ಅಕ್ರಮ-ಸಕ್ರಮ: ಕೊನೆಗೂ ಭಾಗ್ಯದ ಬಾಗಿಲು ತೆರೆಯಿತು
ಬೆಂಗಳೂರು, ಅ.12: ನಗರ ಪಾಲಿಕೆ, ನಗರಸಭೆ, ಪುರಸಭೆಯ ಬೈಲಾಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರು ಒಂದಷ್ಟು ದಂಡ ಕಟ್ಟಿ, ಅಕ್ರಮ ಕಟ್ಟಡವನ್ನು ಸಕ್ರಮ ಮಾಡಿಕೊಳ್ಳಬಹುದು. ಈ ಸಂಬಂಧ ಹಾಲಿ ಸರ್ಕಾರ ಅಧಿಸೂಚನೆ ಹೊರಡಿಸುವ ದಿನದವರೆಗೂ ನಡೆಯುವ ಅಕ್ರಮಗಳಿಗೆ ಸಕ್ರಮ ಭಾಗ್ಯ ಪ್ರಾಪ್ತಿಯಾಗುತ್ತದೆ. ಇದರಿಂದ ಅಕ್ರಮ ಕಟ್ಟಡಗಳ ಮಾಲೀಕರಿಗೆ ಸಿಎಂ ಸಿದ್ದು ಸರಕಾರ ಭಾಗ್ಯದ ಬಾಗಿಲು ತೆರೆದಿದೆ.
ಇನ್ನು, ಪ್ರಸ್ತುತ ಭರ್ಜರಿ ರಜಾ ಮೂಡಿನಲ್ಲಿರುವ ಸರಕಾರಿ ನೌಕರರಿಗೆ ಮುಂದಿನ ವರ್ಷ 22 ಸಾರ್ವತ್ರಿಕ ರಜೆಗಳು ಪ್ರಾಪ್ತಿಯಾಗಲಿವೆ. ಆ ರಜಾ ಪಟ್ಟಿ ಸದ್ಯದಲ್ಲೇ ಹೊರಬೀಳಲಿದೆ.
ಶುಕ್ರವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಸೇರಿದ್ದ ರಾಜ್ಯ ಸಚಿವ ಸಂಪುಟ ಅನೇಕ ನಿರ್ಣಯಗಳನ್ನು ತೆಗೆದುಕೊಂಡಿದೆ. ಸಚಿವ ಸಂಪುಟ ನಿರ್ಧಾರವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿಬಿ ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ಹೀಗೆ ವಿವರಿಸಿದ್ದಾರೆ.

ಶೇ. 50ರಷ್ಟು ಉಲ್ಲಂಘನೆ ಓಕೆ:
Karnataka Municipal Corporations (Amendment) Bill, 2013 ಅಕ್ರಮ-ಸಕ್ರಮ ಯೋಜನೆಯನುಸಾರ ವಾಸಯೋಗ್ಯ ಕಟ್ಟಡಗಳಲ್ಲಿ ಶೇ. 50ರವರೆಗಿನ ಉಲ್ಲಂಘನೆ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಶೇ. 25ರವರೆಗಿನ ಉಲ್ಲಂಘನೆಗೆ ಅಂಕಿತ ಹಾಕಲಾಗಿದ್ದು, ಅದೆಲ್ಲವೂ ಇನ್ಮುಂದೆ ಸಕ್ರಮ ಎಂದೇ ಪರಿಗಣತವಾಗುತ್ತದೆ. ಈ ಸಂಬಂಧ ಒಂದಷ್ಟು ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಬೇಕಿದೆ.
ಈ ಉಲ್ಲಂಘನೆಯ ಅವಧಿಯನ್ನು ಹಿಂದಿನ ಸರ್ಕಾರದಲ್ಲಿ 2009ರ ಡಿಸೆಂಬರ್ ಎಂದು ನಮೂದಿಸಲಾಗಿತ್ತು. ಆದರೆ, ಸಚಿವ ಸಂಪುಟ ಶುಕ್ರವಾರ ಕೈಗೊಂಡಿರುವ ನಿರ್ಧಾರದ ಪ್ರಕಾರ, ಅಕ್ರಮ-ಸಕ್ರಮಕ್ಕೆ ರಾಜ್ಯಪಾಲರಿಂದ ಸಹಿ ಪಡೆದು ಹೊರಡಿಸುವ ಅಧಿಸೂಚನೆಯ ದಿನವರೆಗಿನ ಅಕ್ರಮವೂ ಸಕ್ರಮವಾಗುತ್ತದೆ.

