ಕರ್ನಾಟಕ ಲೋಕಾಯುಕ್ತರ ನೇಮಕ ಮತ್ತಷ್ಟು ವಿಳಂಬ
ಬೆಂಗಳೂರು, ಮಾರ್ಚ್ 08 : ಹೈಕೋರ್ಟ್ ನ್ಯಾಯಮೂರ್ತಿಗಳು ಲೋಕಾಯುಕ್ತ ನೇಮಕದ ಬಗ್ಗೆ ಸಲ್ಲಿಸಿರುವ ಆಕ್ಷೇಪವನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದರಿಂದಾಗಿ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರನ್ನು ನೇಮಕ ಮಾಡುವ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಕರ್ನಾಟಕ ಸರ್ಕಾರ ಲೋಕಾಯುಕ್ತರಾಗಿ ಎಸ್.ಆರ್.ನಾಯಕ್ ಅವರನ್ನು ನೇಮಕ ಮಾಡುವ ಪ್ರಸ್ತಾವನೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಕಳುಹಿಸಿದೆ. ಆದರೆ, ಮುಖ್ಯ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ನೇಮಕದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. [ನಾಯಕ್ ನೇಮಕ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ]

ಆಕ್ಷೇಪವೇನು? : ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಅವರು ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಮೇಲೆ ಬೇರೆ ಹುದ್ದೆ ನಿರ್ವಹಣೆಮಾಡುವಂತಿಲ್ಲ ಎಂಬ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಭಾಸ್ಕರರಾವ್ ವಿಚಾರಣೆ ಏಕೆ?]
ಮಾನವ ಹಕ್ಕು ಸಂರಕ್ಷಣಾ ಕಾಯ್ದೆ 1993 ಸಬ್ ಸೆಕ್ಷನ್ 3 ಆಫ್ 24 ಪ್ರಕಾರ ಸರ್ಕಾರಿ ಹುದ್ದೆ ನಿರ್ವಹಣೆ ಮಾಡಿದವರನ್ನು ಪುನಃ ನೇಮಕ ಮಾಡುವಂತಿಲ್ಲ. ಈ ಬಗ್ಗೆ ಸರ್ಕಾರಕ್ಕೂ ಮುಖ್ಯ ನ್ಯಾಯಮೂರ್ತಿಗಳು ಮಾಹಿತಿ ನೀಡಿದ್ದರು.
ಮುಖ್ಯ ನ್ಯಾಯಮೂರ್ತಿಗಳ ಈ ಆಕ್ಷೇಪವನ್ನು ಗಂಭೀರವಾಗಿ ಪರಿಗಣನೆ ಮಾಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು, ಈ ಕುರಿತು ಸರ್ಕಾರಕ್ಕೆ ಮೌಖಿಕ ಮಾಹಿತಿ ನೀಡಿದ್ದಾರೆ. ಆದ್ದರಿಂದ, ಲೋಕಾಯುಕ್ತರ ನೇಮಕ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಸುಪ್ರೀಂಗೆ ಅರ್ಜಿ : ಲೋಕಾಯುಕ್ತರಾಗಿ ನ್ಯಾ.ಎಸ್.ಆರ್.ನಾಯಕ್ ಅವರನ್ನು ನೇಮಕ ಮಾಡುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಲಾಗಿದೆ. ಎಚ್.ಫಾರೂಕ್ ಎಂಬುವವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅವರು ಇದೇ ವಿಚಾರವನ್ನು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.












Click it and Unblock the Notifications