865 ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮಾ ಯೋಜನೆ ತಡೆಗೆ ರಾಜ್ಯದ ಕ್ರಮ: ಸಿಎಂ ಬೊಮ್ಮಾಯಿ
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ಸಮಸ್ಯೆಯು 1957 ರಲ್ಲಿ ರಾಜ್ಯಗಳನ್ನು ಭಾಷಾವಾರು ರೀತಿಯಲ್ಲಿ ಮರುಸಂಘಟಿಸಿದಾಗ ಪ್ರಾರಂಭವಾಗಿದೆ.
ಬೆಂಗಳೂರು, ಮಾರ್ಚ್ 16: ಕೊಂಚ ಕಾಲ ತಣ್ಣಗಿದ್ದ ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೆ ನೆರೆಯ ಮಹಾರಾಷ್ಟ್ರ ರಾಜ್ಯವು ಗಡಿ ಗ್ರಾಮಗಳಲ್ಲಿ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸುವ ಮೂಲಕ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ. 865 ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರವು ತನ್ನ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸುತ್ತಿದೆ.
ಮಹಾರಾಷ್ಟ್ರ ಸರ್ಕಾರದ ಕ್ರಮ ಖಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "865 ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರವು ತನ್ನ ಆರೋಗ್ಯ ವಿಮಾ ಯೋಜನೆಯನ್ನು ನೀಡುವುದನ್ನು ತಡೆಯಲು ತಮ್ಮ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ರಾಜ್ಯದ ಗಡಿ ಭಾಗದ ಜನರಿಗೆ ಆರೋಗ್ಯ ವಿಮೆ ಯೋಜನೆಯನ್ನು ಮಹಾರಾಷ್ಟ್ರದ ಸಂಪುಟ ನಿರ್ಣಯ ಘೋಷಿಸಿರುವುದು ಅಕ್ಷಮ್ಯ ಅಪರಾಧ" ಎಂದು ಹೇಳಿದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ಸಮಸ್ಯೆಯು 1957 ರಲ್ಲಿ ರಾಜ್ಯಗಳನ್ನು ಭಾಷಾವಾರು ರೀತಿಯಲ್ಲಿ ಮರುಸಂಘಟಿಸಿದಾಗ ಪ್ರಾರಂಭವಾಗಿದೆ. ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರ ಇತ್ತೀಚೆಗೆ ರಾಜ್ಯದ ಗಡಿ ಗ್ರಾಮಗಳಲ್ಲಿ 'ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ' ಅನುಷ್ಠಾನಕ್ಕೆ ಹೆಚ್ಚುವರಿ 54 ಕೋಟಿ ರೂಪಾಯಿ ಘೋಷಿಸಿದೆ. ಇದರಿಂದ ಕರ್ನಾಟಕ ಕಾಂಗ್ರೆಸ್ ರಾಜ್ಯ ಬಿಜೆಪಿ ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದೆ.
ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ರಾಜ್ಯಕ್ಕೆ ಅವಮಾನ ಎಂದು ಟೀಕಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಮತ್ತು ಕನ್ನಡಿಗರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗಳೇ ಕನ್ನಡಿಗರ ಸ್ವಾಭಿಮಾನವನ್ನು ಮಹಾರಾಷ್ಟ್ರಕ್ಕೆ ಅಡವಿಡ್ತಿದ್ದೀರಾ? ಈಗಲೇ ರಾಜೀನಾಮೆ ನೀಡಿ ಮನೆ ಕಡೆ ನಡೆಯಿರಿ. pic.twitter.com/tjtn9gc3aK
— DK Shivakumar (@DKShivakumar) March 15, 2023