ನಿರಾಣಿಗೆ ಮಣೆ ಹಾಕದ ಸಿದ್ದು ಸರಕಾರ
ಬಾಗಲಕೋಟೆ ಜಿಲ್ಲೆ ಮುಧೋಳದ ನಿರಾಣಿ ಶುಗರ್ (ಮಾಜಿ ಸಚಿವ ಮುರುಗೇಶ್ ನಿರಾಣಿ ಮಾಲೀಕತ್ವದ ಕಂಪನಿ), ಹೆಚ್ಚುವರಿ ಕಬ್ಬು ಮೀಸಲು ಕ್ಷೇತ್ರ ಹಂಚಿಕೆ ಮಾಡುವಂತೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ. ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯ 2,500 ಟನ್ ನಿಂದ 15,000 ಟನ್ ಗೆ ಹೆಚ್ಚಳವಾಗಿರುವುದರಿಂದ ಸುತ್ತಮುತ್ತಲ 7.5 ಕಿ.ಮೀ ವ್ಯಾಪ್ತಿಯ 9 ಹಳ್ಳಿಗಳ ಪ್ರದೇಶ ಸೇರ್ಪಡೆಗೆ ಮನವಿ ಮಾಡಲಾಗಿತ್ತು. ಆದರೆ, ಈಗಾಗಲೇ ಆ ಪ್ರದೇಶವನ್ನು ಇತರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡಿರುವುದರಿಂದ ನಿರಾಣಿ ಶುಗರ್ಸ್ ಗೆ ನೀಡಲು ಸಾಧ್ಯವಿಲ್ಲ ಎಂದು ಸಂಪುಟ ಪ್ರಸ್ತಾವನೆ ತಿರಸ್ಕರಿಸಿದೆ.

ಗುಲ್ಬರ್ಗದಲ್ಲಿ ಮುಸ್ಲಿಂ ವಸತಿ ಶಾಲೆ
ಎಂಡೋಸಲ್ಫಾನ್ ಪೀಡಿತರ ಚಿಕಿತ್ಸೆ, ಪುನರ್ವಸತಿ ಹಾಗೂ ಪರಿಹಾರದ ಪ್ಯಾಕೇಜ್ ಮೊತ್ತವನ್ನು 5 ಕೋಟಿ ರೂ.ಗಳಿಂದ 20 ಕೋಟಿ ರೂ.ಗೆ ಹೆಚ್ಚಳ ಮಾಡಲು, ಗುಲ್ಬರ್ಗ ತಾಲೂಕಿನ ಸಾವಳಗಿ ಗ್ರಾಮದಲ್ಲಿ 8.07 ಕೋಟಿ ರೂ. ವೆಚ್ಚದಲ್ಲಿ ಮುಸ್ಲಿಂ ವಸತಿ ಶಾಲಾ ಸಂಕೀರ್ಣ, ವೀರಾಜಪೇಟೆ ತಾಲೂಕು ಅರ್ಜಿ ಗ್ರಾಮದಲ್ಲಿ 9.46 ಕೋಟಿ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣ ನಿರ್ಮಾಣ, ಕೋಲಾರದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಸಂಪುಟದ ಒಪ್ಪಿಗೆ.

2014ನೇ ಸಾಲಿನಲ್ಲಿ 22 ಸಾರ್ವತ್ರಿಕ ರಜೆಗಳು
* 2014ನೇ ಸಾಲಿನಲ್ಲಿ 22 ಸಾರ್ವತ್ರಿಕ ರಜೆ ಘೋಷಿಸಲು ನಿರ್ಧಾರ
* ಹುಬ್ಬಳ್ಳಿಯಲ್ಲಿ 'ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ' ಸ್ಥಾಪನೆ
* ದಾವಣಗೆರೆಯಲ್ಲಿ 'ಸಮಗ್ರ ಜೈವಿಕ ಕೇಂದ್ರ' ಸ್ಥಾಪನೆ

ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಸ್ಥಾಪನೆ
ಪ್ರತಿ ಜಿಲ್ಲೆಯ ಒಂದು ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಸ್ಥಾಪನೆ ಹಾಗೂ ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ 10 ಕೋಟಿ ರೂ. ಅನುದಾನ ಬಿಡುಗಡೆ.

ಹೆಣ್ಣುಮಕ್ಕಳಿಗೆ 'ಉಚಿತ' ಶುಚಿ ಯೋಜನೆ:
* 'ಶುಚಿ' ಯೋಜನೆ: ಹದಿಹರೆಯದ ಹೆಣ್ಣುಮಕ್ಕಳಿಗೆ ಉಚಿತವಾಗಿ ಪ್ರತಿ ತಿಂಗಳು 10 ನ್ಯಾಪ್ ಕಿನ್ ಗಳುಳ್ಳ 1 ಪ್ಯಾಕೆಟ್ ನಂತೆ ವಾರ್ಷಿಕ 12 ಸ್ಯಾನಿಟರಿ ಪ್ಯಾಕೆಟ್ ವಿತರಣೆ.
* ರಾಜ್ಯದ ವಾರ್ತಾ ಇಲಾಖೆಯಿಂದಲೇ ಎಲ್ಲ ಜಾಹೀರಾತುಗಳನ್ನು ನೀಡುವ ನೂತನ ಜಾಹೀರಾತು ನೀತಿ- 2013 ಅಂಗೀಕಾರ. ಇನ್ನು ಮುಂದೆ ಎಲ್ಲ ಜಾಹೀರಾತುಗಳನ್ನು ವಾರ್ತಾ ಇಲಾಖೆಯಿಂದಲೇ ಬಿಡುಗಡೆ ಮಾಡಬೇಕಾಗಿದ್ದು, ಇದು ಎಲ್ಲ ಸರಕಾರಿ ಇಲಾಖೆಗಳು ಮತ್ತು ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೂ ಅನ್ವಯ.
* ರಾಜ್ಯದಲ್ಲಿರುವ 35 ಸಾವಿರ ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ವತಿಯಿಂದ 1000 ರೂ ಪ್ರೋತ್ಸಾಹ ಧನ. ಈ ಬಾಬತ್ತಿನಲ್ಲಿ ಸರಕಾರಕ್ಕೆ ಐದು ಕೋಟಿ ರೂ ಹೊರೆಯಾಗಲಿದೆ. (ಚಿತ್ರ- www.visthar.org)

