Krishna Janmastami: ಮಾನವನಾಗಿ ಹುಟ್ಟಿದ ಕೃಷ್ಣ ಯಾವತ್ತೂ ಕೈಯಲ್ಲಿ..
ಬೆಂಗಳೂರು: ಧರ್ಮಕ್ಕೋಸ್ಕರ ಮನುಷ್ಯ ಅಲ್ಲ ಆದ್ರೆ ಮನುಷ್ಯನಿಗಾಗಿ ಧರ್ಮ ಇದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಮಾನವನಾಗಿ ಹುಟ್ಟಿದ ಕೃಷ್ಣ ಯಾವತ್ತೂ ಕೈಯಲ್ಲಿ ಶಸ್ತ್ರ ಹಿಡಿಯದೆ ದೈವತ್ವಕ್ಕೆ ಏರಿದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಆದರೆ ಧರ್ಮದ ಹೆಸರಲ್ಲಿ ಮನುಷ್ಯರನ್ನು ದ್ವೇಷಿಸುವುದು ಅಧರ್ಮ. ಮನುಷ್ಯ ದ್ವೇಷದ ಅಧರ್ಮದ ವಿರುದ್ಧವೇ ಕೃಷ್ಣ ಕೈಯಲ್ಲಿ ಶಸ್ತ್ರ ಹಿಡಿಯದೆ ಹೋರಾಡಿ ಧರ್ಮ ಸ್ಥಾಪನೆ ಮಾಡಿದ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸು ಕೂಡ ಮನುಷ್ಯ ಪ್ರೀತಿಯ ಸಮಾನತೆಯ ಸಮಾಜ ಸೃಷ್ಟಿ ಆಗಬೇಕು ಎನ್ನುವುದಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂವಿಧಾನ ರಕ್ಷಿಸುವವರ ಕೈಯಲ್ಲಿ..
ಸ್ವತಂತ್ರ ಭಾರತಕ್ಕೆ ಸಂವಿಧಾನ ಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವೂ ಇದೇ ಆಗಿತ್ತು. ಪ್ರತಿಯೊಬ್ಬರಿಗೂ ಅವರವರ ಇಷ್ಟದ ಧರ್ಮ ಒಪ್ಪಿಕೊಳ್ಳುವ, ಆಚರಿಸುವ ಸ್ವಾತಂತ್ರ್ಯವನ್ನು ನೀಡಿತು. ಜಾತಿ, ಧರ್ಮ ಆಧಾರಿತ ತಾರತಮ್ಯ ಮತ್ತು ಅಸಮಾನತೆಯನ್ನು ಸಂವಿಧಾನಬಾಹಿರ ಎಂದು ಅಂಬೇಡ್ಕರ್ ಘೋಷಿಸಿದರು. ಹೀಗಾಗಿ ಸಂವಿಧಾನ ರಕ್ಷಿಸುವವರ ಕೈಯಲ್ಲಿ ಅಧಿಕಾರ ಇರಬೇಕು. ಸಂವಿಧಾನ ವಿರೋಧಿಗಳ ಕೈಗೆ ದೇಶದ ಅಧಿಕಾರವನ್ನು ನೀಡಿ ಪರಿತಪಿಸಬೇಡಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.
ಎಲ್ಲರಿಗೂ ರಾಜಕೀಯ ಪ್ರಾತಿನಿಧ್ಯ
ಯಾದವ ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ತಾರತಮ್ಯದಿಂದ ಹೊರಗೆ ಬರಬಹುದು. ಶಿಕ್ಷಣದ ಮೂಲಕ ಅಸಮಾನತೆಯನ್ನು ತೊಡೆದು ಹಾಕಬಹುದು. ಯಾದವ ಸಮುದಾಯದ ಯಾರೊಬ್ಬರೂ ಶಾಸಕರಾಗಿ ಗೆಲ್ಲದ ಕಾರಣದಿಂದ ನಾನು ಈ ಸಮುದಾಯಕ್ಕೆ ಸೇರಿದ ನಾಗರಾಜ ಯಾದವರನ್ನು ಕರೆದು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೆ. ಇದೇ ರೀತಿ ಸಮುದಾಯದ ಹಲವು ಮಂದಿಗೆ ನಾನಾ ರೀತಿ ರಾಜಕೀಯ ಪ್ರಾತಿನಿಧ್ಯ, ಅವಕಾಶವನ್ನು ನಾನು ಒದಗಿಸಿದ್ದೇನೆ ಎಂದರು.

ಮೀಸಲಾತಿ ಹೆಚ್ಚಿಸುವ ಬಗ್ಗೆ ಭರವಸೆ
ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯವನ್ನ ಎಸ್‌ಟಿಗೆ ಸೇರಿಸಿ ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇನೆ. ಕೇಂದ್ರ ಸರ್ಕಾರ ಹಿಡ್ಕೊಂಡು ಕುಳಿತಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರ ಇದ್ದಿದ್ದರೆ ಇಷ್ಟೊತ್ತಿಗೆ ನಾನೇ ಮಾಡಿ ಮುಗಿಸುತ್ತಿದ್ದೆ. ಆದರೂ ನಮ್ಮ ಶಿಫಾರಸ್ಸನ್ನು ಜಾರಿ ಮಾಡುವಂತೆ ಕೇಂದ್ರಕ್ಕೆ ಒತ್ತಡ ಹಾಕುತ್ತೇವೆ. ಮೀಸಲಾತಿ ಪ್ರಮಾಣ ಶೇಕಡ 50 ಕ್ಕಿಂತ ಹೆಚ್ಚಿಸಲು ಕಾನೂನು ತರಲು ಅಗತ್ಯ ಕ್ರಮ ಕೈಮ ಕೈಗೊಂಡು ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಯಾದವ ಸಮುದಾಯದ ಒಬ್ಬರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡಿ ಎನ್ನುವ ಬೇಡಿಕೆ ಇದೆ. ಮುಂದೆ ಅವಕಾಶ ಒದಗಿಸುತ್ತೇನೆ. ನಾನು ಸಾಮಾಜಿಕ ನ್ಯಾಯದಿಂದ ವಂಚಿತರಾದ ಎಲ್ಲ ