Lok Sabha Election 2024: ಬಿಜೆಪಿಗೆ ಶಾಕ್ ಕೊಟ್ಟ ಕಾಂಗ್ರೆಸ್: ಬರ ಪರಿಹಾರವನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡ ಕೈ ಪಡೆ
ಬೆಂಗಳೂರು, ಮಾರ್ಚ್ 24: ಬರದಿಂದ ಸಂಕಷ್ಟ ಎದುರಿಸುತ್ತಿರುವ ರಾಜ್ಯಕ್ಕೆ ನ್ಯಾಯಯುತ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಕೇಂದ್ರದಿಂದ ನಮ್ಮ ಪಾಲಿನ ಪರಿಹಾರ ಬರುತ್ತದೆ ಎಂದು ಕಾದು ಕಾದು ಸಾಕಾಗಿ ಸುಪ್ರೀಂಕೋರ್ಟ್ ಮೊರೆ ಹೋದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟದ ತೀರ್ಮಾನ ಪ್ರಕಟಿಸಿದ್ದು, ಈ ಮೂಲಕ ರಾಜ್ಯದ ಬರ ಪರಿಹಾರ ಕೋರಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂಬ ವಿಚಾರವನ್ನೇ ಪ್ರಮುಖ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಆಡಳಿತರೂಢ ಕಾಂಗ್ರೆಸ್ ತೀರ್ಮಾನಿಸಿದ್ದು, ಲೋಕಸಭಾ ಚುನಾವಣೆಗೆ ಸಜ್ಜಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆದ ಅನ್ಯಾಯವನ್ನು ಲೋಕಸಭೆ ಚುನಾವಣೆ ಪ್ರಚಾರ ಅಖಾಡದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧರಿಸಿದೆ. ಬರ ಪರಿಹಾರ ವಿಚಾರ ಕಾಂಗ್ರೆಸ್ ಗೆ ಸಿಕ್ಕ ಪ್ರಮುಖ ಅಸ್ತ್ರವಾಗಿದ್ದು, ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬಂದಿಲ್ಲ ಎಂಬುದನ್ನು ಚುನಾವಣೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ ಎನ್ನಲಾಗಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ರಾಜ್ಯಕ್ಕೆ NDRF ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಬಾಗಿಲು ಬಡಿದಿದ್ದೇವೆ. ಕೇಂದ್ರದಿಂದ ನಮ್ಮ ಪಾಲಿನ ಪರಿಹಾರ ಬರುತ್ತದೆ ಎಂದು ಕಾದು ಕಾದು ಸಾಕಾಗಿ ಸುಪ್ರೀಂಕೋರ್ಟ್ ಮೊರೆ ಹೋದೆವು. ಸಂವಿಧಾನದ ಪರಿಚ್ಛೇದ 32 ರ ಅಡಿಯಲ್ಲಿ ನಾವು ನಮ್ಮ ಕಾನೂನುಬದ್ದ ಹಕ್ಕನ್ನು ಚಲಾಯಿಸಿದ್ದೇವೆ ಎಂದು ತಿಳಿಸಿದರು.
ಬರದ ಸಂದರ್ಭದಲ್ಲಿ , ತುರ್ತು ಸಂದರ್ಭಗಳಲ್ಲಿ ಜನರಿಗೆ ತುರ್ತಾಗೆ ಸ್ಪಂದಿಸದ ಬೇಕು ಎನ್ನುವ ಉದ್ದೇಶದಿಂದಲೇ ವಿಪತ್ತು ನಿರ್ವಹಣಾ ಕಾನೂನು ಮಾಡಲಾಗಿದೆ ಆದರೆ ಇದುವರೆಗೂ ಕೇಂದ್ರ ಕಾನೂನು ಬದ್ದವಾಗಿ ನಮಗೆ ಬರಬೇಕಾದ ಹಣದಲ್ಲಿ ಒಂದೇ ಒಂದು ಪೈಸೆಯನ್ನೂ ಕೊಟ್ಟಿಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ರಾಜ್ಯದಲ್ಲಿ 240 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳನ್ನು ಬರಗಾಲ ಅಂತ ಘೋಷಿಸಿದ್ದೇವೆ. ನಾಲ್ಕು ಬಾರಿ ಮೌಲ್ಯಮಾಪನ ಮಾಡಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟ ಆಗಿದೆ. 3 ಬಾರಿ ಸತತವಾಗಿ ಕೇಂದ್ರಕ್ಕೆ ಮನವಿ ಪತ್ರ ಬರೆದೆವು. ಇದುವರೆಗೂ ಕೇಂದ್ರ ಸರ್ಕಾರ ರಾಜ್ಯದ ಪಾಲಿನಲ್ಲಿ ನಯಾ ಪೈಸೆಯನ್ನೂ ಕೊಟ್ಟಿಲ್ಲ ಎಂದರು.
