ವಿಧಾನ ಪರಿಷತ್ ಉಪ ಚುನಾವಣೆ: ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು, ಅಕ್ಟೋಬರ್ 13: ಕರ್ನಾಟಕದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಉಪ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದೆ. ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದ್ದು, ಚುನಾವಣಾ ಚಿತ್ರಣ ಅಂತಿಮವಾಗಿದೆ. ಚುನಾವಣಾ ಕಣದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಒಟ್ಟು ನಾಲ್ವರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಆದ್ದರಿಂದ ಮತದಾನ ನಡೆಯುವುದು ಖಚಿತವಾಗಿದೆ.
ವಿಧಾನ ಪರಿಷತ್ ಉಪ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 7 ಕೊನೆಯ ದಿನವಾಗಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಮಹಮದ್ ರಿಯಾಜ್ ನಾಮಪತ್ರವನ್ನು ವಾಪಸ್ ಪಡೆದರು. ಈಗ ಅಂತಿಮವಾಗಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಕ್ಟೋಬರ್ 21ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಘೋಷಣೆಯಾಗಲಿದೆ.

ಕಣದಲ್ಲಿರುವ ಅಭ್ಯರ್ಥಿಗಳು: ಬಿಜೆಪಿಯ ಕಿಶೋರ್ ಬಿ. ಆರ್., ಕಾಂಗ್ರೆಸ್‌ನ ರಾಜು ಪೂಜಾರಿ, ಎಸ್‌ಡಿಪಿಐನ ಅನ್ವರ್ ಸಾದತ್, ಪಕ್ಷೇತರ ಅಭ್ಯರ್ಥಿಯಾಗಿ ದಿನಕಲ್ ಉಳ್ಳಾಲ ಕಣದಲ್ಲಿ ಉಳಿದಿದ್ದಾರೆ. ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಮತದಾನ ಮಾಡಲಿದ್ದಾರೆ. ಚುನಾವಣಾ ಪ್ರಚಾರ ಈಗಾಗಲೇ ಜೋರಾಗಿದೆ.
ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದರು. ಅವರ ಅವಧಿ 5/1/2028ರ ತನಕ ಇತ್ತು. ಆದರೆ ಅವರು ಜೂನ್ 24ರಂದು ರಾಜೀನಾಮೆ ನೀಡಿದ್ದರು. ಆದ್ದರಿಂದ ಸದಸ್ಯತ್ವದ ಅವಧಿ ಪೂರ್ಣಗೊಳ್ಳದ ಕಾರಣ ಈಗ ಉಪ ಚುನಾವಣೆ ನಡೆಸಿ, ಹೊಸ ಸದಸ್ಯರನ್ನು ಆಯ್ಕೆ ಮಾಡಬೇಕಿದೆ.
ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ 2024ರ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್ ನೀಡಿತ್ತು. ಅವರು 7,32,234 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ (4,73,059 ಮತ) ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಈ ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಕಿಶೋರ್ ಕುಮಾರ್ ಪುತ್ತೂರು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಉಪ ಚುನಾವಣೆಗೆ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ನೇಮಿಸಿದ್ದಾರೆ. ಈಗಾಗಲೇ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಜೋರಾಗಿ ನಡೆಯುತ್ತಿದೆ.
ವಿಧಾನ ಪರಿಷತ್‌ನಲ್ಲಿ ಬಿಜೆಪಿ ಒಂದು ಸ್ಥಾನ ಕಳೆದುಕೊಂಡಿರುವುದರಿಂದ ಈ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅದನ್ನು ಉಳಿಸಿಕೊಳ್ಳಬೇಕಿದೆ. ಆಡಳಿತ ಪಕ್ಷ ಕಾಂಗ್ರೆಸ್ ಪರಿಷತ್‌ನಲ್ಲಿ ಸಂಖ್ಯಾಬಲದ ಕೊರತೆಯನ್ನು ಎದುರಿಸುತ್ತಿದೆ. ಉಪ ಚುನಾವಣೆ ಗೆದ್ದರೆ ಪಕ್ಷದ ಬಲ ಹೆಚ್ಚಲಿದೆ.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಸದಾ ಬಿಜೆಪಿ ಜನರ ಮುಂದೆ ಇಡುತ್ತಿದೆ. ಇದು ವಿಧಾನ ಪರಿಷತ ಉಪ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆಯೇ? ಕಾದು ನೋಡಬೇಕಿದೆ. ಸ್ಥಳೀಯ ಸಂಸ್ಥೆಗೆ ಆಯ್ಕೆಯಾದ ಜನಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ. ಆದ್ದರಿಂದ ಯಾವ ಅಭ್ಯರ್ಥಿಗೆ ಗೆಲುವು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications