Get Updates
Get notified of breaking news, exclusive insights, and must-see stories!

Karnataka Elections 2023: ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಾರಿದ ಪ್ರಭಾವಿ ಶಾಸಕರು, ಮಾಜಿ ಶಾಸಕರು- ಹೆಸರು, ವಿವರ ತಿಳಿಯಿರಿ

ಬೆಂಗಳೂರು, ಮಾರ್ಚ್‌ 28: ಕರ್ನಾಟಕ ವಿಧಾನಸಭಾ ಚುನಾವಣೆಗೆ ( Karnataka Assembly Elections 2023 ) ಮುಂಚಿತವಾಗಿ ರಾಜ್ಯದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಈ ವರೆಗೂ ಬಿಜೆಪಿ ( BJP ) ಹಾಗೂ ಜೆಡಿಎಸ್‌ನಿಂದ ( JDS ) ಹೆಚ್ಚು ನಾಯಕರು ಕಾಂಗ್ರೆಸ್‌ಗೆ ( Congress ) ಸೇರಿರುವುದು ಕುತೂಹಲಕರವಾಗಿದೆ. ಶಾಸಕರು, ಮಾಜಿ ಶಾಸಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಗರಿಷ್ಠ ನಾಯಕರನ್ನು ಕಾಂಗ್ರೆಸ್‌ ಪಕ್ಷ ಬರಮಾಡಿಕೊಂಡಿದೆ.

ಬಿಜೆಪಿಯಿಂದ ಕನಿಷ್ಠ 9 ಶಾಸಕರು ಅಥವಾ ಮಾಜಿ ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದು, ಅವರಲ್ಲಿ ಮೂವರು ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದಿದ್ದಾರೆ. 2023 ರ ಚುನಾವಣೆಗೆ ಮುನ್ನ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ಕೆಲವು ನಾಯಕರ ಬಗ್ಗೆ ತಿಳಿಯಿರಿ.

Karnataka: Here is a list of BJP legislators and former legislators who have joined Congress

ಯು ಬಿ ಬಣಕಾರ

ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿಷ್ಠಾವಂತರಾಗಿದ್ದ ಬಣಕಾರ ಕಳೆದ ವರ್ಷ ನವೆಂಬರ್‌ನಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ 2019ರಲ್ಲಿ ಬಿಜೆಪಿಗೆ ಸೇರ್ಪಡೆಯಾದಾಗಿನಿಂದ ಬಣಕಾರ ಮುನಿಸಿಕೊಂಡಿದ್ದರು. ಪಾಟೀಲ್ ಅವರು ಹಿರೇಕೆರೂರಿನಿಂದ ಬಿಜೆಪಿ ಟಿಕೆಟ್‌ನಲ್ಲಿ ಮರು ಸ್ಪರ್ಧಿಸುವುದು ಬಹುತೇಕ ಖಚಿತವಾಗುತ್ತಿದ್ದಂತೆ ಬಣಕಾರ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಬಣಕಾರ ಹಿರೇಕೆರೂರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಹಿರೇಕೆರೂರಿನಿಂದ ಎರಡು ಬಾರಿ ಶಾಸಕರಾಗಿದ್ದಾರೆ. ಒಮ್ಮೆ 1994 ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಮತ್ತು 2013 ರಲ್ಲಿ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಟಿಕೆಟ್‌ನಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿದ್ದರು. ಬಿಸಿ ಪಾಟೀಲ್ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಬಣಕಾರ ವಿರುದ್ಧ ಕೇವಲ 555 ಮತಗಳಿಂದ ಗೆದ್ದಿದ್ದರು.

Congress

ಎಚ್ ನಾಗೇಶ್

ಬಿಎಸ್‌ವೈ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಮುಳಬಾಗಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್ ನಾಗೇಶ್ ಅವರು ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾಗೇಶ್ ಅವರು ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದ್ದರು. 2018 ರಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸಾಮೂಹಿಕ ರಾಜೀನಾಮೆ ನೀಡಿದ ಸಂದರ್ಭದಲ್ಲಿ, ನಾಗೇಶ್ ಕೂಡ ತಮ್ಮ ಬೆಂಬಲವನ್ನು ಹಿಂಪಡೆದು ಬಿಜೆಪಿಯನ್ನು ಬೆಂಬಲಿಸಿದರು. ಅವರು ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಅವರನ್ನು ಜನವರಿ 2021 ರಲ್ಲಿ ಸಚಿವ ಸ್ಥಾನದಿಂದ ಕೈಬಿಡಲಾಯಿತು. ಅಂದಿನಿಂದ ಅವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದರು.