ಕಾಂಗ್ರೆಸ್ ರಾಜೀನಾಮೆಗೆ ಆಗ್ರಹಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, 'ಮಹಾರಾಷ್ಟ್ರ ಗಡಿ ಭಾಗದ ಗ್ರಾಮಗಳಿಗೆ ಹಣ ಬಿಡುಗಡೆ ಮಾಡಿದರೆ ನಾನೇಕೆ ರಾಜೀನಾಮೆ ನೀಡಬೇಕು, ನಾವೂ ಕೂಡ ಮಹಾರಾಷ್ಟ್ರದ ಪಂಢರಪುರ, ತುಳಜಾಪುರ ಮುಂತಾದ ಸ್ಥಳಗಳಿಗೆ ಕರ್ನಾಟಕದಿಂದ ಭೇಟಿ ನೀಡಲು ಹಣ ಬಿಡುಗಡೆ ಮಾಡಿದ್ದೇವೆ. ಅವರು ಹಣ ಬಿಡುಗಡೆ ಮಾಡಿರುವ ಬಗ್ಗೆ ನಾನು ಪರಿಶೀಲಿಸುತ್ತೇನೆ. ಅದನ್ನು ತಡೆಯಲು ನಾವು ಕ್ರಮಕೈಗೊಳ್ಳುತ್ತೇವ. ಇದನ್ನೇಲ್ಲಾ ನಾನು ಡಿಕೆ ಶಿವಕುಮಾರ್ ಅವರಿಂದ ಕಲಿಯಬೇಕಾಗಿಲ್ಲ' ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್, "ಕರ್ನಾಟಕದ ಒಂದು ಇಂಚು ಭೂಮಿಯನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಇದು ನಮ್ಮ ನೆಲ, ನಮ್ಮ ನೀರು, ಅದನ್ನು ನಾವು ರಕ್ಷಿಸುತ್ತೇವೆ, ನಮ್ಮ ಭೂಮಿಯನ್ನು ರಕ್ಷಿಸಲು ನಾವು ನಮ್ಮ ಪ್ರಾಣವನ್ನು ತ್ಯಾಗಮಾಡಲು ಸಿದ್ಧರಿದ್ದೇವೆ. ಈ ಬಗ್ಗೆ ಸರ್ಕಾರ ರಾಜ್ಯದ ಸ್ವಾಭಿಮಾನಕ್ಕಾಗಿ ತಕ್ಷಣವೇ ಪ್ರತಿತಂತ್ರವನ್ನು ತೆಗೆದುಕೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.

ಕನ್ನಡ ಪರ ಸಂಘಟನೆಗಳು, ಕಲಾವಿದರು ಮತ್ತು ಸಾಹಿತ್ಯಾಸಕ್ತರು ಒಟ್ಟಾಗಿ ಮಹಾರಾಷ್ಟ್ರದ ಕ್ರಮದ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸುವಂತೆ ಕರೆ ನೀಡಿದ ಶಿವಕುಮಾರ್, ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ಮಹಾರಾಷ್ಟ್ರದ ನಡೆ ಭಾರತದ ಒಕ್ಕೂಟ ರಚನೆಗೆ ಧಕ್ಕೆ ತಂದಿದೆ. ಕರ್ನಾಟಕದ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಹಕ್ಕಿಲ್ಲ, ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಉಭಯ ರಾಜ್ಯಗಳ ನಡುವೆ ಗಡಿ ಘರ್ಷಣೆ ತೀವ್ರಗೊಂಡಿತ್ತು, ಎರಡೂ ಕಡೆಯಲ್ಲೂ ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತು. ಎರಡೂ ರಾಜ್ಯಗಳ ರಾಜಕೀಯ ನಾಯಕರನ್ನು ಈ ವಿಷಯದಲ್ಲಿ ಎಳೆತರಲಾಗಿತ್ತು. ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣದ ನಡುವೆ ಕನ್ನಡ ಮತ್ತು ಮರಾಠಿ ಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.
ಅಲ್ಲದೆ, ಎರಡೂ ರಾಜ್ಯಗಳು ತಮ್ಮ ತಮ್ಮ ವಿಧಾನಸಭೆಗಳಲ್ಲಿ ಪರಸ್ಪರರ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದ್ದವು. ಗಡಿ ಗ್ರಾಮಗಳ ಮೇಲೆ ತಮ್ಮ ಹಕ್ಕು ಮಂಡಿಸಿದವು. ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯ ಮೇಲೆ ಮಹಾರಾಷ್ಟ್ರವು ಹಕ್ಕು ಸಾಧಿಸಿತ್ತು. ಇಲ್ಲಿ ಗಣನೀಯವಾಗಿ ಮರಾಠಿ ಮಾತನಾಡುವ ಜನಸಂಖ್ಯೆ ಇದ್ದು, ಬೆಳಗಾವಿ ಮಾಹಾರಾಷ್ಟ್ರದ್ದು ಎಂದು ವಾದಿಸಿದೆ. ಪ್ರಸ್ತುತ ಕರ್ನಾಟಕದ ಭಾಗವಾಗಿರುವ 800 ಕ್ಕೂ ಹೆಚ್ಚು ಮರಾಠಿ ಮಾತನಾಡುವ ಹಳ್ಳಿಗಳಿಗಾಗಿ ತನ್ನ ಹಕ್ಕು ಸಲ್ಲಿಸಿದೆ.












Click it and Unblock the Notifications