ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್; ಗ್ರ್ಯಾಚುಟಿ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು, ನವೆಂಬರ್ 07: ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಗ್ರಾಚುಟಿ ಸಮಸ್ಯೆಗಳನ್ನು ನೀಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ವಿಷಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಶೀಘ್ರವೇ ಸಿಎಂ ಸಿದ್ದರಾಮಯ್ಯನವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
2011-12ನೇ ಸಾಲಿನಿಂದ ನಿವೃತ್ತಿಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಂಯುಕ್ತ ಸಂಘರ್ಷ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟನೆಗಳ ವತಿಯಿಂದ 2011-12 ನೇ ಸಾಲಿನಿಂದ ನಿವೃತ್ತಿಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಈ ಸಂಬಂಧ ಶೀಘ್ರವೇ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗುವುದು ಎಂದು ಹೇಳಿದರು.
ಇಲಾಖೆಯಲ್ಲಿ ಕೆಲ ಅಧಿಕಾರಿಗಳ ಅಚಾತುರ್ಯದಿಂದ 2011ನೇ ಸಾಲಿನ ಬದಲಾಗಿ 2023ನೇ ಸಾಲಿನಿಂದ ಗ್ರ್ಯಾಚುಟಿ ಜಾರಿಗೆ ಬಂದಿದೆ. ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು. ಈಗಾಗಲೇ 3-4 ಬಾರಿ ಹಣಕಾಸು ಇಲಾಖೆಯವರ ಜೊತೆ ಮಾತುಕತೆ ನಡೆಸಲಾಗಿದೆ. ಮುಖ್ಯಮಂತ್ರಿ ಅವರ ಜೊತೆ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು. ಕರ್ನಾಟಕದಲ್ಲಿ ಅಂಗನವಾಡಿ ಆರಂಭವಾಗಿ 50 ವರ್ಷಗಳಾಗಿದ್ದು, ನವೆಂಬರ್ 19 ರಂದು ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಮಹೇಶ್ ಬಾಬು, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಮಹಾ ಮಂಡಲದ ಅಧ್ಯಕ್ಷರಾದ ಜಿ.ಆರ್. ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಬಿ.ನಾಗರತ್ನಮ್ಮ, ಎಐಯುಟಿಯುಸಿ ಅಧ್ಯಕ್ಷರಾದ ಬಿ.ಅಮ್ಜದ್, ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ, ಎಐಟಿಯುಸಿ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ, ಪ್ರಧಾನ ಕಾರ್ಯದರ್ಶಿ ಎಂ.ಉಮಾದೇವಿ ಸೇರಿದಂತೆ ಸಂಘಟನೆಯ ನೂರಾರು ಮಂದಿ ಉಪಸ್ಥಿತರಿದ್ದರು.












Click it and Unblock the Notifications