ನಿಯಮವಾಳಿ ಪ್ರಕಾರ ರಾಜ್ಯ ಸರ್ಕಾರ ಮನವಿ ಮಾಡಿದ ವಾರದಲ್ಲಿ ಕೇಂದ್ರದ ತಂಡ ಬರಬೇಕು. ಆದರೆ, ಅಕ್ಟೋಬರ್ ನಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸಿ ಕೇಂದ್ರಕ್ಕೆ IMCT ವರದಿ ನೀಡಿದೆ. ಈ ವರದಿ ಕೊಟ್ಟ ಒಂದು ತಿಂಗಳಲ್ಲಿ ರಾಜ್ಯಕ್ಕೆ ಬರ ಪರಿಹಾರ ಕೊಡವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ನಿಯಮ. ಆದರೆ, ಇದುವರೆಗೂ ಕೇಂದ್ರ ರಾಜ್ಯದ ಜನರಿಗೆ ಸ್ಪಂದಿಸಿಲ್ಲ ಎಂದು ಹೇಳಿದರು.

ಕೇಂದ್ರ ತಂಡ ವರದಿ ಕೊಟ್ಟರೂ ನಮಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದಾಗ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ದೆಹಲಿಗೆ ಹೋದರೂ ಕೇಂದ್ರ ಸಚಿವರ ಭೇಟಿಗೆ ಅವಕಾಶವನ್ನೇ ಕೊಡಲಿಲ್ಲ. ಬಳಿಕ ನಾನೇ ಡಿಸೆಂಬರ್ 19 ರಂದು ನಾನು ಮತ್ತು ಕೃಷ್ಣಬೈರೇಗೌಡ ಅವರು ಮತ್ತೆ ದೆಹಲಿಗೆ ಹೋಗಿ ಪ್ರಧಾನ ಮಂತ್ರಿಗಳಿಗೆ ಭೇಟಿ ಮಾಡಿ ಮನವಿ ಮಾಡಿದೆವು. ನಂತರ ಡಿಸೆಂಬರ್ 20 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ಆದರೂ ನಮಗೆ ಪರಿಹಾರ ಕೊಡಲಿಲ್ಲ. ಬಳಿಕ ನಾನು ಬೆಂಗಳೂರಿನಲ್ಲೇ ಪ್ರಧಾನಿ ಮೋದಿಯವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದೆ. ಆದರೂ ಪರಿಹಾರ ಸಿಗಲಿಲ್ಲ.
ಕೇಂದ್ರದಿಂದ ನಯಾಪೈಸೆ ಬಿಡುಗಡೆ ಆಗದಿದ್ದಾಗ 327 ಕೊಟಿ ಕುಡಿಯುವ ನೀರಿಗೆ ಮೇವಿಗೆ 40 ಕೋಟಿ ರೈತರಿಗೆ 650 ಕೊಟಿ ಹೀಗೆ ಒಟ್ಟು 1017 ಕೊಟಿ ಬಿಡುಗಡೆ ಮಾಡಿದೆವು. ಡಿಸಿಗಳ ಬಳಿ ಇನ್ನೂ 800 ಕೋಟಿ ರೂಪಾಯಿ ಹಣ ಬರನಿರ್ವಹಣೆ ಉದ್ದೇಶಕ್ಕಾಗಿಯೇ ಮೀಸಲಿಡಲಾಗಿದೆ. ಬರ ನಿರ್ವಹಣೆ ಕುರಿತಾಗಿ ಅಧಿಕಾರಿಗಳಿಗೆ ಸ್ಪಷ್ಡ ಸೂಚನೆಗಳನ್ನು ನೀಡಲಾಗಿದೆ ಎಂದರು.
4663 ಕೋಟಿ ಇನ್ ಪುಟ್ ಸಬ್ಸಿಡಿಗೆ ಹಣ ಬೇಕು. ಕಾಯ್ದೆ ಪ್ರಕಾರ ಇಂಥಾ ಸನ್ನಿವೇಶದಲ್ಲಿ ತಡ ಮಾಡದೆ ಹಣ ಬಿಡುಗಡೆ ಆಗಬೇಕಿತ್ತು. ಆದರೆ ಐದು ತಿಂಗಳಾದರೂ ನಮಗೆ NDRF ನಿಧಿ ಬಂದೇ ಇಲ್ಲ. ಹೀಗಾಗಿ ನಾವು ಬೇರೆ ದಾರಿ ಇಲ್ಲದೆ ಸುಪ್ರೀಂ ಕೋರ್ಟ್ ಬಾಗಿಲು ಬಡಿಯಬೇಕಾಯಿತು ಎಂದು ಹೇಳಿದರು.












Click it and Unblock the Notifications