Congress

ಎಚ್ ವಿಶ್ವನಾಥ್

73 ವರ್ಷದ ವಿಶ್ವನಾಥ್ ಅವರು 2019 ರಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿಯ ಬಿಎಸ್ ಯಡಿಯೂರಪ್ಪ ಸರ್ಕಾರ ರಚಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ 17 ಶಾಸಕರಲ್ಲಿ ಇವರೂ ಒಬ್ಬರು. 2019ರ ಉಪಚುನಾವಣೆಯಲ್ಲಿ ಹುಣಸೂರಿನಿಂದ ಸ್ಪರ್ಧಿಸಿ ಸೋತಿದ್ದಾರೆ. ಈ ಕ್ಷೇತ್ರವನ್ನು ಪ್ರಸ್ತುತ ಕಾಂಗ್ರೆಸ್‌ನ ಎಚ್‌ಪಿ ಮಂಜುನಾಥ್ ಪ್ರತಿನಿಧಿಸುತ್ತಿದ್ದಾರೆ.

ಹುಣಸೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತಾಗಿನಿಂದ ವಿಶ್ವನಾಥ್ ಅವರು ಬೇಸರಗೊಂಡಿದ್ದಾರೆ. ತಮ್ಮ ಸೋಲಿಗೆ ಸಹೋದ್ಯೋಗಿಗಳು ಹಾಗೂ ಪಕ್ಷದ ಮುಖಂಡರೇ ಕಾರಣ ಎಂದು ಆರೋಪಿಸಿದ್ದಾರೆ. ಸಚಿವ ಸಂಪುಟ ಸ್ಥಾನ ನಿರಾಕರಿಸಿದ್ದಕ್ಕೆ ಅವರು ಬಿಜೆಪಿ ಕುರಿತು ಅಸಮಾಧಾನಗೊಂಡಿದ್ದರು. ನಂತರ ಬರಹಗಾರರ ಕೋಟಾದಲ್ಲಿ ವಿಶ್ವನಾಥ್ ಅವರನ್ನು ಎಂಎಲ್‌ಸಿ ಮಾಡಲಾಯಿತು. ಇತ್ತೀಚೆಗಷ್ಟೇ ಅವರು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಪಕ್ಷ ಸೇರುವ ಸಾಧ್ಯತೆ ಇದೆ.

ಪುಟ್ಟಣ್ಣ

ಬಿಜೆಪಿಯ ಮಾಜಿ ಎಂಎಲ್‌ಸಿ ಪುಟ್ಟಣ್ಣ ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ಈಗಾಗಲೇ ಅವರಿಗೆ ಬೆಂಗಳೂರಿನ ರಾಜಾಜಿನಗರ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಆದರೆ, ಈ ನಿರ್ಧಾರದಿಂದ ಹಲವು ಸ್ಥಳೀಯ ಮುಖಂಡರಿಗೆ ಅಸಮಾಧಾನ ಉಂಟಾಗಿದ್ದು, ಈಗಾಗಲೇ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಲಿ ಎಂಎಲ್‌ಸಿಗಳನ್ನು ವಿಧಾನಸಭೆ ಚುನಾವಣೆಗೆ ಪರಿಗಣಿಸಬಾರದು ಎಂಬ ಅಲಿಖಿತ ನಿಯಮವನ್ನು ಬಿಜೆಪಿ ಹೊಂದಿದೆ.

ಬಾಬುರಾವ್ ಚಿಂಚನಸೂರ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಚಿಂಚನಸೂರ್‌ ಸಹ ಒಬ್ಬರು ಎಂದು ಹೇಳಲಾಗುತ್ತದೆ. ಬಾಬುರಾವ್ ಚಿಂಚನಸೂರ್ ಅವರು ಬೆಂಗಳೂರಿನಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಕಾಂಗ್ರೆಸ್ ಸೇರಿದರು. ಕಲ್ಯಾಣ ಕರ್ನಾಟಕ ಭಾಗದ ಕೋಲಿ- ಕಬ್ಬಲಿಗ ಸಮುದಾಯದ ಪ್ರಮುಖ ನಾಯಕ ಚಿಂಚನಸೂರ್ ಅವರು ತಮ್ಮ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಿಂಚನಸೂರ್ ಅವರು ಎಂಎಲ್‌ಸಿ ಆಗಿದ್ದಾರೆ. ಈ ಕಾರಣ ಬಿಜೆಪಿ ಪಕ್ಷದಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದರು.

