ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಬ್ಲಾಕಿಂಗ್ ದಂಧೆ? 2,348 ವಿದ್ಯಾರ್ಥಿಗಳಿಗೆ ನೋಟಿಸ್
ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಬಹು ಬೇಡಿಕೆಯ ಕೋರ್ಸ್‌ಗಳಿಗೆ ಸೀಟು ಬ್ಲಾಕಿಂಗ್ ದಂಧೆ ನಡೆದಿದೆ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಎಂಜಿನಿಯರಿಂಗ್ ಸೀಟು ಸಿಕ್ಕಿದ್ದರೂ, ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ ಎಂದು ಡೆಕ್ಕಲ್ ಹೆರಾಲ್ಡ್ ವರದಿ ಮಾಡಿದೆ. ಈ ಸೀಟುಗಳನ್ನು ಖಾಸಗಿ ಕಾಲೇಜುಗಳು ದೊಡ್ಡ ಮೊತ್ತಕ್ಕೆ ಮಾರಿಕೊಂಡಿರುವ ಬಗ್ಗೆ ಕೂಡ ಶಂಕೆ ವ್ಯಕ್ತವಾಗುತ್ತಿದೆ.
ಡಿಎಚ್ ವರದಿಯ ಪ್ರಕಾರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಕೋಟಾದಡಿ ಎಂಜಿನಿಯರಿಂಗ್ ಸೀಟು ಹಂಚಿಕೆಯ ಎಲ್ಲಾ ಸುತ್ತಿನ ಪೂರ್ಣಗೊಂಡ ನಂತರ 2,348 ಸೀಟುಗಳನ್ನು ಕಾಲೇಜುಗಳಿಗೆ ಹಸ್ತಾಂತರಿಸಲಾಗಿದೆ. ಈ ಸೀಟುಗಳನ್ನು ಖಾಸಗಿ ಕಾಲೇಜುಗಳು ಮ್ಯಾನೇಜ್‌ಮೆಂಟ್ ಕೋಟಾದಡಿ 50-60 ಲಕ್ಷ ರೂಪಾಯಿಗೆ ಮಾರಿಕೊಂಡಿವೆ ಎನ್ನುವ ಆರೋಪ ಕೇಳಿಬಂದಿದ್ದು, ಇದು ನೂರಾರು ಕೋಟಿ ರೂಪಾಯಿ ಹಗರಣ ಎಂದು ಕೂಡ ಹೇಳಲಾಗುತ್ತಿದೆ.

ಸಿಇಟಿಯಲ್ಲಿ ಉನ್ನತ ರ್‍ಯಾಂಕ್ ಪಡೆದಿರುವ ವಿದ್ಯಾರ್ಥಿಗಳು ಸೀಟು ಹಂಚಿಕೆ ಪ್ರಕ್ರಿಯೆಯ ಎರಡನೇ ಸುತ್ತು ಪೂರ್ಣಗೊಳ್ಳುವವರೆಗೂ ಸೀಟು ಉಳಿಸಿಕೊಂಡು, ಬಳಿಕ ತಮಗೆ ಹಂಚಿಕೆಯಾಗಿರುವ ಕಾಲೇಜಿಗೆ ಪ್ರವೇಶ ಪಡೆಯದೇ, ಸರ್ಕಾರಿ ಸೀಟು ಪಡೆಯಲು ಕಾಯುತ್ತಿದ್ದ ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಬ್ಲಾಕ್
ವಿಶೇಷ ಎಂದರೆ ಈ ರೀತಿ ಬ್ಲಾಕ್ ಮಾಡಿರುವ ಸೀಟುಗಳು ಕೆಲವು ಪ್ರತಿಷ್ಠಿತ ಕಾಲೇಜುಗಳಿಗೆ ಸೇರಿವೆ. ಬೆಂಗಳೂರಿನ ಬಿಎಂಎಸ್ ಕಾಲೇಕ್ ಆಫ್ ಎಂಜಿನಿಯರಿಂಹ್, ನ್ಯೂ ಹಾರಿಜನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಸೇರಿದಂತೆ ಅನೇಕ ಕಾಲೇಜುಗಳಿದ್ದು, ಕಂಪ್ಯೂಟರ್ ಸೈನ್ಸ್ ಸೇರಿದಂತೆ ಬಹು ಬೇಡಿಕೆಯ ಕೋರ್ಸ್‌ಗಳ ಬ್ಲಾಕ್ ಮಾಡಿದ ಸೀಟುಗಳನ್ನು ಮ್ಯಾನೇಜ್‌ಮೆಂಟ್ ಕೋಟಾದಡಿ 30-40 ಲಕ್ಷ ರೂಪಾಯಿಗೆ ಮಾರಾಟವಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಸೀಟುಗಳನ್ನು ಆಯ್ಕೆ ಮಾಡಿಕೊಂಡಿದ್ದರೂ ಕಾಲೇಜಿಗೆ ಪ್ರವೇಶ ಪಡೆಯದ ವಿದ್ಯಾರ್ಥಿಗಳಿಗೆ ಈಗ ನೋಟಿಸ್ ನೀಡಲಾಗಿದೆ. ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಕೆಇಎ ಅಧಿಕಾರಿಗಳು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಮಾಡಿದೆ.
