Karnataka Elections 2023: ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದ ಪ್ರಮುಖ ದಲಿತ ನಾಯಕರು
ಕರ್ನಾಟಕದ ಹಲವು ದಲಿತ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಬೆಂಗಳೂರು, ಮಾರ್ಚ್ 21: ಕರ್ನಾಟಕ ಚುನಾವಣೆಗೆ ( Karnataka Assembly Elections 2023 ) ಕೆಲ ದಿನಗಳು ಬಾಕಿ ಇದೆ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಹೊಸದಾಗಿ ಸೇರ್ಪಡೆಯಾಗುವ ಹಾಗೂ ಪಕ್ಷಾಂತರಗೊಳ್ಳುವ ಮುಖಂಡರ ಸಂಖ್ಯೆ ಅಧಿಕವಾಗುತ್ತಿದೆ. ರಾಜ್ಯದ ಮೂರು ಪ್ರಮುಖ ಪಕ್ಷಗಳಿಗೆ ಹೋಲಿಸಿದರೆ, ಕಾಂಗ್ರೆಸ್ ( Congress ) ಪಕ್ಷಕ್ಕೆ ಹೆಚ್ಚು ಜನರು ಸೇರ್ಪಡೆಗೊಳ್ಳುತ್ತಿರುವುದು ಕಂಡುಬಂದಿದೆ.
ಇಂದು ( ಮಂಗಳವಾರ ) ರಾಜ್ಯದ ಹಲವು ದಲಿತ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕರ್ನಾಟಕದ ಕಾಂಗ್ರೆಸ್ ರಾಜ್ಯ ಘಟಕವು, 'ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ದಲಿತ ಸಂಘಟನೆಯ ಮುಖಂಡರಾದ ಸುದಾಮ್ ದಾಸ್, ನಿಂಬಣ್ಣ, ಬಿ. ಗೋಪಾಲ್, ಶ್ರೀನಿವಾಸ್ ಸೇರಿ ಅನೇಕ ದಲಿತ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು' ಎಂದು ತಿಳಿಸಿದೆ.

ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಡಾ ಪರಮೇಶ್ವರ್, ಕೇಂದ್ರದ ಮಾಜಿ ಸಚಿವರಾದ ಕೆಚ್ ಮುನಿಯಪ್ಪ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು ಎಂದೂ ಕಾಂಗ್ರೆಸ್ ತಿಳಿಸಿದೆ. ಇದಕ್ಕೆ ಸಂಬಂಧಿಸಿದ ಎರಡು ಫೋಟೊಗಳನ್ನು ಕೆಪಿಸಿಸಿ ಹಂಚಿಕೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, 'ವಂಚಿತ, ಎಸ್‌ಸಿ ಸಮುದಾಯದ ಮುಖಂಡರಿಗೆ ಸ್ವಾಗತ. ಕರ್ನಾಟಕದ ದಲಿತ ನಾಯಕರಾದ ಅಂಬಣ್ಣ ಅರೋಲಿಕರ್, ಗೋಪಾಲ್, ಸುದಾಮ ದಾಸ್ ಹಾಗೂ ಶ್ರೀನಿವಾಸ್ ಇಂದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು. ಬಿಜೆಪಿಯ ದಬ್ಬಾಳಿಕೆಯ, ಕ್ರೂರ ಮತ್ತು ದಲಿತ ವಿರೋಧಿ ನೀತಿಗಳ ವಿರುದ್ಧ ನಾವು ಒಟ್ಟಾಗಿ ಹೋರಾಡುತ್ತೇವೆ' ಎಂದೂ ತಿಳಿಸಿದ್ದಾರೆ.
ಬಿಜೆಪಿಗೆ ಚಿಂಚನಸೂರ್ ರಾಜೀನಾಮೆ
ಆಡಳಿತಾರೂಢ ಭಾರತೀಯ ಜನತಾ ಪಕ್ಷದ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಇದೇ ತಿಂಗಳು ರಾಜೀನಾಮೆ ನೀಡಿದ ಎರಡನೇ ಬಿಜೆಪಿ ಎಂಎಲ್‌ಸಿ ಚಿಂಚನಸೂರ್ ಆಗಿದ್ದಾರೆ. ಕೋಲಿ ಸಮುದಾಯದಿಂದ ಬಂದಿರುವ ಬಾಬುರಾವ್ ಚಿಂಚನಸೂರ್ ಮಾರ್ಚ್ 25 ರಂದು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಪುಟ್ಟಣ್ಣ ಕಾಂಗ್ರೆಸ್ ಸೇರಿದ್ದರು. ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವ ಅವರು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ನಿರುದ್ಯೋಗಿ ಯುವಕರಿಗೆ ಗ್ಯಾರಂಟಿ ಘೋಷಣೆ
ಬೆಳಗಾವಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಪದವೀಧರರಿಗೆ 3,000 ರೂ ಮತ್ತು ಡಿಪ್ಲೋಮಾ ಹೊಂದಿರುವವರಿಗೆ 1,500 ರೂ ನಿರುದ್ಯೋಗ ಭತ್ಯೆಯನ್ನು ಘೋಷಿಸಿದರು.
ಇದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಲ್ಕನೇ ಗ್ಯಾರಂಟಿಯಾಗಿದ್ದು, ಈ ಹಿಂದೆ ಎಲ್ಲಾ ಕುಟುಂಬಗಳಿಗೆ 200 ಯೂನಿಟ್ ಉಚಿತ ವಿದ್ಯುತ್ - ಗೃಹ ಜ್ಯೋತಿ, ಕುಟುಂಬದ ಮಹಿಳೆ ತಿಂಗಳಿಗೆ 2,000 ರೂ. - ಗೃಹ ಲಕ್ಷ್ಮಿ ಮತ್ತು ಬಿಪಿಎಲ್ ಕುಟುಂಬಗಳಿಗೆ 10 ಕೆ.ಜಿ. ಅಕ್ಕಿ - ಅನ್ನ ಭಾಗ್ಯದ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.












Click it and Unblock the Notifications