ಹುಬ್ಬಳ್ಳಿ ಸಮಾವೇಶದಲ್ಲಿ ₹1,275 ಕೋಟಿ ಹೂಡಿಕೆಗೆ ಒಡಂಬಡಿಕೆ: ಶೇ.70ರಷ್ಟು ಕನ್ನಡಿಗರಿಗೆ ಉದ್ಯೋಗ
ಬೆಳಗಾವಿ, ಡಿಸೆಂಬರ್ 08: ಬೆಂಗಳೂರಿನಲ್ಲಿ ಕಳೆದ ವರ್ಷ 2022ರ ನವೆಂಬರ್ ತಿಂಗಳಲ್ಲಿ ನಡೆಸಿದ 'ಇನ್ವೆಸ್ಟ್ ಕರ್ನಾಟಕ' ಸಮಾವೇಶದ ಮೂಲಕ 57 ಕಂಪನಿಗಳೊಂದಿಗೆ 5,41,369 ಕೋಟಿ ರೂಪಾಯಿ ಹೂಡಿಕೆಗೆ ಕರ್ನಾಟಕ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಅದೇ ರೀತಿ ಹುಬ್ಬಳ್ಳಿಯಲ್ಲಿ ನಡೆಸಲಾದ ಎಫ್ಎಂಸಿಜಿ ಹೂಡಿಕೆದಾರರ ಸಮಾವೇಶದಲ್ಲಿಯೂ ಭಾರಿ ಮೊತ್ತದ ಹೂಡಿಕೆಯ ಒಪ್ಪಂದವಾಗಿದೆ.
ಸದ್ಯ ಬೆಳಗಾವಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ವೇಳೆ ಪ್ರಶ್ನೋತ್ತರ ವೇಳೆಯಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ಕೇಳಿದ ಪ್ರಶ್ನೆಗೆ ಕರ್ನಾಟಕ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಉತ್ತರಿಸಿದರು.

ಹುಬ್ಬಳ್ಳಿಯಲ್ಲಿ ನಡೆಸಲಾಗ ಹೂಡಿಕೆದಾರರ ಸಮಾವೇಶದಿಂದ 16 ಕಂಪನಿಗಳೊಂದಿಗೆ ರಾಜ್ಯದಲ್ಲಿ 1,275 ಕೋಟಿ ರೂ. ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ವೆಸ್ಟ್ ಕರ್ನಾಟಕದಲ್ಲಿ ಕುದುರಿಸಲಾದ ಒಡಂಬಡಿಕೆಗಳ ಪೈಕಿ 7 ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದ್ದು, ಇವುಗಳಿಗೆ ಭೂಮಿ, ನೀರು ಮತ್ತು ವಿದ್ಯುತ್ ಪೂರೈಕೆ ಒದಗಿಸಲಾಗುವುದು. ಇವು ಬೃಹತ್ ಯೋಜನೆಗಳಾದ್ದರಿಂದ ಕಾರ್ಯಾರಂಭ ಮಾಡಲು 3-4 ವರ್ಷಗಳು ಹಿಡಿಯುತ್ತವೆ ಎಂದು ಅವರು ವಿವರಿಸಿದರು.

ಏಕಗವಾಕ್ಷಿ ಮೂಲಕ ಅನುಮೋದನೆ
ಎಫ್ಎಂಸಿಜಿ ಸಮಾವೇಶದಲ್ಲಾದ 16 ಒಡಂಬಡಿಕೆಗಳ ಪೈಕಿ 3 ಯೋಜನೆಗಳಿಗೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅನುಮೋದನೆ ಕೊಡಲಾಗಿದೆ. ಇವುಗಳಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮೇಲ್ಕಂಡ ಎರಡೂ ಬಗೆಯ ಯೋಜನೆಗಳು ಅನುಷ್ಠಾನದ ನಾನಾ ಹಂತಗಳಲ್ಲಿವೆ ಎಂದು ಅವರು ತಿಳಿಸಿದರು.
ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಹಿಂದಿನ ಸರ್ಕಾರ 74.99 ಕೋಟಿ ರೂ. ವೆಚ್ಚ ಮಾಡಿದೆ. ಹಾಗೆಯೇ, ಹುಬ್ಬಳ್ಳಿಯಲ್ಲಿ 2022ರ ನವೆಂಬರಿನಲ್ಲಿ ನಡೆಸಲಾದ ಹೂಡಿಕೆದಾರರ ಸಮಾವೇಶಕ್ಕೆ 12.23 ಲಕ್ಷ ರೂ.ಗಳನ್ನು ಸರಕಾರದ ವತಿಯಿಂದ ಖರ್ಚು ಮಾಡಲಾಗಿದೆ.
ಕರ್ನಾಟಕ ಸರ್ಕಾರದ ನಿಯಮಾವಳಿಗಳ ಪ್ರಕಾರ ಈ ಉದ್ಯಮಗಳಲ್ಲಿ 'ಡಿ' ಗ್ರೂಪ್ ಹುದ್ದೆಗಳನ್ನು ಕನ್ನಡಿಗರಿಗೆ ಶೇಕಡಾ 100 ರಷ್ಟು ಮತ್ತು ಒಟ್ಟಾರೆಯಾಗಿ ಶೇಕಡಾ 70ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕೊಡಬೇಕೆನ್ನುವ ನಿಯಮ ರೂಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.












Click it and Unblock the Notifications