ಉದ್ಯೋಗಿಗಳ ಜೇಬಿಗೆ ಕರ್ನಾಟಕ ಸರ್ಕಾರದ ಕತ್ತರಿ, ತೆರಿಗೆ ಏರಿಕೆ
ಬೆಂಗಳೂರು, ಮಾರ್ಚ್ 06: ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡುವ ಮೊದಲೇ ಕರ್ನಾಟಕದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳ ಜೇಬಿಗೆ ಕತ್ತರಿ ಹಾಕಿದ್ದಾರೆ. ಮಾರ್ಚ್ 7ರ ಶುಕ್ರವಾರ ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದು, ಇನ್ನಷ್ಟು ತೆರಿಗೆ ಏರಿಕೆಯನ್ನು ನಿರೀಕ್ಷೆ ಮಾಡಲಾಗಿದೆ. ಜನರು ಬಜೆಟ್‌ನಲ್ಲಿ ಇನ್ನು ಯಾವ ಬೆಲೆ ಜಾಸ್ತಿ ಆಗಲಿದೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವೃತ್ತಿಪರ ತೆರಿಗೆಯನ್ನು ಏರಿಕೆ ಮಾಡಲು ಅನುಮತಿ ನೀಡಲಾಗಿದೆ. 100 ರೂ. ತೆರಿಗೆ ಏರಿಕೆಯಾಗಲಿದ್ದು, ಈ ಕುರಿತು ಶೀಘ್ರವೇ ಆದೇಶ ಪ್ರಕಟವಾಗಲಿದೆ. ವೇತನ ಪಡೆಯುವ ಎಲ್ಲರೂ ಈ ತೆರಿಗೆ ಪಾವತಿಸಬೇಕು.

ರಾಜ್ಯ ಸರ್ಕಾರ ಸಂಬಳ ಪಡೆಯುವ ವ್ಯಕ್ತಿಗಳು, ವೃತ್ತಿಪರರು ಅಥವಾ ಯಾವುದೇ ವ್ಯಾಪಾರ ಅಥವಾ ಉದ್ಯೋಗದಲ್ಲಿ ತೊಡಗಿರುವ ವ್ಯಕ್ತಿಗಳ ಮೇಲೆ ವಿಧಿಸುವ ತೆರಿಗೆಯೇ ವೃತ್ತಿಪರ ತೆರಿಗೆಯಾಗಿದೆ. ಸದ್ಯ 200 ರೂ. ವೃತ್ತಿಪರ ತೆರಿಗೆ ರಾಜ್ಯದಲ್ಲಿದ್ದು, ಇದು 300 ರೂ.ಗಳಿಗೆ ಏರಿಕೆಯಾಗಲಿದೆ.
ವಿಧೇಯಕಕ್ಕೆ ತಿದ್ದುಪಡಿ: ಕರ್ನಾಟಕದಲ್ಲಿ ವೃತ್ತಿಪರ ತೆರಿಗೆಯನ್ನು ಏರಿಕೆ ಮಾಡಲು 'ಕರ್ನಾಟಕ ವೃತ್ತಿ, ಕಸುಬು, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ ತಿದ್ದುಪಡಿ ವಿಧೇಯಕ-2025' ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ.
ರಾಜ್ಯದಲ್ಲಿ ಪ್ರಸ್ತುತ ಮಾಸಿಕ 15,000 ರೂ.ಗಳಿಗಿಂತ ಹೆಚ್ಚು ಆದಾಯಗಳಿಸುವ (ಉದ್ಯೋಗ, ವೃತ್ತಿ, ವ್ಯಾಪಾರ) ಮಾಡುವ ವ್ಯಕ್ತಿಗಳು ಮಾಸಿಕ 200 ರೂ. ವೃತ್ತಿಪರ ತೆರಿಗೆಯನ್ನು ಪಾವತಿ ಮಾಡಬೇಕು.
ವರ್ಷದ 11 ತಿಂಗಳು 200 ರೂ. ಮತ್ತು ಒಂದು ತಿಂಗಳು ಮಾತ್ರ 300 ರೂ. ಸೇರಿಸಿ
ವಾರ್ಷಿಕ 2,500 ರೂ. ತೆರಿಗೆಯನ್ನು ರಾಜ್ಯ ಸರ್ಕಾರಕ್ಕೆ ಪಾವತಿ ಮಾಡಬೇಕು. ಈಗ ಕರ್ನಾಟಕ ಸರ್ಕಾರ ಈ ತೆರಿಗೆಯನ್ನು ಮಾಸಿಕ 300 ರೂ. ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಕರ್ನಾಟಕದ ಬಜೆಟ್ ಅಧಿವೇಶನ ಮಾರ್ಚ್ 21ರ ತನಕ ನಡೆಯಲಿದೆ. ವೃತ್ತಿಪರ ತೆರಿಗೆಯನ್ನು ಏರಿಕೆ ಮಾಡಲು 'ಕರ್ನಾಟಕ ವೃತ್ತಿ, ಕಸುಬು, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ ತಿದ್ದುಪಡಿ ವಿಧೇಯಕ-2025'ವನ್ನು ಈ ಬಾರಿಯ ಅಧಿವೇಶನದಲ್ಲಿಯೇ ಮಂಡನೆ ಮಾಡಿ, ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಸರ್ಕಾರಿ ಬಸ್ ಪ್ರಯಾಣ ದರ, ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದೆ. ಹಾಲಿನ ದರ, ಆಟೋ ಪ್ರಯಾಣ ದರ ಯಾವುದೇ ಕ್ಷಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಜಲಮಂಡಳಿ ನೀರಿನ ದರವನ್ನು ಏರಿಕೆ ಮಾಡಲು ತಯಾರಿ ನಡೆದಿದೆ.
ಬಜೆಟ್ ಮಂಡನೆ ಮಾಡುವ ಮೊದಲೇ ಸಿದ್ದರಾಮಯ್ಯ ವೃತ್ತಿಪರ ತೆರಿಗೆ ಏರಿಕೆಗೆ ಒಪ್ಪಿಗೆ ನೀಡಿದ್ದಾರೆ. ಶುಕ್ರವಾರ ಮಂಡನೆ ಮಾಡುವ ಬಜೆಟ್‌ನಲ್ಲಿ ರಾಜ್ಯದ ಬೊಕ್ಕಸ ತುಂಬಿಸಲು ಹೊಸದಾಗಿ ಯಾವ ತೆರಿಗೆ ಏರಿಕೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications