Karnataka Railway: ರಾಜ್ಯದ 61 ರೈಲು ನಿಲ್ದಾಣಗಳಿಗೆ ಐತಿಹಾಸಿಕ ರೂಪ: ವಿ.ಸೋಮಣ್ಣ
ಬೆಂಗಳೂರು, ಫೆಬ್ರವರಿ 16: ಕೇಂದ್ರ ಬೆಂಗಳೂರು ಸೇರಿದಂತೆ ಕರ್ನಾಟಕಕ್ಕೆ ₹7,564 ಕೋಟಿ ಅನುದಾನವನ್ನು ಕಳೆದ ಫೆಬ್ರವರಿ 1ರಂದು ನಡೆದ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದೆ. ಇತ್ತೀಚೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಿಂದ ದೇವನಹಳ್ಳಿ ವಿಮಾನ ನಿಲ್ದಾಣ ಸಂಪರ್ಕ ಯೋಜನೆ ಬಗ್ಗೆ ಸಿಹಿ ಸುದ್ದಿ ನೀಡಿದ್ದರು. ಈ ಬೆನ್ನಲ್ಲೆ ರಾಜ್ಯದ ಹತ್ತಾರು ರೈಲು ನಿಲ್ದಾಣಗಳನ್ನು ಐತಿಹಾಸಿಕ ಸ್ಥಳ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಸಾಮಾಜಿ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡು, ಅಭಿನಂದನೆ ತಿಳಿಸಿದ್ದಾರೆ. ಕರ್ನಾಟಕದ 61 ರೈಲ್ವೆ ನಿಲ್ದಾಣಗಳನ್ನು ಐತಿಹಾಸಿಕ ಸ್ಥಳ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ಕುರಿತು ಘೋಷಿಸಲಾಗಿದೆ. ಕೇಂದ್ರಕ್ಕೆ, ಕೇಂದ್ರ ರೈಲ್ವೆ ಸಚಿವರಿಗೆ ಅವರು ಧನ್ಯವಾದ ತಿಳಿಸಿದರು.

ಈ ಬಾರಿ ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ₹7,564 ಕೋಟಿ ಅನುದಾನ ನೀಡಿರುವುದಲ್ಲದೇ, ರಾಜ್ಯದ ರೈಲ್ವೆ ನಿಲ್ದಾಣಗಳು ಹಾಗೂ ರೈಲ್ವೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಮನಾರ್ಹ ಕೊಡುಗೆ ನೀಡುತ್ತಿದೆ. ಇದು ಸ್ವಾಗತಾರ್ಹ ಎಂದರು.
ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಕೇವಲ ₹850 ಕೋಟಿ ಅನುದಾನ ನೀಡಿದ್ದು, ನಮ್ಮ ಸರ್ಕಾರ ಅದಕ್ಕಿಂತ ಒಂಭತ್ತು ಪಟ್ಟು ಹೆಚ್ಚು ಅನುದಾನ ನೀಡಿದೆ. ಇದರಿಂದ ರಾಜ್ಯ ರೈಲ್ವೆ ಸಂಪರ್ಕ ಸುಧಾರಣೆ ಜೊತೆಗೆ ಹೊಸ ಮಾರ್ಗಗಳ ಯೋಜನೆಗೆ ಉತ್ತೇಜನ ನೀಡಲಾಗಿದೆ. ರೈಲ್ವೆ ಜಾಲ ಸುಧಾರಣೆ ವೇಗಗೊಂಡಿದೆ.

2014 ರಿಂದ ಈವರೆಗೆ ರಾಜ್ಯದಲ್ಲಿ 1,652 ರೈ.ಕಿ.ಮೀ ಉದ್ದದ ಹೊಸ ರೈಲ್ವೆ ಮಾರ್ಗಗಳನ್ನು ನಿರ್ಮಿಸಲಾಗಿದೆ. ಇಡೀ ಶ್ರೀಲಂಕಾದಲ್ಲಿರುವ ರೈಲ್ವೆ ಮಾರ್ಗಗಳಿಗಿಂತ ಇದು ಅಧಿಕವಾಗಿದೆ ಎನ್ನುವುದು ಹೆಮ್ಮೆಯ ಸಂಗತಿ. ಅಷ್ಟೇ ಅಲ್ಲದೇ, ಕಳೆದ 10 ವರ್ಷಗಳಲ್ಲಿ 644 ರೈಲ್ವೆ ಕೆಳ/ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದ್ದು, 10 ವಂದೇ ಭಾರತ್ ರೈಲುಗಳು ರಾಜ್ಯದಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿವೆ. ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎನ್ನುವ ಹೇಳಿಕೆಗಳು ಸತ್ಯಕ್ಕೆ ದೂರವಾದುದು ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯಗಳ ತೆರಿಗೆ ಹಂಚಿಕೆ ಪಾಲು ಹೆಚ್ಚಳ
ಕೇಂದ್ರ ಸರ್ಕಾರುವ ರಾಜ್ಯಗಳಿಗೆ ಹಂಚಿಕೆ ಮಾಡುವ ತೆರಿಗೆ ಪಾಲನ್ನು ಶೇಕಡಾ 32ರಿಂದ ಶೇಕಡಾ 42ಕ್ಕೆ ಏರಿಕೆ ಮಾಡಲಾಗಿದೆ. ಯಾವುದೇ ಅನ್ಯಾಯ ಮಾಡಲಾಗಿಲ್ಲ ಎಂದು ತಿಳಿಸಿದರು. ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿಲ್ಲ. ಇನ್ನೂ ಕರ್ನಾಟಕ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮೂಲ ಸೌಕರ್ಯಗಳು ಒತ್ತು ನೀಡಲಾಗುತ್ತಿದೆ. ಈ ಸಂಬಂಧ ಅಗತ್ಯ ಅನುದಾನ ನೀಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದರು. ಇದೇ ವೇಳೆ ಅವರು ಕರ್ನಾಟಕದ 61 ನಿಲ್ದಾಣಗಳನ್ನು ಐತಿಹಾಸಿಕ ಮಾದರಿಯಲ್ಲಿ ನಿರ್ಮಿಸುವ ಬಗ್ಗೆ ಮಾತನಾಡಿದರು.












Click it and Unblock the Notifications