ಕರ್ನಾಟಕ ಸರ್ಕಾರ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ಆರಂಭಿಸಲಿದೆ: ದಿನೇಶ್ ಗುಂಡೂರಾವ್
ಬೆಳಗಾವಿ, ಅಕ್ಟೋಬರ್ 04: ಆರಂಭಿಕ ಹಂತಗಳಲ್ಲಿ ರೋಗಗಳನ್ನು ಗುರುತಿಸಲು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಮನೆ-ಮನೆಗೆ ತೆರಳಿ ಆರೋಗ್ಯ ಸಮೀಕ್ಷೆಯನ್ನು ನಡೆಸಲು ಯೋಜಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ರೋಗಗಳನ್ನು ತಡೆಗಟ್ಟುವುದು ತಮ್ಮ ಇಲಾಖೆಯ ಉದ್ದೇಶವಾಗಿದೆ. 'ಗೃಹ ಆರೋಗ್ಯ' ಕಾರ್ಯಕ್ರಮದಡಿ ರಾಜ್ಯಾದ್ಯಂತ ಮನೆ-ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಲಾಗುವುದು ಎಂದರು.

ನಾವು ಈ ವರ್ಷ ಎಂಟು ಜಿಲ್ಲೆಗಳನ್ನು ಒಳಗೊಳ್ಳುತ್ತೇವೆ ಮತ್ತು ಮುಂದಿನ ವರ್ಷಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುತ್ತೇವೆ. ರಕ್ತದೊತ್ತಡ ಮತ್ತು ಮಧುಮೇಹ ಪ್ರಮುಖ ಆರೋಗ್ಯ ಸಮಸ್ಯೆಗಳು. ಈ ಆರೋಗ್ಯ ಸಮಸ್ಯೆಗಳನ್ನು ಮೊದಲೇ ಗುರುತಿಸುವುದು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರೋಗ ಪತ್ತೆಯಾದವರಿಗೆ ಉಚಿತವಾಗಿ ಔಷಧ ಮತ್ತು ಚಿಕಿತ್ಸೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೇ, ಆರೋಗ್ಯ ಇಲಾಖೆಯ ಕಾರ್ಯಕರ್ತರು ರೋಗಿಗಳಿರುವ ಕುಟುಂಬಗಳಿಗೆ ಔಷಧಿಗಳನ್ನು ಒದಗಿಸುತ್ತಾರೆ. ಜನರಿಗೆ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಸಚಿವರು ಹೇಳಿದರು.
ಮಾನಸಿಕ ಆರೋಗ್ಯವನ್ನು ಕೇಂದ್ರೀಕರಿಸಲು ಆರೋಗ್ಯ ಇಲಾಖೆಯು ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ (KABHI) ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅಲ್ಲದೇ ಹಲವು ಜನರು ಖಿನ್ನತೆ ಸೇರಿದಂತೆ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಖಿನ್ನತೆಗೆ ಮದ್ದು ಇದೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ (KABHI) ಹೆಸರಿನ ಕಾರ್ಯಕ್ರಮದ ಅಡಿಯಲ್ಲಿ ನಾವು ಎಲ್ಲಾ ಜಿಲ್ಲಾ ಆಸ್ಪತ್ರೆಗಳನ್ನು ನಿಮ್ಹಾನ್ಸ್‌ನೊಂದಿಗೆ ಸಂಪರ್ಕಿಸುತ್ತಿದ್ದೇವೆ. ನಿಮ್ಹಾನ್ಸ್‌ನ ಹಿರಿಯ ವೈದ್ಯರು ಜಿಲ್ಲಾ ಆಸ್ಪತ್ರೆಗಳಲ್ಲಿನ ವೈದ್ಯರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮುಖ್ಯವಾಗಿ ತಾಯಿ ಮತ್ತು ಮಗುವಿನ ಆರೋಗ್ಯದ ಕಾಳಜಿಗೆ ಹೆಚ್ಚು ಒತ್ತು ನೀಡಲಾಗುವುದು. ಗರ್ಭಿಣಿಯರ ಹಾಗೂ ನವಜಾತು ಶಿಶುಗಳ ಆರೋಗ್ಯವನ್ನು ಕಾಪಾಡಲು ಹೆಚ್ಚಿನ ಆದ್ಯತೆ ಕೊಡುವಂತೆ ಸೂಚನೆ ನೀಡಲಾಗಿದೆ. 108 ಆ್ಯಂಬುಲೆನ್ಸ್ ಸಮಸ್ಯೆಯನ್ನು ಸರಿ ಪಡಿಸಿ ಹೊಸ ಕಾಯಕಲ್ಪ ಕೊಡುತ್ತೇವೆ. ಕಭಿ ಎಂಬ ಹೊಸ ಯೋಜನೆ ಜಾರಿ ಮಾಡುತ್ತಿದ್ದೇವೆ. ಮಾನಸಿಕ ಅಸ್ವಸ್ಥರನ್ನು ಸರಿ ಪಡಿಸಲು ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.












Click it and Unblock the Notifications