ಪರಿಷತ್ ಫೈಟ್: ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್‌ಗೆ ಬಿಜೆಪಿ ನೋಟಿಸ್
ಬೆಂಗಳೂರು, ಮೇ 23: ವಿಧಾನ ಪರಿಷತ್‌ನ 6 ಸ್ಥಾನಗಳಿಗೆ ಜೂನ್ 3ರಂದು ಮತದಾನ ನಡೆಯಲಿದೆ. ಚುನಾವಣೆಗೆ ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉಡುಪಿ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್‌ಗೆ ಬಿಜೆಪಿ ನೋಟಿಸ್ ನೀಡಿದೆ.
ಗುರುವಾರ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರಾದ ಲಿಂಗರಾಜ್ ಪಾಟೀಲ್ ರಘುಪತಿ ಭಟ್‌ಗೆ ನೋಟಿಸ್ ನೀಡಿದ್ದಾರೆ. ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ಶಿವಮೊಗ್ಗದ ಖ್ಯಾತ ವೈದ್ಯ ಧನಂಜಯ ಸರ್ಜಿ.

ಆದರೆ ಬಿಜೆಪಿ ನಾಯಕ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪಿದ ಕಾರಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಾಮಪತ್ರವನ್ನು ವಾಪಸ್ ಪಡೆಯದೇ ಚುನಾವಣಾ ಕಣದಲ್ಲಿ ಮುಂದುವರೆದಿದ್ದಾರೆ.
ನೋಟಿಸ್‌ನ ವಿವರಗಳು: ನೋಟಿಸ್‌ನಲ್ಲಿ 3/6/2024ರ ಸೋಮವಾರದಂದು ನಡೆಯುವ ವಿಧಾನಪರಿಷತ್ ಚುನಾವಣೆಗೆ ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೀರಿ. ಇದು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದಂತಾಗಿದೆ.
ಆದುದರಿಂದ ಈ ಪತ್ರ ತಲುಪಿದ ಎರಡು ದಿನದ ಒಳಗಾಗಿ ಬಿಜೆಪಿ ಶಿಸ್ತು ಸಮಿತಿಯ ಮುಂದೆ ಸ್ಪಷ್ಟೀಕರಣ ನೀಡಬೇಕೆಂದು ನೋಟೀಸ್ ನೀಡಲಾಗಿದೆ ಎಂದು ವಿವರಣೆ ನೀಡಲಾಗಿದೆ. ನೋಟಿಸ್ ಕುರಿತು ರಘುಪತಿ ಭಟ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನೈಋತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಶಿವಮೊಗ್ಗ, ದಾವಣಗೆರೆ (ಹೊನ್ನಾಳಿ, ಚನ್ನಗಿರಿ) ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ಸೇರುತ್ತವೆ. ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಚುನಾವಣೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜನಾಥ. ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ. ರಘುಪತಿ ಭಟ್ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಮಾಜಿ ಸಚಿವ, ಬಿಜೆಪಿಯ ಉಚ್ಛಾಟಿತ ನಾಯಕ ಕೆ. ಎಸ್. ಈಶ್ವರಪ್ಪ ರಘುಪತಿ ಭಟ್ ಬೆಂಬಲಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಹಾಲಿ ಶಾಸಕರಲ್ಲಿ ರಘುಪತಿ ಭಟ್ ಸಹ ಒಬ್ಬರು. 2018ರ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಲ್ಲಿ ಅವರು ಜಯಗಳಿಸಿದ್ದರು. ಆದರೆ 2023ರಲ್ಲಿ ಅವರನ್ನು ಬಿಟ್ಟು ಯಶ್‌ಪಾಲ್ ಎ. ಸುವರ್ಣರನ್ನು ಬಿಜೆಪಿ ಅಭ್ಯರ್ಥಿ ಮಾಡಿತ್ತು. ಈಗ ರಘುಪತಿ ಭಟ್ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಬಯಸಿದ್ದರು.
ವಿಧಾನ ಪರಿಷತ್ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಮೇ 16ರಂದು ರಘುಪತಿ ಭಟ್ ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರ ಅಭ್ಯರ್ಥಿಯಾದ ಅವರು ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ನಾಮಪತ್ರ ವಾಪಸ್ ಪಡೆಯಲು ಮೇ 20 ಅಂತಿಮ ದಿನವಾಗಿತ್ತು. ನಾಮಪತ್ರ ವಾಪಸ್ ಪಡೆಯದೇ ಅವರು ಕಣದಲ್ಲಿ ಉಳಿದಿದ್ದಾರೆ. ಆದ್ದರಿಂದ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿದೆ.
ನೈಋತ್ಯ ಪದವೀಧರ ಕ್ಷೇತ್ರದಲ್ಲಿ 108 ಮತಗಟ್ಟೆಗಳಿದ್ದು, ಒಟ್ಟು 85,089 ಮತದಾರರು ಇದ್ದಾರೆ. ಇವರಲ್ಲಿ 43,720 ಪುರುಷ ಮತದಾರರು, 41,368 ಮಹಿಳಾ ಮತದಾರರು ಹಾಗೂ ಒಬ್ಬರು ಇತರೆ ಮತದಾರರು. ಚುನಾವಣಾ ಕಣದಲ್ಲಿ ಒಟ್ಟು 10 ಅಭ್ಯರ್ಥಿಗಳಿದ್ದಾರೆ. ಚುನಾವಣೆಗೆ ಮತದಾನ ಜೂನ್ 3 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಜೂನ್ 6ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.
ಗುರುವಾರ ಉಡುಪಿಯಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್, "ಮಾಜಿ ಶಾಸಕ ರಘುಪತಿ ಭಟ್ ಬಂಡಾಯದಿಂದ ಹಿಂದೆ ಸರಿಯದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರು 24 ಗಂಟೆಯೊಳಗೆ ನಿವೃತ್ತಿ ಘೋಷಿಸಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮ ಜರುಗಿಸುವುದು ಅನಿವಾರ್ಯ" ಎಂದು ಹೇಳಿದ್ದರು.












Click it and Unblock the Notifications