ಸರ್ಕಾರದಲ್ಲಿ ಡಿಸಿಎಂ ಹುದ್ದೆ ವಿಚಾರ: ಕೆಸಿ ವೇಣುಗೋಪಾಲ್ ತಮ್ಮ ನಾಯಕರಿಗೆ ಸೂಚಿಸಿದ್ದೇನು?
ಬೆಂಗಳೂರು, ಸೆಪ್ಟಂಬರ್ 24: ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಗಳ ಸಂಖ್ಯೆ ಕುರಿತು ವ್ಯಾಪಕ ಚರ್ಚೆಗಳು, ಮಾತುಗಳು ಕೇಳಿ ಬಂದಿವೆ. ಈ ಸಂಬಂಧ ವಿಪಕ್ಷದ ಪ್ರತಿಕ್ರಿಯೆಗಳು ಇನ್ನಷ್ಟು ಚರ್ಚೆಗೆ ಅನುವು ಮಾಡಿಕೊಟ್ಟಿವೆ. ಈ ಕುರಿತು ವಿಪಕ್ಷಗಳಿಗೆ ತಿರುಗೇಟು ನೀಡುವ ಜೊತೆಗೆ ಸ್ವಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಕೆಲವು ಸೂಚನೆ ನೀಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ಮಹಿಳೆಯರು, ಬಡವರು ಮತ್ತು ಜನಸಾಮಾನ್ಯರಿಗೆ ಅಧಿಕಾರ ನೀಡಿದ ನಾಲ್ಕು ಕಾಂಗ್ರೆಸ್ ಭರವಸೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಅದ್ಭುತ ಸೇವೆ ನೀಡಿದೆ. 'ಕರ್ನಾಟಕ ಮಾದರಿ' ರಾಜ್ಯದ ಬಗ್ಗೆ ಈಗ ದೇಶಾದ್ಯಂತ ಮಾತನಾಡುತ್ತಿದೆ ಹಾಗ ಪಕ್ಷದ ಕಾರ್ಯಗಳನ್ನು ಅನುಸರಿಸುತ್ತಿದೆ.

ಕರ್ನಾಟಕದಲ್ಲಿನ ಕಲ್ಯಾಣ ಕ್ರಮಗಳ ಯಶಸ್ಸು ಬಿಜೆಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳನ್ನು ತಲ್ಲಣಗೊಳಿಸಿದೆ. ನಮ್ಮ ಸಾಧನೆಗಳು ವಿಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ಇಲ್ಲ ಸಲ್ಲದ ವಿಚಾರಗಳನ್ನು ಎತ್ತಿಕೊಂಡು ವಿಪಕ್ಷಗಳು ಇದೀಗ ಮುಖ್ಯಮಂತ್ರಿ ಹುದ್ದೆ ಮತ್ತು ಉಪಮುಖ್ಯಮಂತ್ರಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಅನಗತ್ಯ ವದಂತಿಗಳನ್ನು ಉತ್ತೇಜಿಸುತ್ತಿದ್ದಾರೆ. ಅದಕ್ಕಾಗಿ ಮಾಧ್ಯಮದ ಒಂದು ವಿಭಾಗವನ್ನು ಬಳಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಒಗ್ಗಟ್ಟು ಪ್ರದರ್ಶನ ಅಗತ್ಯ, ಸಾರ್ವಜನಿಕ ಹೇಳಿಕೆ ಸಲ್ಲದು
ನಮ್ಮ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಹಾಗೂ ಮಂತ್ರಿಗಳು ಬಿಜೆಪಿ ಮತ್ತಿತರ ಪ್ರಾದೇಶಿಕ ಸಂಘಟನೆಗಳ ಪ್ರಭಾವಕ್ಕೆ ಒಳಗಾಗಿದ್ದಾರೆ. ಅವರು ಸಹ ಇಂತಹ ವದಂತಿಗಳ ಬಗ್ಗೆ ಪ್ರತಿಕ್ರಿಯಿಸುವುದು ಕಳವಳಕಾರಿಯಾಗಿದೆ ಎಂದರು.
ಕಲ್ಯಾಣ ಸರ್ಕಾರದ 'ಕರ್ನಾಟಕ ಮಾದರಿ'ಗೆ ಕಾಂಗ್ರೆಸ್‌ನಲ್ಲಿಯೇ ಸಂಪೂರ್ಣ ಒಗ್ಗಟ್ಟು ಪ್ರದರ್ಶನದ ಅಗತ್ಯವಿದೆ. ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್ ನ ವಿಚಾರ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿಯೇ ಪ್ರಸ್ತಾಪಿಸಬೇಕು ಎಂದು ಸೂಚಿಸಿದರು.

ಹೇಳಿಕೆಗಳಿಂದ ಪಕ್ಷದ ಮೇಲೆ ದುಷ್ಪರಿಣಾಮ
ಪಕ್ಷದ ಯಾವುದೇ ಹೇಳಿಕೆಗಳು ಪಕ್ಷದ ಹಿತಾಸಕ್ತಿ ಮತ್ತು ಸರ್ಕಾರದ ಸುಗಮ ಆಡಳಿತ ನಿರ್ವಹಣೆಗೆ, ನಮ್ಮ ಯಶಸ್ಸಿಗೆ ವಿರುದ್ಧವಾಗಿವೆ. ಇಂತಹ ಸಾರ್ವಜನಿಕ ಟೀಕೆಗಳು ಸ್ವೀಕಾರಾರ್ಹವಲ್ಲ. ಇದನ್ನು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಗಮನಿಸಬೇಕು ಎಂದು ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.
ಮುಖ್ಯವಾಗಿ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಗುರಿಗೆ ಸಮರ್ಪಣಾ ಮನೋಭಾವ ನಾವು ಹೊಂದಿದ್ದೇವೆ. ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ನೀಡುವ ಹೇಳಿಕೆಗಳು ಗೊಂದಲ ಸೃಷ್ಟಿಸುವ ಜೊತೆಗೆ ಪಕ್ಷದ ಶಿಸ್ತು ಮತ್ತು ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ತಿಳಿಸಿದರು.












Click it and Unblock the Notifications