BDA Flat: ಬಿಡಿಎ 1,176 ಫ್ಲಾಟ್ ಹಂಚಿಕೆ, ದರಪಟ್ಟಿ ನೋಡಿ
ಬೆಂಗಳೂರು, ಜುಲೈ 04: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮನೆ ಕೊಳ್ಳುವವರಿಗೆ ಬಿಡಿಎ ಸಿಹಿಸುದ್ದಿ ನೀಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೊಮ್ಮಘಟ್ಟದಲ್ಲಿ ನಿರ್ಮಿಸಿರುವ ವಸತಿ ಸಮುಚ್ಛಗಳನ್ನು ಹಂಚಿಕೆ ಮಾಡಲಿದೆ.
ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರದ ಶಾಸಕ ಎನ್. ಎ. ಹ್ಯಾರಿಸ್ ಕೊಮ್ಮಘಟ್ಟದಲ್ಲಿ ಬಿಡಿಎ ವತಿಯಿಂದ ನಿರ್ಮಿಸಿರುವ ವಸತಿ ಸಮುಚ್ಛಯವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್. ಜಯರಾಮ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದರು.

ಬಿಡಿಎ ಫ್ಲಾಟ್ ಹಂಚಿಕೆ: ಕೊಮ್ಮಘಟ್ಟದಲ್ಲಿ ಬಿಡಿಎ ನಿರ್ಮಾಣ ಮಾಡಿರುವ ಫ್ಲಾಟ್‌ಗಳು ಶೀಘ್ರವೇ ಹಂಚಿಕೆಗೆ ಸಿಗಲಿವೆ. ವಿವಿಧ ಸಂಸ್ಥೆಗಳ ಎನ್‌ಒಸಿಗಾಗಿ ಬಿಡಿಎ ಕಾಯುತ್ತಿದ್ದು, ಮೂರು ಬ್ಲಾಕ್‌ಗಳು ಸೇರಿ ಒಟ್ಟು 1,176 ಫ್ಲಾಟ್‌ಗಳಿವೆ. ಇಲ್ಲಿ ನೀರು ಸಂಸ್ಕರಣಾ ಘಟಕ, ಮಳೆ ನೀರು ಸಂಗ್ರಹ ವ್ಯವಸ್ಥೆ ಮತ್ತು 924 ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಇದೆ.
ಎನ್. ಎ. ಹ್ಯಾರಿಸ್ ಅವರು ನೀಡಿರುವ ಮಾಹಿತಿಯಂತೆ ಕೊಮ್ಮಘಟ್ಟದಲ್ಲಿ 3 ಬಿಎಚ್‌ಕೆ ಫ್ಲಾಟ್‌ಗೆ (1,314 ಚದರಡಿ) 65.70 ಲಕ್ಷ, 2 ಬಿಎಚ್‌ಕೆಗೆ (978 ಚದರಡಿ) 54.3 ಲಕ್ಷ ದರ ನಿಗದಿ ಮಾಡಲಾಗಿದೆ.
ಕೊಮ್ಮಘಟ್ಟ ಮಾತ್ರವಲ್ಲದೇ ವಿವಿಧ ವಸತಿ ಸಮುಚ್ಛಯಗಳಲ್ಲಿ ಒಟ್ಟು 1,170 ಫ್ಲಾಟ್‌ಗಳು ಹಂಚಿಕೆಗೆ ಲಭ್ಯವಿದೆ. ಹಂತ ಹಂತವಾಗಿ ಬಿಡಿಎ ಇದನ್ನು ಹಂಚಿಕೆ ಮಾಡಲು ಅರ್ಜಿಗಳನ್ನು ಕರೆಯಲಿದೆ.