ಶಿಕ್ಷಣ ಸಚಿವರು ಹೇಳಿದ್ದೇನು?
ಈ ವಿಚಾರದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರತಿಕ್ರಿಯೆ ನೀಡಿ, "ಹಲವರು ಈಗಾಗಲೇ ಈ ಬಗ್ಗೆ ದೂರು ಕೊಟ್ಟಿದ್ದಾರೆ. ಕೆಇಎ ಬಿಡುಗಡೆ ಮಾಡಿರುವ ಪಟ್ಟಿಯನ್ನು ಪರಿಶೀಲನೆ ಮಾಡಿದಾಗ, ಕೆಲವು ಉನ್ನತ ಕಾಲೇಜುಗಳಲ್ಲಿ ಉಳಿದಿರುವ ಸೀಟುಗಳನ್ನು ನೋಡಿ ಗಾಬರಿಯಾಯಿತು. ಸಾಕಷ್ಟು ಅನುಮಾನಗಳು ಇರುವ ಕಾರಣ, ಸೀಟುಗಳನ್ನು ಆಯ್ಕೆ ಮಾಡಿಕೊಂಡರೂ ಕಾಲೇಜುಗಳಿಗೆ ವರದಿ ಮಾಡದ ವಿದ್ಯಾರ್ಥಿಗಳಿಗೆ ನೋಟಿಸ್ ಕೊಡಲಾಗಿದೆ" ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಉತ್ತರ ಕೊಟ್ಟ ಬಳಿಕೆ ಏನಾದರೂ ಅಕ್ರಮ ನಡೆದಿದೆ ಎನ್ನುವುದು ಕಂಡುಬಂದರೆ ತನಿಖೆಗೆ ಆದೇಶ ನೀಡಲಾಗುವುದು ಎಂದು ಹೇಳಿದ್ದಾರೆ. ಅಕ್ರಮ ನಡೆದಿದ್ದರೆ ವಿದ್ಯಾರ್ಥಿಗಳು ಮತ್ತು ಕಾಲೇಜುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಉನ್ನತ ಶಿಕ್ಷಣ ಇಲಾಖೆ ಮತ್ತು ಕೆಇಎ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಸೀಟು ಬ್ಲಾಕಿಂಗ್ ಮಾಡಿರುವ ಆರೋಪವನ್ನು ಪ್ರತಿಷ್ಠಿತ ಕಾಲೇಜುಗಳು ನಿರಾಕರಿಸಿವೆ. ಬಿಎಂಎಸ್‌ಸಿಇಯ ಪ್ರಾಂಶುಪಾಲರಾದ ಡಾ.ಭೀಮಶಾ ಆರ್ಯ ಈ ಬಗ್ಗೆ ಮಾತನಾಡಿದ್ದು, ಸಂಸ್ಥೆಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ, ಸೀಟು ಹಂಚಿಕೆ ಪ್ರಾಧಿಕಾರ ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಸಮಸ್ಯೆ ಎಂದು ಹೇಳಿದ್ದಾರೆ.












Click it and Unblock the Notifications