Summer 2025: ಬೇಸಿಗೆಗೂ ಮೊದಲೇ ಕರ್ನಾಟಕದಲ್ಲಿ ವಿದ್ಯುತ್‌ಗೆ ಭಾರೀ ಬೇಡಿಕೆ
ಬೆಂಗಳೂರು, ಫೆಬ್ರವರಿ 16: ಕಳೆದ ವರ್ಷ ನೈಋತ್ಯ ಮುಂಗಾರು ಮಳೆ ಅಬ್ಬರಿಸಿ ಬೊಬ್ಬಿರಿದರೂ ಸಹ ಈಗ ಅವಧಿಗೂ ಮೊದಲೇ ಬೇಸಿಗೆ ಆರಂಭವಾಗಿದೆ. ವಿವಿಧ ಜಿಲ್ಲೆಗಳಲ್ಲಿ ಫೆಬ್ರವರಿ ತಿಂಗಳ ಬಿಸಿಲು ನೆತ್ತಿ ಸುಡುತ್ತಿದೆ. ಗೃಹ ಮತ್ತು ಕೃಷಿ ಬಳಕೆಗೆ ವಿದ್ಯುತ್ ಬಳಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷದ ಬೇಸಿಗೆಗಿಂತ ಈ ಬಾರಿ ವಿದ್ಯುತ್‌ಗೆ ಅಧಿಕ ಬೇಡಿಕೆ ಬರಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಸರ್ಕಾರ ರೈತರಿಗೆ ಪ್ರತಿದಿನ 7 ಗಂಟೆಗಳ ವಿದ್ಯುತ್ ನೀಡುವುದಾಗಿ ಈಗಾಗಲೇ ಹೇಳಿದೆ. ಆದ್ದರಿಂದ ಕೃಷಿಗೆ ವಿದ್ಯುತ್ ಬಳಕೆ ಬೇಡಿಕೆ ಶೇ 40ರಷ್ಟು ಜಾಸ್ತಿಯಾಗುವ ನಿರೀಕ್ಷೆ ಇದ್ದು, ಬೇಸಿಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆ ವಾಡಿಕೆಗಿಂತ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬಾರಿಯ ಬೇಸಿಗೆಯಲ್ಲಿ ಪ್ರತಿದಿನದ ವಿದ್ಯುತ್ ಬಳಕೆ 19,000 ಮೆಗಾವಾಟ್ ಆಗುವ ನಿರೀಕ್ಷೆ ಇದೆ. ಇದು ಬೇಸಿಗೆ ಅವಧಿಯಲ್ಲಿ ಕರ್ನಾಟಕದ ಅತ್ಯಧಿಕ ವಿದ್ಯುತ್ ಬಳಕೆಯಾಗಿದೆ. ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ಸಮತೋಲನ ಮಾಡಲು ಸರ್ಕಾರ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.
ವಿದ್ಯುತ್ ಕೊರತೆ ಕಾಡಿತ್ತು: 2023ರ ಮುಂಗಾರು ಋತುವಿನಲ್ಲಿ ಮಳೆ ಕೈ ಕೊಟ್ಟ ಪರಿಣಾಮ ಡ್ಯಾಂಗಳು ಭರ್ತಿ ಆಗಿರಲಿಲ್ಲ. ಆದ್ದರಿಂದ ಜಲ ವಿದ್ಯುತ್ ಉತ್ಪಾದನೆ ಕಡಿಮೆಯಾಗಿತ್ತು. 2024ರಲ್ಲಿ ರಾಜ್ಯದಲ್ಲಿ ಬೇಸಿಗೆಗೂ ಮೊದಲೇ ವಿದ್ಯುತ್ ಕೊರತೆ ಕಾಡಿತ್ತು. 2024ರ ಜನವರಿಯಲ್ಲಿಯೇ ಹಲವು ಜಿಲ್ಲೆಗಳಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೆ ಬಂದಿತ್ತು. ಆದರೆ ಈ ಬಾರಿ ಎಲ್ಲಾ ಡ್ಯಾಂಗಳು ಭರ್ತಿಯಾಗಿವೆ.
