Karnataka Rains: ಕರಾವಳಿಗೆ ಮತ್ತೆ ರೆಡ್ ಅಲರ್ಟ್, ಉಳಿದೆಡೆ ಭಾರೀ ಮಳೆ ನಿರೀಕ್ಷೆ: ಎಲ್ಲೆಡೆ ಚಳಿಗಾಲದ ವಾತಾವರಣ
ಬೆಂಗಳೂರು, ಜುಲೈ 14: ಕರ್ನಾಟಕ ರಾಜ್ಯದಲ್ಲಿ ಹಲವು ದಿವಸಗಳಿಂದ ಮಳೆ ಆರ್ಭಟಿಸುತ್ತಲೇ ಇದೆ. ಒಂದೊಂದು ಭಾಗಕ್ಕೆ ಒಂದೊಂದು ರೀತಿಯಲ್ಲಿ ಮಳೆಯ ದರ್ಶನವಾಗುತ್ತಿದೆ. ಮಲೆನಾಡು, ಕರಾವಳಿ ಭಾಗಕ್ಕಂತೂ ಎಡೆಬಿಡದೆ ಭಾರೀ ಮಳೆ ಸುರಿಯುತ್ತಲೇ ಇದೆ. ಉತ್ತರ ಒಳನಾಡಿನಲ್ಲೂ ಜಿಟಿ ಜಿಟಿಯಾಗಿ ಮಳೆ ಮುಂದುವರಿದಿದೆ. ಈ ಮಧ್ಯೆ ಹವಾಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ ಶಾಕ್ ನೀಡಿದೆ.
ಹೌದು, ಅರಬ್ಬಿ ಸಮುದ್ರ ಭಾಗದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯದ ವಿಪರೀತ ಪ್ರಭಾವದಿಂದಾಗಿ ಮುಂಗಾರು ಮಳೆ ಮತ್ತಷ್ಟು ಚುರುಕಾಗಿದೆ. ಹೀಗಾಗಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಿತ್ಯ 200 ಮಿಲಿ ಮೀಟರ್‌ಗಿಂತಲೂ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣದಿಂದ ಭಾರಿ ಮಳೆ, ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬರುವ ಸಾಧ್ಯತೆ ಇದೆ. ಹೀಗಾಗಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಸೇರಿದಂತೆ ಜುಲೈ 16ರವರೆಗೆ 'ರೆಡ್ ಅಲರ್ಟ್' ಘೋಷಣೆ ಮಾಡಲಾಗಿದೆ.
ಮಹಾರಾಷ್ಟ್ರ ಹಾಗೂ ಉತ್ತರ ಕೇರಳದ ಕರಾವಳಿಯ ಉದ್ದಕ್ಕೂ ಕಿಲೋ ಮೀಟರ್‌ಗಳ ಎತ್ತದಲ್ಲಿ ಅರಬ್ಬಿ ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಸುಳಿಗಾಳಿ ಉಂಟಾಗಿದೆ. ಅದರ ತೀವ್ರತೆಯ ಪರಿಣಾಮವಾಗಿ ರಾಜ್ಯದ ವಿವಿಧೆಡೆ ಮುಂಗಾರು ಸಕ್ರಿಯವಾಗಲು ಕಾರಣವಾಗಲಿದೆ. ಕಳೆದೊಂದು ವಾರದಿಂದ ಮಳೆಗಾಲ ಜತೆಗೆ ಚಳಿಗಾಲವು ಸೃಷ್ಟಿ ಆಯಿತೇನೊ ಎಂಬ ವಾತಾವರಣ ಉಂಟಾಗಿದೆ.
ಆರೆಂಜ್ ಅಲರ್ಟ್ ಘೋಷಣೆ
ನಂತರ ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಉಳಿದಂತೆ ಮೈಸೂರು, ಚಿತ್ರದುರ್ಗ, ರಾಯಚೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ ಸೇರಿ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಪ್ರಯುಕ್ತ ಮುಂದಿನ ನಾಲ್ಕು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈಗಾಲೇ ಕೆಲವು ದಿನಗಳಿಂದ ಈ ಭಾಗದಲ್ಲಿ ನಿತ್ಯ ಮಳೆಯ ದರ್ಶನವಾಗುತ್ತಿದೆ.

ಉತ್ತರ ಕರ್ನಾಟಕಕ್ಕೆ ಸಾಧಾರಣದಿಂದ ಭಾರಿ ಮಳೆ
ಉಳಿದಂತೆ ಹಾವೇರಿ, ಧಾರವಾಡ, ಗದಗ, ಕೊಪ್ಪಳ, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ಚಾಮರಾಜನಗರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಇನ್ನಿತರ ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ.
ಸಾಧಾರಣ ಮಳೆಯ ಪ್ರದೇಶಗಳಲ್ಲಿ ಒಂದು ವಾರದಿಂದ ಮಬ್ಬು ವಾತಾವರಣ ಕಂಡು ಬರುತ್ತಿದೆ. ಬಿಸಿಲು ಕಣ್ಮರೆ ಆಗಿದ್ದು, ಧಾರಾಕಾರ ಮಳೆಯ ನಿರೀಕ್ಷಿಯಲ್ಲಿದ್ದ ಇಲ್ಲಿನ ಜನರಿಗೆ, ರೈತಾಪಿ ವರ್ಗಕ್ಕೆ ಜಿಟಿ ಜಿಟಿ ಮಳೆಯ ದರ್ಶನವಾಗಿದೆ.
ತಾಪಮಾನದಲ್ಲಿ ಇಳಿಕೆ, ಚಳಿಗಾಲದ ಅನುಭವ
ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗವು (30-40 kmph) ತಲುಪುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನವು 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ° C ಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ತಾಪಮಾನದಲ್ಲಿ ತೀವ್ರ ಇಳಿಕೆ ಆಗಿದೆ. ಬಹುತೇಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಚಳಿಗಾಲದ ವಾತಾವರಣ ಕಂಡು ಬರುತ್ತಿದೆ. ಬಿಸಿಲೇ ಅಪರೂಪ ಎಂಬಂತಾಗಿದೆ.












Click it and Unblock the Notifications