ಭೀಕರ ಬರಗಾಲ: ನರೇಗಾ ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಸಿಎಂ
ಬೆಳಗಾವಿ,ಡಿಸೆಂಬರ್12: ಭೀಕರ ಬರಗಾಲದ ಹಿನ್ನಲೆಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸ್ತುತ ಇರುವ 100 ಮಾನವ ದಿನಗಳ ಸೃಜನೆಯ ಮಿತಿಯನ್ನು, 150ಕ್ಕೆ ಹೆಚ್ಚಿಸುವಂತೆ ಕೋರಿ 2 ತಿಂಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಸೋಮವಾರ ಬೆಳಗಾವಿ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಬರಗಾಲದ ಚರ್ಚೆಗೆ ವೇಳೆ ಅವರು ಮಾತನಾಡಿದ ಅವರು, ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ಜನರು ಉದ್ಯೋಗ ದೊರಕದೆ ಗುಳೆ ಹೋಗುವುದನ್ನು ತಡೆಯಲು ನರೇಗಾ ಪರಿಣಾಮಕಾರಿಯಾಗಿದೆ. ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಬರಗಾಲದ ಸಂದರ್ಭದಲ್ಲಿ ಹೆಚ್ಚುವರಿಯಾಗಿ 50 ಮಾನವ ದಿನಗಳನ್ನು ಸೃಜಿಸಲು ಅವಕಾಶವಿದೆ. ಈ ಕಾರಣದಿಂದಾಗಿ ಹೆಚ್ಚುವರಿ ಮಾನವ ದಿನಗಳ ಸೃಜನೆ ಅವಕಾಶ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಬರಗಾಲವನ್ನು ಎದುರಿಸಲು ಸಿದ್ದವಾಗಿದೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಬಳಿ ರೂ.800 ರಿಂದ 900 ಕೋಟಿ ರೂಪಾಯಿ ಹಣ ಲಭ್ಯವಿದೆ. ಇದನ್ನು ಕುಡಿಯುವ ನೀರು, ಮೇವು ಖರೀದಿ ಸೇರಿದಂತೆ ಅಗತ್ಯ ಕಾರ್ಯಗಳಿಗೆ ಬಳಸಬಹುದಾಗಿದೆ. ಸರ್ಕಾರ ಬರಗಾಲ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ಸಿದ್ದವಿದೆ.
ಮಹದಾಯಿ, ಕೃಷ್ಣಾ ಮೇಲ್ದಂಡೆ, ತುಂಗಭದ್ರಾ ನೀರಾವರಿ ಯೋಜನೆಗಳ ಕುರಿತು ಸಮಪರ್ಕ ಉತ್ತರ ನೀಡಲಾಗುವುದು. ವಿರೋಧ ಪಕ್ಷಗಳು ಇದರ ಹೊರತಾಗಿ ಬೇರೆ ಯಾವುದೆ ವಿಚಾರವನ್ನು ಚರ್ಚಿಸಲು ಇಚ್ಛಿಸಿದರೆ ಸಭಾಧ್ಯಕ್ಷರಿಗೆ ನಿಯಮಾನುಸಾರ ನೋಟಿಸ್ ನೀಡಿ. ಇದರ ಬಗ್ಗೆಯೂ ಚರ್ಚಿಸಲು ಸರ್ಕಾರ ಸಿದ್ದವಿದೆ. ಸದನದ ಕಲಾಪಗಳಿಗೆ ಅಡ್ಡಿಪಡಿಸಿ ಕಾಲವನ್ನು ಹರಣ ಮಾಡುವುದನ್ನು ಬಿಟ್ಟು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಜಿಲ್ಲಾಡಳಿತಗಳಲ್ಲಿ ಬರ ನಿರ್ವಹಣೆಗಾಗಿ ರೂ.895 ಕೋಟಿ ಇದೆ: ಕೃಷ್ಣ ಭೈರೇಗೌಡ
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಉಂಟಾಗಿದ್ದು, ಈಗಾಗಲೇ 223 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಖಾತೆಗಳಲ್ಲಿ ಬರ ನಿರ್ವಹಣೆಗೆ ಒಟ್ಟು ರೂ.895 ಕೋಟಿ ಹಣ ಮೀಸಲಿರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

ಸೋಮವಾರ ಚಳಿಗಾಲದ ವಿಧಾನಸಭೆ ಕಲಾಪದಲ್ಲಿ ಬರ ನಿರ್ವಹಣೆ ಕುರಿತ ಚರ್ಚೆಯ ಮೇಲೆ ಉತ್ತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಜೂನ್‍ನಲ್ಲಿ ಶೇ.57, ಆಗಸ್ಟ್‍ನಲ್ಲಿ ಶೇ.73, ಸ್ಪೆಪ್ಟಂಬರ್‍ನಲ್ಲಿ ಶೇ.10 ರಷ್ಟು ಹಾಗೂ ಅಕ್ಟೋಬರ್‍ನಲ್ಲಿ ಶೇ.65 ರಷ್ಟು ಮಳೆಯ ಕೊರತೆಯಾಗಿದೆ. ಪ್ರಸಕ್ತ ವರ್ಷ 82.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೇ ಶೇ.74 ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆಯಿಂದಾಗಿ 46 ಲಕ್ಷ ಹೆಕ್ಟೇರ್ ಕೃಷಿ, 2 ಲಕ್ಷ ಹೆಕ್ಟೇರ್ ತೋಟಗಾರಿಕೆ ಸೇರಿ 48 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಸಚಿವರ ಬರ ಅಧ್ಯಯನ: ರಾಜ್ಯದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ ಜನರ ಸಂಕಷ್ಟಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತೊಂದರೆಯಾಗದಂತೆ ಕ್ರಮವಹಿಸಲು ರಾಜ್ಯ ಸರ್ಕಾರ ಅನೇಕ ರೀತಿಯ ಪರಿಹಾರಗಳನ್ನು ಕೈಗೊಂಡಿದೆ.
ಮುಖ್ಯಮಂತ್ರಿಗಳು ಬರ ನಿರ್ವಹಣೆಗಾಗಿ ಮೂರು ಸಭೆಗಳನ್ನು ಜರುಗಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಸರ್ಕಾರವು ಬರ ನಿರ್ವಹಣೆಗಾಗಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಈಗಾಗಲೇ 8 ಸಭೆಗಳನ್ನು ಜರುಗಿಸಿ ಬರ ಪರಿಸ್ಥಿತಿ ಹಾಗೂ ಜಿಲ್ಲಾಡಳಿಗಳು ಕೈಗೊಂಡಿರುವ ಮುಂಜಾಗ್ರತೆ ಹಾಗೂ ಪರಿಹಾರ ಕ್ರಮಗಳನ್ನು ಪರಾಮರ್ಶಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದೆ.
ರಾಜ್ಯದ 22 ಜಿಲ್ಲೆಗಳಿಗೆ ಸ್ವತಃ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಬರಗಾಲದ ಸ್ಥಿತಿಯನ್ನು ಅವಲೋಕಿಸಿದ್ದೇನೆ. ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ ಆಯಾ ವಿಭಾಗದ ಜಿಲ್ಲಾಧಿಕಾರಿಗಳ ಹಾಗೂ ತಹಶೀಲ್ದಾರರ ಸಭೆ ಜರುಗಿಸಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಜಿಲ್ಲಾ ಮಟ್ಟದಲ್ಲಿ ಬರ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ 133 ಸಭೆಗಳನ್ನು ಜರುಗಿಸಿದ್ದಾರೆ ಎಂದರು.












Click it and Unblock the Notifications