ಇಂಧನ ಇಲಾಖೆ ಮಾಹಿತಿಯಂತೆ ಸದ್ಯ ರಾಜ್ಯದ ಪ್ರತಿದಿನದ ವಿದ್ಯುತ್ ಬೇಡಿಕೆ 17,000 ಮೆಗಾವಾಟ್. ಜಲವಿದ್ಯುತ್, ಅಣು ವಿದ್ಯುತ್, ಗಾಳಿ ಮತ್ತು ಸೌರ ವಿದ್ಯುತ್ ಸೇರಿ 12,000 ಮೆಗಾವಾಟ್ ಉತ್ಪಾದನೆಯಾಗುತ್ತಿದೆ. ಕರ್ನಾಟಕ 3521 ಮೆಗಾವಾಟ್ ವಿದ್ಯುತ್ ಅನ್ನು ಸೆಂಟ್ರಲ್ ಗ್ರಿಡ್ ಮೂಲಕ, 1002 ಮೆಗಾವಾಟ್ ವಿದ್ಯುತ್ ಅನ್ನು ಎನ್‌ಸಿಇಪಿ ಮೂಲಕ ಪಡೆಯುತ್ತಿದೆ.
ಕೆಪಿಸಿಎಲ್ ಅಧಿಕಾರಿಗಳ ಪ್ರಕಾರ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. 2022ರ ಬೇಸಿಗೆಯಲ್ಲಿ 14,766 ಮೆಗಾವಾಟ್, 2023ರಲ್ಲಿ 15,100 ಮೆಗಾವಾಟ್, 2024ರಲ್ಲಿ 17,000 ಬೇಡಿಕೆ ಇತ್ತು. ಈ ವರ್ಷ ಇದು 19,000 ಮೆಗಾವಾಟ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಇಷ್ಟು ದಿನ ಗೃಹ ಮತ್ತು ವಾಣಿಜ್ಯ ಬಳಕೆಗೆ ಹೆಚ್ಚು ವಿದ್ಯುತ್‌ಗಾಗಿ ಬೇಡಿಕೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಕೃಷಿ ಬಳಕೆಗೆ ಹೆಚ್ಚಿನ ಬೇಡಿಕೆ ಬಂದಿದೆ ಅಧಿಕಾರಿಗಳು ಹೇಳಿದ್ದಾರೆ. 2024ರಲ್ಲಿ ಉತ್ತಮ ಮಳೆಯಾದ ಕಾರಣ ಈ ಬಾರಿ ರಾಜ್ಯದಲ್ಲಿ ಕೃಷಿ ಚಟುವಟಿಕೆ ಇನ್ನಷ್ಟು ವಿಸ್ತಾರಗೊಂಡಿದೆ. ಆದ್ದರಿಂದ ವಿದ್ಯುತ್ ಬೇಡಿಕೆಯೂ ಹೆಚ್ಚಾಗಿದೆ.
ಕರ್ನಾಟಕ ಸರ್ಕಾರ ಕೃಷಿ ಚಟುವಟಿಕೆ ಉತ್ತೇಜಿಸಲು ರೈತರಿಗೆ 7 ಗಂಟೆಗೆ ಕಾಲ ನಿರಂತರ ವಿದ್ಯುತ್ ನೀಡುವ ಘೋಷಣೆ ಮಾಡಿದೆ. ಇದರಲ್ಲಿ 4 ಗಂಟೆ ಹಗಲು, 3 ಗಂಟೆ ರಾತ್ರಿ ವಿದ್ಯುತ್ ನೀಡಲಾಗುತ್ತದೆ. ಈ ಬಾರಿ ಕೃಷಿ ಬಳಕೆಯ ವಿದ್ಯುತ್ ಬೇಡಿಕೆ ಶೇ 40ಕ್ಕೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆಯ ಪರಿಣಾಮದಿಂದಲೂ ರಾಜ್ಯದಲ್ಲಿ ವಿದ್ಯುತ್ ಬಳಕೆ ಹೆಚ್ಚಿದೆ. ಕಾಂಗ್ರೆಸ್‌ನ 5 ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯುನಿಟ್ ತನಕ ಉಚಿತ ವಿದ್ಯುತ್ ನೀಡಲಾಗುತ್ತದೆ.












Click it and Unblock the Notifications