ಬಿಎಂಆರ್‌ಸಿಎಲ್ ಈಗ ನಮ್ಮ ಮೆಟ್ರೋ ರೈಲುಗಳ ಸಂಚಾರವನ್ನು ಕೆಂಗೇರಿ ತನಕ ವಿಸ್ತರಣೆ ಮಾಡಿದೆ. ಆದ್ದರಿಂದ ಕೊಮ್ಮಘಟ್ಟ ಪ್ರದೇಶದಲ್ಲಿ ನಿರ್ಮಾಣವಾಗಿರುವ ಬಿಡಿಎ ಫ್ಲಾಟ್‌ಗಳಿಗೆ ಅಧಿಕ ಬೇಡಿಕೆ ಇದೆ. 2023ರ ಆಗಸ್ಟ್‌ನಲ್ಲಿ ಕೊಮ್ಮಘಟ್ಟ ಪ್ರದೇಶದಲ್ಲಿ ಬಿಡಿಎ ಫ್ಲಾಟ್‌ಗಳಿಗೆ ಇರುವ ಬೇಡಿಕೆಯ ಬಗ್ಗೆ ಬಿಡಿಎ ಮಾಹಿತಿ ನೀಡಿತ್ತು. ಆಗ ಕೇವಲ 2 ಬಿಎಚ್‌ಕೆ ಫ್ಲಾಟ್‌ಗಳು ಮಾತ್ರ ಇದ್ದವು. ಈಗ 3, 2 ಮತ್ತು 1 ಬಿಎಚ್‌ಕೆ ಫ್ಲಾಟ್‌ಗಳಿವೆ.
ಬಿಡಿಎ ಕೊಮ್ಮಘಟ್ಟದಲ್ಲಿ ಹಂತ-1, ಹಂತ-2 ಎಂದು ವಿವಿಧ ವಸತಿ ಸಮುಚ್ಛಯ ನಿರ್ಮಾಣ ಮಾಡಿದೆ. ಇವು ಕೆಂಗೇರಿ ಮೆಟ್ರೋ ನಿಲ್ದಾಣದಿಂದ 2.2 ಮತ್ತು ಚಲ್ಲಘಟ್ಟ ನಿಲ್ದಾಣ 1.5 ಕಿ. ಮೀ. ದೂರದಲ್ಲಿದೆ. ಮೊದಲು ಇಲ್ಲಿ ಫ್ಲಾಟ್‌ಗಳಿಗೆ ಬೇಡಿಕೆ ಇರಲಿಲ್ಲ. ಆದರೆ ಮೆಟ್ರೋ ಸಂಪರ್ಕದ ಬಳಿಕ ಬೇಡಿಕೆ ಹೆಚ್ಚಿದೆ.
ಎನ್. ಎ. ಹ್ಯಾರಿಸ್ ಮಾತನಾಡಿ, "ಕೆಂಪೇಗೌಡ ಬಡಾವಣೆ ಮತ್ತು ಕೊಮ್ಮಘಟ್ಟ ವಸತಿ ಸಮುಚ್ಛಯದ ನಿವಾಸಿಗಳಿಗೆ ನಾಗರಿಕ ಸೌಲಭ್ಯ ನಿವೇಶನದಲ್ಲಿ ಬಹು ಉಪಯೋಗಿ ವಾಣಿಜ್ಯ ಸಂಕೀರ್ಣ ಒಳಗೊಂಡ ಕ್ಲಬ್ ಹೌಸ್, ಈಜುಕೊಳ, ಶಾಪಿಂಗ್ ಮಳಿಗೆಗಳು, ವ್ಯಾಯಾಮ ಶಾಲೆ, ಮಿನಿ ಥಿಯೇಟರ್, ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ" ಎಂದರು.
ಬಿಡಿಎ ಫ್ಲಾಟ್‌ಗಳ ಜೊತೆ ನಿವೇಶನ ಹಂಚಿಕೆಗೂ ತಯಾರಿ ನಡೆದಿದೆ. ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲು ಬಿಡಿಎ ತಯಾರಾಗಿದೆ. ಕರ್ನಾಟಕ ಹೈಕೋರ್ಟ್‌ನಿಂದ ಅಂತಿಮ ಒಪ್ಪಿಗೆ ಸಿಕ್ಕಿದ ತಕ್ಷಣ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ.












Click it and Unblock the Notifications