ಜಿಎನ್ ನಂಜುಂಡಸ್ವಾಮಿ

ಕೊಳ್ಳೇಗಾಲದ ಮಾಜಿ ಶಾಸಕ ಮತ್ತು ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಜಿ ಎನ್ ನಂಜುಂಡಸ್ವಾಮಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. 1999 ರಲ್ಲಿ ಕೊಳ್ಳೇಗಾಲದಿಂದ ಕಾಂಗ್ರೆಸ್ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಅವರು ಬಿಜೆಪಿ ಸೇರಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಕೊಡುಗೆ ನೀಡಿದ್ದಾರೆ. ನಂಜುಂಡಸ್ವಾಮಿ ಅವರು ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದರು ಆದರೆ ಟಿಕೆಟ್ ಸಿಗುವ ನಿರೀಕ್ಷೆ ಹುಸಿಯಾಗಿದ್ದರಿಂದ ಅವರು ಪಕ್ಷಾಂತರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 2021ರಲ್ಲಿ ಬಿಜೆಪಿ ಸೇರಿದ ಹಾಲಿ ಶಾಸಕ ಎನ್‌ ಮಹೇಶ್‌ಗೆ ಬಿಜೆಪಿಯಿಂದ ಟಿಕೆಟ್‌ ಸಿಗುವ ಸಾಧ್ಯತೆ ಇದೆ.

ಮನೋಹರ ಐನಾಪುರ

ಬಂಜಾರ ಸಮುದಾಯದ ಪ್ರಭಾವಿ ಮುಖಂಡ ಹಾಗೂ ವಿಜಯಪುರದ ಮಾಜಿ ಶಾಸಕ ಮನೋಹರ ಐನಾಪುರ ಮೂರು ವರ್ಷಗಳ ನಂತರ ಕಾಂಗ್ರೆಸ್‌ಗೆ ಮರಳಿದ್ದಾರೆ. 2019ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಅವರ ವಾಪಸಾತಿಯೊಂದಿಗೆ ಕಾಂಗ್ರೆಸ್ ತನ್ನ ಅಹಿಂದ ಮತಬ್ಯಾಂಕ್ ಅನ್ನು ಸೆಳೆಯಲು ಮುಂದಾಗಿದೆ.

ವಿ ಎಸ್ ಪಾಟೀಲ್

ಯಲ್ಲಾಪುರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪಾಟೀಲ್ ಅವರಿಗೆ ನಾಯಕರಿಂದ ಯಾವುದೇ ಭರವಸೆ ಸಿಗದ ಹಿನ್ನೆಲೆಯಲ್ಲಿ ಪಕ್ಷ ಬದಲಾಯಿಸಲು ನಿರ್ಧರಿಸಿದ್ದಾರೆ. ಪಾಟೀಲ್‌ ಅವರನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ ಅಧ್ಯಕ್ಷ ಸ್ಥಾನದಿಂದ ಈ ವರ್ಷದ ಆಗಸ್ಟ್‌ನಲ್ಲಿ ಸರ್ಕಾರ ವಜಾಗೊಳಿಸಿತ್ತು. ಯಲ್ಲಾಪುರ ಕ್ಷೇತ್ರವನ್ನು ಪ್ರಸ್ತುತ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪ್ರತಿನಿಧಿಸುತ್ತಿದ್ದಾರೆ. 2019 ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬೆಂಬಲಿಸಿದ ಶಾಸಕರಲ್ಲಿ ಹೆಬ್ಬಾರ್‌ ಸಹ ಒಬ್ಬರು.

ಕೆ ಎಸ್ ಕಿರಣ್ ಕುಮಾರ್

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡ ಕೆಎಸ್ ಕಿರಣ್ ಕುಮಾರ್ ಈ ವರ್ಷದ ಫೆಬ್ರವರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಚಿಕ್ಕನಾಯಕನಹಳ್ಳಿಯಿಂದ ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಪ್ರತಿನಿಧಿಸುತ್ತಿರುವ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಯಡಿಯೂರಪ್ಪ ನಿಷ್ಠಾವಂತ ಕಿರಣ್ ಕುಮಾರ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾದ ನಂತರ ಕುಮಾರ್ ಕಾಂಗ್ರೆಸ್ ಸೇರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+