Industry: ಕರ್ನಾಟಕದಲ್ಲಿ ₹17,835 ಕೋಟಿ ಮೊತ್ತ ಯೋಜನೆಗಳಿಗೆ ಅನುಮೋದನೆ: ಉದ್ಯೋಗ ಸೃಷ್ಟಿ? ಬಂಡವಾಳ ವಿವರ
ಬೆಂಗಳೂರು, ಮಾರ್ಚ್ 08: ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಮತ್ತಷ್ಟು ಬಲ ತುಂಬಲು ಸರ್ಕಾರ ಮುಂದಾಗಿದೆ. ಕೋಟ್ಯಾಂತರ ರೂಪಾಯಿ ಬಂಡವಾಳ ಕೈಗಾರಿಕೆಯತ್ತ ಹರಿದು ಬರಲಿದೆ. ಏಕೆಂದ್ರೆ ರಾಜ್ಯ ಸರ್ಕಾರ ಶಿವರಾತ್ರಿ ದಿನ ಶುಕ್ರವಾರ ₹17,835 ಕೋಟಿ ಮೊತ್ತದ ಹಲವು ಯೋಜನೆಗಳಿಗೆ ಅನುಮೋದನೆ ನೀಡಿದೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ (ಎಸ್‌ಎಚ್‌ಎಲ್‌ಸಿಸಿ) 63ನೇ ಸಭೆ ನಡೆಯಿತು. ಈ ವೇಳೆ ಹೊಸ ಯೋಜನೆಗಳು ಸೇರಿದಂತೆ ಅನೇಕ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ.

ಕರ್ನಾಟಕದಾದ್ಯಂತ 27,067 ಉದ್ಯೋಗಗಳನ್ನು ಸೃಷ್ಟಿಸುವ ₹17835.9 ಕೋಟಿ ಮೊತ್ತದ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ ₹8220 ಕೋಟಿ ಮೊತ್ತದ 6 ಹೊಸ ಯೋಜನೆಗಳು ಹಾಗೂ ₹ 9,615.85 ಕೋಟಿ ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳು ಅನುಮೋದಿತ ಪಟ್ಟಿಯಲ್ಲಿವೆ.
ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಿಕ್ಕಿದ್ದೆಷ್ಟು?
ಮುಖ್ಯವಾಗಿ ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಹೂಡಿಕೆ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ಅನುಮತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಒಟ್ಟಾರೆ ₹ 10,433.72 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಆಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ವಿಸ್ಟ್ರಾನ್ ಇನ್ಫೊಕಾಂ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ₹2095 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಫೋನ್ ತಯಾರಿಕಾ ಘಟಕ ಆರಂಭಿಸಲಿದೆ. ಇದರಿಂದ 21,723 ಜನರಿಗೆ ಉದ್ಯೋಗಗಳು ದೊರೆಯಲಿವೆ ಎಂದರು.
ಯಾವೆ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹಾಕಲಿವೆ?
ರಾಜ್ಯದಲ್ಲಿ ಹೊಸದಾಗಿ ಬಂಡವಾಳ ಹೂಡಿಕೆ ಮಾಡಲು ಒಟ್ಟು 6 ಕಂಪನಿಗಳು ಮುಂದೆವೆ ಬಂದಿವೆ. 'ಎಸ್‍ಟಿಟಿ ಗ್ಲೋಬಲ್ ಡೇಟಾ ಸೆಂಟರ್ಸ್ ಇಂಡಿಯಾ ಪ್ರೈವೇಟ್ ಕಂಪನಿ, ಇಂಡಿಯನ್ ಕೇನ್ ಪವರ್ ಲಿಮಿಟೆಡ್, ಐ.ಸಿ.ಟಿ ಸರ್ವಿಸ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ಸ್ (ಇಂಡಿಯಾ) ಪ್ರೈವೇಟ್ ಕಂಪನಿ, ಶ್ರೀ ಬಾಲಾಜಿ ಷುಗರ್ಸ್ ಮತ್ತು ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಏರ್ ಇಂಡಿಯಾ ಲಿಮಿಟೆಡ್.
ಇವೆಲ್ಲ ಕಂಪನಿಗಲು ಸೇರಿ ಒಟ್ಟು ₹8220.05 ಕೋಟಿ ಮೊತ್ತದ ಬಂಡವಾಳ ಹೂಡಿಕೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದೆ. ಈ ಹೊಸ ಯೋಜನೆಗಳಿಂದ ರಾಜ್ಯದಲ್ಲಿ ಒಟ್ಟು 27,067 ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಸಭೆಯಲ್ಲಿ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ಅಧಿಕಾರಿಗಳಾದ ಡಾ.ರಜನೀಶ್ ಗೋಯಲ್, ಎಲ್.ಕೆ.ಅತೀಕ್ ಅವರೊಂದಿಗೆ ಡಾ.ಶಾಲಿನಿ ರಜನೀಶ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications