ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ರೊಚ್ಚಿಗೆದ್ದಿದ್ದು ಏಕೆ?
ಕರ್ನಾಟಕದಲ್ಲಿ ಭೀಕರ ಬರ ಎದುರಾಗಿದೆ, ಅದರಲ್ಲೂ ಮಳೆರಾಯ ಕೈಕೊಟ್ಟ ಕಾರಣಕ್ಕೆ ಕನ್ನಡಿಗರು ಒದ್ದಾಡಿದ್ದರು. ಕರ್ನಾಟಕ ಈ ಬಾರಿ ಐತಿಹಾಸಿಕ ಬರದ ಸುಳಿಗೆ ಸಿಲುಕಿ, ನಲುಗಿ ಹೋಗಿದೆ. ಇದೇ ಸ್ಥಿತಿಯಲ್ಲಿ ಬಿತ್ತನೆ ಮಾಡಿದ್ದ ಬೆಳೆ ಕೂಡ ಕೈಗೆ ಸಿಕ್ಕಿಲ್ಲ. ಹಾಗೇ, ಕುಡಿಯುವ ನೀರಿಗೆ ಸುಮಾರು ಪ್ರದೇಶದಲ್ಲಿ ಹಾಹಾಕಾರ ಎದುರಾಗಿದೆ. ಈ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಕನ್ನಡಿಗರ ನೆರವಿಗೆ ನಿಂತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಆರೋಪವ ಮಾಡಿದ್ದು ಖುದ್ದು ಸಿಎಂ ಸಿದ್ದರಾಮಯ್ಯ ಅವರು.
ಹೌದು ಬರ ಪರಿಹಾರದ ಸಂಬಂಧ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಇದೀಗ ಸಿಎಂ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರೆ. ಬರ ಪರಿಹಾರ ಸಂಬಂಧ ಕೇಂದ್ರಕ್ಕೆ ಬರೆದ ಪತ್ರಗಳಿಗೆ ಈವರೆಗು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಕೇಂದ್ರ ಸರ್ಕಾರವು, ರಾಜ್ಯದ ರೈತರಿಗೆ ಪರಿಹಾರ ಕೊಡೋಕೆ ಇನ್ನೂ ಪ್ರಾಥಮಿಕ ಸಭೆ ನಡೆಸದ ಹಿನ್ನೆಲೆ ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗಿದೆ. ಮೊದಲನೇ ಕಂತಿನಲ್ಲಿ ಅರ್ಹ ರೈತರಿಗೆ ತಲಾ 2,000 ರೂ.ವರೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.

ನಮ್ಮ ಹಣ ನಮಗೆ ಕೊಡಲಿ ಸಾಕು!
ಉದ್ಯೋಗ ಖಾತರಿ ಯೋಜನೆಯಡಿ 150 ಮಾನವ ದಿನಗಳ ಉದ್ಯೋಗ ಕೊಡೋದಕ್ಕೆ ಕೇಂದ್ರಕ್ಕೆ ಅನುಮತಿ ಕೋರಲಾಗಿತ್ತು. ಆದರೆ ಇನ್ನೂ ಅನುಮತಿ ನೀಡಿಲ್ಲ. ರಾಜ್ಯದ 223 ತಾಲೂಕುಗಳ ಬರಪೀಡಿತ ಎಂದು 3 ಹಂತದಲ್ಲಿ ಘೋಷಿಸಿದ್ದೇವೆ. 18,171 ಕೋಟಿ ರೂಪಾಯಿ ಪರಿಹಾರದ ಆರ್ಥಿಕ ನೆರವು ನೀಡಲು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರ ನಮ್ಮ ತೆರಿಗೆ ಹಣದ ಪಾಲನ್ನೂ ನಮಗೆ ವಾಪಾಸ್ ಕೊಟ್ಟರೂ ಸಾಕು ನಮ್ಮ ರೈತರ ಕಷ್ಟಕ್ಕೆ ಸಹಾಯವಾಗುತ್ತಿತ್ತು ಎಂದಿದ್ದಾರೆ.
ಭೇಟಿಗೂ ಅವಕಾಶ ಕೊಡುತ್ತಿಲ್ಲ!
ಸೆ. 21ರಂದು ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೆವು. ಕೇಂದ್ರದ ತಂಡ ಅಕ್ಟೋಬರ್ 4 ರಿಂದ 9ರ ವರೆಗೆ ರಾಜ್ಯ ಪ್ರವಾಸ ಮಾಡಿ ಬರ ಸಮೀಕ್ಷೆ ನಡೆಸಿ, ವರದಿ ನೀಡಿದೆ. ನಾವೆಲ್ಲಾ ಕೇಂದ್ರ ತಂಡವನ್ನು ಭೇಟಿ ಮಾಡಿ ಚರ್ಚಿಸಿ ಬರದ ಸ್ಥಿತಿ ವಿವರಿಸಿದ್ದೇವೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. 4,663 ಕೋಟಿ ರೂಪಾಯಿ ಬೆಳೆ ನಷ್ಟದ ಪರಿಹಾರ, ಕೇಂದ್ರಕ್ಕೆ ಕೇಳಿದ್ದೆವು. ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇವೆ. ಕೇಂದ್ರ ಕೃಷಿ & ಗೃಹ ಸಚಿವರ ಖುದ್ದು ಭೇಟಿ ಮಾಡಲು ಸಮಯ ಕೊಡಿ ಎಂದು ಪತ್ರ ಬರೆದಿದ್ದೇವೆ. ಇವತ್ತಿನವರೆಗೂ ಸಮಯ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸಿಎಂ ಸಿದ್ದರಾಮಯ್ಯ.

ಕರ್ನಾಟಕದ ಮನವಿಗೆ ಬೆಲೆ ಇಲ್ವಾ?
ಇವತ್ತಿನವರೆಗೆ ಕೇಂದ್ರ ಸಭೆಯನ್ನೇ ನಡೆಸಿಲ್ಲ ಸಮಯ ಕೇಳಿದ್ರೂ ಭೇಟಿಗೆ ಅವಕಾಶ ಕೊಟ್ಟಿಲ್ಲ. ಅಧಿಕಾರಿಗಳನ್ನಾದರೂ ಭೇಟಿ ಮಾಡಿ ಎಂದು ಹೇಳಿ ನಾನು ಮೂವರು ಸಚಿವರನ್ನು ದೆಹಲಿಗೆ ತೆರಳಲು ಹೇಳಿದ್ದೆ. 3 ಜನ ದೆಹಲಿಗೆ ಹೋಗಿ ಅಧಿಕಾರಿಗಳಿಗೆ ವಿವರಿಸಿದ್ದಾರೆ. ವಿತ್ತ ಸಚಿವರನ್ನ ನಮ್ಮ ಮಂತ್ರಿಗಳು ಭೇಟಿ ಮಾಡಿದ್ದಾರೆ. ಆದ್ರೂ ಕೇಂದ್ರ ಸರ್ಕಾರ ಇವತ್ತಿನವರೆಗೆ ಸಭೆ ನಡೆಸಿಲ್ಲ ಪರಿಹಾರ ನೀಡುವ ಪ್ರಕ್ರಿಯೆಯನ್ನೇ ಶುರು ಮಾಡಿಲ್ಲ ಎಂದು ಸಿಎಂ ಸಿದ್ದಾರಾಮಯ್ಯ ಅವರು ಈಗ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಸರ್ಕಾರವೇ ಖರ್ಚು ಮಾಡಿದೆ
ಬಿತ್ತನೆ ವೈಫಲ್ಯ & ಮಧ್ಯಂತರ ವಿಮೆ ಪರಿಹಾರಕ್ಕೆ ರಾಜ್ಯ ಸರ್ಕಾರ ಈಗಾಗಲೇ 6.5 ಲಕ್ಷ ರೈತರಿಗೆ 460 ಕೋಟಿ ರೂಪಾಯಿ ನಮ್ಮ ಸರ್ಕಾರ ಬಿಡುಗಡೆ ಮಾಡಿದೆ. ಕುಡಿಯುವ ನೀರು, ಮೇವಿಗೆ 327 ಕೋಟಿ ರೂಪಾಯಿ ಬಿಡುಗಡೆ ಮತ್ತು 780 ಕೋಟಿ ಜಿಲ್ಲಾಧಿಕಾರಿಗಳ PD ಖಾತೆಯಲ್ಲಿದೆ ಎಂದು ತಿಳಿಸಿದ್ದಾರೆ ಸಿಎಂ. ಅವರೂ ತಹಶೀಲ್ದಾರ್ ಗಳಿಗೆ ಬಿಡುಗಡೆ ಮಾಡಿದ್ದಾರೆ. ಯಾವ ತಾಲೂಕುಗಳಲ್ಲೂ ಕುಡಿವ ನೀರಿಗೆ ಸಮಸ್ಯೆ ಇಲ್ಲದಂತೆ ನಿರ್ವಹಿಸಿದ್ದೇವೆ. ವಿವಿಧ ತಾಲೂಕುಗಳ ಹಲವು ಹಳ್ಳಿಗಳಲ್ಲಿ ಟ್ಯಾಂಕರ್ ನೀರು ವ್ಯವಸ್ಥೆ ಮಾಡಿದ್ದೆವೆ. ಹೊರರಾಜ್ಯಕ್ಕೆ ಮೇವು ಹೋಗದ ರೀತಿ ತಡೆದಿದ್ದೇವೆ. ಮೇವಿನ ಬೀಜ ವಿತರಣೆ ಮಾಡಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.












Click it and Unblock the Notifications