ಎಕ್ಸಿಟ್ ಸಮೀಕ್ಷೆಗೂ ಎಕ್ಸಾಕ್ಟ್ ಸಮೀಕ್ಷೆಗೂ ಸಾಕಷ್ಟು ವ್ಯತ್ಯಾಸವಿದೆ: ಈ ಬಾರಿ ಮತ್ತೆ ಜನಾದೇಶ: ಮುರುಗೇಶ್ ನಿರಾಣಿ
ಬೆಂಗಳೂರು,ಮೇ13: ಯಾವುದೇ ಪಕ್ಷದ ಬೆಂಬಲವಿಲ್ಲದೆ ರಾಜ್ಯದಲ್ಲಿ ಬಿಜೆಪಿ ಸ್ವತಃ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ಪಕ್ಷದ ವತಿಯಿಂದ ನಡೆಸಿರುವ ಬೂತ್ ಮಟ್ಟದ ಸಮೀಕ್ಷೆಯ ಆಧಾರದಲ್ಲಿ ಬಿಜೆಪಿಗೆ 120 ಸ್ಥಾನಗಳು ಲಭಿಸಲಿವೆ. ಹೀಗಾಗಿ ನಾವೇ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಕ್ಸಿಟ್ ಸಮೀಕ್ಷೆಗೂ ಎಕ್ಸಾಕ್ಟ್ ಸಮೀಕ್ಷೆಗೂ ಸಾಕಷ್ಟು ವ್ಯತ್ಯಾಸವಿದೆ. ಬಿಜೆಪಿಗೆ ಈ ಬಾರಿ ಮತ್ತೆ ಜನಾದೇಶ ಬರಲಿದೆ. ನನ್ನ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ15ಕ್ಕಿಂತ ಕಡಿಮೆ ಬರುವುದಿಲ್ಲ. ಬೆಂಗಳೂರಿನಲ್ಲಿ ಕೂಡ 15ಕ್ಕಿಂತ ಹೆಚ್ಚು ಸ್ಥಾನ ಗಳಿಸುತ್ತೇವೆ. ಕರಾವಳಿಯಲ್ಲಿ ಅತಿ ಹೆಚ್ಚು ಗೆಲ್ಲುತ್ತೇವೆ. ಒಟ್ಟಾರೆ ರಾಜ್ಯದ ವಿಚಾರ ತೆಗೆದುಕೊಂಡರೆ, 115 ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ನಿಶ್ಚಿತ. ಕಾಂಗ್ರೆಸ್ ಏನೇ ಹೇಳಬಹುದು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದರು
ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಬಂದಿವೆ. ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಸೂಚನೆ ನೀಡಿದ್ದು, ಕೆಲವು ಕಾಂಗ್ರೆಸ್ ಮತ್ತೆ ಕೆಲವು ಬಿಜೆಪಿ ಸರ್ಕಾರದ ಸೂಚನೆ ನೀಡಿವೆ. ಆದರೆ ಈ ಹಿಂದಿನ ಸಮೀಕ್ಷೆಗಳೆಲ್ಲಾ ಸುಳ್ಳಾಗಿವೆ. 2018ರಲ್ಲಿಯೂ ಬಿಜೆಪಿಗೆ 100 ಸ್ಥಾನ ಯಾವ ಸಮೀಕ್ಷಾ ವರದಿಗಳೂ ನೀಡಿರಲಿಲ್ಲ. ಆದರೆ ನಾವು 104 ಬಂದಿದ್ದೆವು. ಹಾಗಾಗಿ 2023ರ ಮತಗಟ್ಟೆ ಸಮೀಕ್ಷೆಗಳು ಸತ್ಯಕ್ಕೆ ದೂರವಾದವು ಎಂದರು.

ಫಲಿತಾಂಶ ಪ್ರಕಟವಾಗುವ ಶನಿವಾರದ ನಂತರ ಹೊಸ ಸರ್ಕಾರ ರಚನೆ ಮಾಡುತ್ತೇವೆ. ಹಿರಿಯರ ಜೊತೆ ಕುಳಿತು ಮುಂದಿನ ನಡೆ ಬಗ್ಗೆ ಮಾತನಾಡುತ್ತೇವೆ. ವರಿಷ್ಠರ ಜೊತೆ ಮಾತನಾಡುವ ಮೊದಲು ಪೂರ್ವಭಾವಿಯಾಗಿ ಮಾತುಕತೆ ನಡೆಸಿದ್ದೇವೆ. ಕಾಂಗ್ರೆಸ್ ಪಕ್ಷದವರು 140 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಆದರೆ ಗೆಲ್ಲುವ ಕ್ಷೇತ್ರಗಳ ಪಟ್ಟಿ ಕೊಡಲಿ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಮುರುಗೇಶ್ ನಿರಾಣಿ ಸವಾಲು ಹಾಕಿದರು.












Click it and Unblock the Notifications