ರಾಜ್ಯದಲ್ಲಿ ಬಸ್ ಪ್ರಯಾಣಿಕರಿಗೆ ಮತ್ತೊಂದು ರೀತಿಯ ಶಾಕ್
ಬೆಂಗಳೂರು, ಮೇ8: ರಾಜ್ಯದಲ್ಲಿ ಇತ್ತೀಚೆಗೆ ಒಂದೇ ಸಮನೆ ಬಸ್ ಪ್ರಯಾಣ ದರ ಏರಿಸಿ, ಪ್ರಯಾಣಿಕರಿಗೆ ಶಾಕ್ ಟ್ರೀಟ್ ಮೆಂಟ್ ಕೊಟ್ಟಿರುವ ರಾಜ್ಯ ಸರಕಾರ ಈ ಬಾರಿ ಮತ್ತೊಂದು ರೀತಿಯ ಶಾಕ್ ಟ್ರೀಟ್ ಮೆಂಟ್ ಕೊಡಲು ಸಜ್ಜಾಗುತ್ತಿದೆ.
ಎತ್ತಿಗೆ ಜ್ವರ; ಪ್ರಯಾಣಿಕರಿಗೆ ಬರೆ:
ಸಂಸ್ಥೆ ನೂರಾರು ಕೋಟಿ ರೂ ಲೆಕ್ಕದಲ್ಲಿ ನಷ್ಟಕ್ಕೀಡಾಗಿದೆ. ಇದನ್ನು ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಮರ್ಥಿಸಿಕೊಂಡಿರುವಾಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಬಸ್ಸುಗಳ ಸಂಚಾರವನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ.
ಈ ಮಧ್ಯೆ, ಅನಧಿಕೃತವಾಗಿ ನಿನ್ನೆಯಿಂದಲೇ ಕೆಲವು ಕಡೆ ಬಸ್ಸುಗಳನ್ನು ಕಡಿಮೆ ಮಾಡಲಾಗಿದೆ ಎಂದು ಅನೇಕ ಪ್ರಯಾಣಿಕರು ದೂರಿದ್ದಾರೆ.

ಖಾಲಿ ಬಸ್ ಓಡೋಲ್ಲ; ಸಂಚಾರ ಕಟ್ : 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ಹಾಗೂ ಬಿಎಂಟಿಸಿ ಸಂಸ್ಥೆಗಳು ಭಾರಿ ನಷ್ಟದಲ್ಲಿವೆ. ಆ ನಷ್ಟವನ್ನು ಸರಿದೂಗಿಸಲು ಪ್ರಯಾಣಿಕರಿಲ್ಲದೆ ಅನಗತ್ಯವಾಗಿ ಸಂಚರಿಸುವ ಎಲ್ಲಾ ಬಸ್ಸುಗಳನ್ನು ಹಿಂತೆಗೆದುಕೊಳ್ಳಲಾಗುವುದು. ಬಸ್ಸುಗಳ ಸಂಚಾರ ಸಮಯವನ್ನೂ ಬದಲಿಸಲಾಗುವುದು' ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸ್ಟ್ ಕಟ್ಟಿಂಗ್ ನೀತಿಗೆ ಮೊರೆ:
ಈಶಾನ್ಯ, ವಾಯವ್ಯ ನಿಗಮಗಳ ವ್ಯಾಪ್ತಿಯಲ್ಲಿ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್ಸುಗಳೂ ಸೇರಿದಂತೆ ಬೆಂಗಳೂರಿನ ಬಿಎಂಟಿಸಿಯ ಅನೇಕ ಬಸ್ಸುಗಳಲ್ಲಿ ಕೇವಲ ಹತ್ತಾರು ಮಂದಿ ಪ್ರಯಾಣಿಕರಿದ್ದರೂ ಅವು ಸಂಚರಿಸುತ್ತವೆ. ಮಧ್ಯಾಹ್ನದ ವೇಳೆ ಇಂತಹ ಪರಿಸ್ಥಿತಿ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಒಬ್ಬಿಬ್ಬರೇ ಇದ್ದರೂ ಅಥವಾ ಖಾಲಿ ಬಸ್ಸು ಕೂಡ ಸಂಚರಿಸುವ ನಿದರ್ಶನಗಳಿವೆ. ಇದರಿಂದ ಸಂಸ್ಥೆಗಳಿಗೆ ಸಾಕಷ್ಟು ನಷ್ಟವಾಗುತ್ತಿದೆ. ಇಂತಹ ಬಸ್ ಪಾಳಿ ರದ್ದುಪಡಿಸಲಾಗುವುದು. ಆದರೆ ಜನರಿಗೆ ಅಗತ್ಯವಿರುವ ಹಾಗೂ ಜನ ಹೆಚ್ಚು ಓಡಾಡುವ ಸಮಯದಲ್ಲಿ ಬಸ್ ಸಂಚರಿಸಲು ಅವಕಾಶ ಕಲ್ಪಿಸಲಾಗುತ್ತದೆ. ಒಟ್ಟು 7791 ಟ್ರಿಪ್ ಗಳ ಪೈಕಿ ತಕ್ಷಣಕ್ಕೆ 150 ಟ್ರಿಪ್ ಬದಲಿಸಿ, ಬೇರೆ ಪಾಳಿಯಲ್ಲಿ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಸ್ಥೆಯ ನಷ್ಟ ಬಿಜೆಪಿ ಸರ್ಕಾರದ ಕೊಡುಗೆ:
'ಹಿಂದಿನ ಸಾರಿಗೆ ಸಚಿವ ಆರ್ ಅಶೋಕ್ ಅವರ ಅವಧಿಯಲ್ಲೇ ಬಿಎಂಟಿಸಿ 47 ಕೋಟಿ ರೂ. ನಷ್ಟದಲ್ಲಿತ್ತು. ಕೆಎಸ್ಸಾರ್ಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳು ಸಹ ನಷ್ಟದಲ್ಲಿದ್ದವು. ಅಂದರೆ ಇಲಾಖೆ ಒಟ್ಟು 147 ಕೋಟಿ ರೂ ನಷ್ಟದ ಹೊರೆ ಹೊತ್ತಿತ್ತು. 5 ವರ್ಷದಲ್ಲಿ ಇದು ಬಿಜೆಪಿ ಸರ್ಕಾರದ ಕೊಡುಗೆಯಾಗಿತ್ತು' ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಆರೋಪಿಸಿದರು.












Click it and Unblock the Notifications