮ.
•1 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ನೀಡುವ ಪೂರಕ ಪೌಷ್ಟಿಕ ಆಹಾರ; 60 ಲಕ್ಷ ಮಕ್ಕಳಿಗೆ ಅನುಕೂಲ; 280 ಕೋಟಿ ರೂ. ಅನುದಾನ.
•ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನಿರ್ವಹಣಾ ವೆಚ್ಚ ಗರಿಷ್ಠ 45,000 ರೂ.ಗಳ ವರೆಗೆ ಹೆಚ್ಚಳ. 153 ಕೋಟಿ ರೂ. ಅನುದಾನ.
•ಶಾಲೆ, ಕಾಲೇಜುಗಳ ಕೊಠಡಿಗಳ ನಿರ್ಮಾಣ, ದುರಸ್ತಿಗೆ 650 ಕೋಟಿ ರೂ. ಹಾಗೂ ಶೌಚಾಲಯ ಘಟಕ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ.
ಸಹಕಾರ ಮತ್ತು ರೇಷ್ಮೆ
•30 ಲಕ್ಷಕ್ಕೂ ಹೆಚ್ಚು ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಗುರಿ
•ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಕ್ರಮ
•ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ರೈತರಿಗೆ ಸರಕು ಸಾಗಾಣಿಕೆಗೆ ಪಿಕ್‌ಅಪ್ ವ್ಯಾನ್ ಖರೀದಿಗೆ ಶೇ.4 ರ ಬಡ್ಡಿ ದರದಲ್ಲಿ 7 ಲಕ್ಷ ರೂ. ವರೆಗಿನ ಸಾಲ ಸೌಲಭ್ಯ.
•ರಾಜ್ಯದ ಆಯ್ದ 50 ತರಕಾರಿ ಮಾರುಕಟ್ಟೆಗಳಲ್ಲಿ ಮಿನಿ ಶೀತಲಗೃಹಗಳ ಸ್ಥಾಪನೆ.

ಗೃಹಲಕ್ಷ್ಮಿ ಯೋಜನೆ
•ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂಪಾಯಿ ನೆರವಿನ ನೇರ ವರ್ಗಾವಣೆ
•ಈ ಯೋಜನೆಗೆ ವಾರ್ಷಿಕ ಅಂದಾಜು 30,000 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದ್ದು, ಇದು ದೇಶದಲ್ಲಿಯೇ ಅತಿ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಿದೆ.
•ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ
•ಬೆಲೆಯೇರಿಕೆಯಿಂದ ತತ್ತರಿಸಿರುವ ಕುಟುಂಬಗಳಿಗೆ ನೆಮ್ಮದಿ
•ಸುಮಾರು 1.30 ಕೋಟಿ ಮಹಿಳೆಯರಿಗೆ ಈ ಯೋಜನೆಯಿಂದ ಲಾಭ
ಯುವ ನಿಧಿ
•2023ರಲ್ಲಿ ಪದವಿ ಪಡೆದು 6 ತಿಂಗಳ ವರೆಗೂ ಉದ್ಯೋಗ ಲಭಿಸದ ಯುವ ಜನರಿಗೆ 2 ವರ್ಷಗಳ ವರೆಗೆ ಅಥವಾ ಉದ್ಯೋಗ ಸಿಗುವ ವರೆಗೆ ನಿರುದ್ಯೋಗ ಭತ್ಯೆ
•ಪದವೀಧರರಿಗೆ ಪ್ರತೀ ತಿಂಗಳು 3,000 ರೂಪಾಯಿ
•ಡಿಪ್ಲೊಮಾ ಪದವೀಧರರಿಗೆ ಪ್ರತೀ ತಿಂಗಳು 1,500 ರೂಪಾಯಿ
•ನಾಡಿನ ಯುವ ಜನತೆಗೆ ಆರ್ಥಿಕ ನೆರವು ನೀಡಿ ಆತ್ಮವಿಶ್ವಾಸ ತುಂಬಿ ಬದುಕಿನಲ್ಲಿ ನೆಲೆ ಕಂಡುಕೊಳ್ಳಲು ಸಹಾಯ
•ಸುಮಾರು 3.7 ಲಕ್ಷ ಯುವ ಜನರಿಗೆ ಈ ಯೋಜನೆಯ ಲಾಭ












Click it and Unblock the Notifications