ಕಾಲುಬಾಯಿ ರೋಗ ಪರಿಹಾರ
ರಾಜ್ಯದಲ್ಲಿ ಕಾಲುಬಾಯಿ ರೋಗದಿಂದ ಅಸುನೀಗಿರುವ ಹಸುಗಳಿಗೆ ತಲಾ 25 ಸಾವಿರ ರೂಪಾಯಿ ಪರಿಹಾರ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಕರುಗಳಿಗೆ 10 ಅಥವಾ 15 ಸಾವಿರ ನೀಡಲಾಗುತ್ತದೆ. ಎಮ್ಮೆ ಹಾಗೂ ಇತರೆ ರಾಸುಗಳಿಗೆ ಯಾವ ಪ್ರಮಾಣದಲ್ಲಿ ಪರಿಹಾರದ ಹಣ ನೀಡಲಾಗುತ್ತದೆ ಎಂಬುದು ಸರ್ಕಾರಿ ಆದೇಶದಲ್ಲಿ ನಮೂದಿಸಲಾಗುತ್ತದೆ. ವಿಮೆಗೆ ಒಳಪಡುವ ರಾಸುಗಳಿಗೆ ಈ ಪರಿಹಾರ ಅನ್ವಯವಾಗುವುದಿಲ್ಲ. ಚಿತ್ರ-www.thehindu.com
ರಾಜ್ಯದಲ್ಲಿ ಕಾಲುಬಾಯಿ ರೋಗದಿಂದ 2000ಕ್ಕೂ ಹೆಚ್ಚು ಹಸುಗಳು ಮರಣಹೊಂದಿವೆ. ನಿಖರವಾದ ಸಂಖ್ಯೆಯ ಅರಿವಿಲ್ಲ. ಹಸುಗಳು ಕಾಲುಬಾಯಿ ರೋಗದಿಂದಲೇ ಮೃತಪಟ್ಟಿವೆ ಎಂಬುದನ್ನು ದೃಢೀಕರಣ ಪತ್ರ ನೀಡಿದ ಮೇಲೆ ಪರಿಹಾರ ನೀಡಲಾಗುತ್ತದೆ.

ರೈಲ್ವೆ ಯೋಜನೆಗಳಿಗೆ ಇನ್ನೂ ಇನ್ನೂರು ಕೋಟಿ
ರಾಜ್ಯಕ್ಕೆ ಲಭ್ಯವಾಗುವ ರೈಲ್ವೆ ಯೋಜನೆಗಳನ್ನು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹೆಚ್ಚು ಮಾಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಬಜೆಟ್ಟಿನಲ್ಲಿ 350 ಕೋಟಿ ಹಣವನ್ನು ಮೀಸಲಿಟ್ಟಿದ್ದು, ಇದೀಗ ಹೆಚ್ಚುವರಿಯಾಗಿ 200 ಕೋಟಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.

'ಅನ್ನಭಾಗ್ಯ'ಕ್ಕೆ ಜಾಗೃತ ದಳ
* ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುವ ಆಹಾರಧಾನ್ಯಗಳ ಮೇಲೆ ನಿಗಾವಹಿಸಲು ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ. ಆಯಾ ಪಂಚಾಯಿತಿಗಳ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿ, ಪ.ಜಾ, ಪಂಗಡ ಹಾಗೂ ಮಹಿಳೆಯರು ಸದಸ್ಯರಾಗಿರುತ್ತಾರೆ. ಅವರು ಪಡಿತರ ವ್ಯವಸ್ಥೆ ಬಗ್ಗೆ ನಿಗಾ ವಹಿಸಲಿದ್ದಾರೆ.
* 'ಅನ್ನಭಾಗ್ಯ' ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಪಡಿತರ ಮಳಿಗೆಗಳ ಮೇಲೆ ನಿಗಾ ವಹಿಸಲು ಜಾಗೃತ ದಳ ರಚನೆ.












Click it and Unblock the Notifications