ಪ್ರಿಯಾಂಕಾ ಗಾಂಧಿ ಮೆಚ್ಚಿಸಲು ಕರ್ನಾಟಕದಿಂದ ಕೇರಳದ ವಯನಾಡು ಪ್ರವಾಸಿ ತಾಣ ಪ್ರಚಾರ!
ಕನ್ನಡ ರಾಜ್ಯೋತ್ಸವ ಹೊಸ್ತಿಲಲ್ಲಿ ಇರುವಾಗ ಕರ್ನಾಟಕ ಸರ್ಕಾರವು ಎಡವಟ್ಟೊಂದನ್ನು ಮಾಡಿದೆ. ಕೇರಳದ ವಯನಾಡು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಪ್ರಚಾರ ಮಾಡಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಕೇರಳ ಲಾಭಿ ಹೆಚ್ಚಳವಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ರೀತಿ ಇರುವಾಗಲೇ ಕೇರಳದ ವಯನಾಡು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಅದರಲ್ಲೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದಲೇ ಮಾಡಿರುವ ಪೋಸ್ಟ್ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನಿಂದ ವಯನಾಡು ಪ್ರವಾಸ ಯೋಜನೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. "ಮಂಜಿನ ಹೊದಿಕೆಯೊಳಗೆ ಸುಂದರ ವಯನಾಡು. ನಿಮ್ಮನ್ನು ಕಾಯುತ್ತಿದೆ. 2 ರಾತ್ರಿ 3ದಿನ" ಎನ್ನುವ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇದು ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವೋ - ಕೇರಳದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವೋ ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.

ಕೆಎಸ್‌ಟಿಡಿಸಿ ರಾಷ್ಟ್ರೀಯ ಅಭಿಯಾನ ಕೇರಳದ ವಯನಾಡಿನಿಂದ ಪ್ರಾರಂಭವಾಗುತ್ತಿದೆ ಎಂದು ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ. ವಯನಾಡು ಯಾವಾಗ ಕರ್ನಾಟಕದ ಭಾಗವಾಯಿತು. ಚಿಕ್ಕಮಗಳೂರು, ಸಕಲೇಶಪುರ ಹಾಗೂ ಮಡಿಕೇರಿ ಇರುವಾಗ ನೆರೆಯ ಕೇರಳದ ವಯನಾಡು ಜಿಲ್ಲೆಯ ಬಗ್ಗೆ ಪ್ರಚಾರ ಮಾಡುವ ಅವಶ್ಯಕತೆ ಏನಿದೆ ಎಂದು ಕನ್ನಡಿಗರು ತೀಕ್ಷ್ಣವಾಗಿ ಪ್ರಶ್ನೆ ಮಾಡಿದ್ದಾರೆ.
ಬಸವರಾಜ್ ಎನ್ನುವವರು, ಕರ್ನಾಟದಲ್ಲಿ ಯಾವುದು ಪ್ರವಾಸ ತಾಣಗಳು ಇಲ್ಲವೇ, ಗಾಂಧಿ ಕುಟುಂಬವನ್ನು ಮೆಚ್ಚೆಸಿಲು ಕರ್ನಾಟಕ ಜನತೆಗೆ ಯಾಕೆ ದ್ರೋಹ ಬಗಿಯುತ್ತೀರ, ನಿಮ್ಮ ಉದ್ದೇಶ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಹಂಪಿ, ಪಟ್ಟದಕಲ್ಲು ಇನ್ನೂ ಅನೇಕ ಪ್ರವಾಸಿ ತಾಣಗಳು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.
ಕೇರಳದ ವಯನಾಡು ಪ್ರದೇಶವನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಧಿಕೃತ ಪುಟ ಪ್ರಚಾರ ಮಾಡುತ್ತಿದೆ. ಈ ರೀತಿಯ ಅನಿವಾರ್ಯತೆ ಏನಿದೆ ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ. ಬಿಟ್ಟರೆ ಕರ್ನಾಟಕ ರಾಜ್ಯವನ್ನು ವಯನಾಡು ಕ್ಷೇತ್ರಕ್ಕೆ ಮಾರಾಟ ಮಾಡಿಬಿಡಬಹುದು. ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸುವುದಕ್ಕೆ ಈ ರೀತಿ ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಮೆಚ್ಚಿಸಲು ಸರ್ಕಸ್: ಇನ್ನು ಕಾಂಗ್ರೆಸ್ ಮುಖಂಡೆ ಹಾಗೂ ವಯನಾಡ್ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಮೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಈ ರೀತಿ ಸಣ್ಣತವನ್ನು ಪ್ರದರ್ಶಿಸುತ್ತಿದೆ. ಈ ರೀತಿ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕೇರಳದ ಜಿಲ್ಲೆಯೊಂದರ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications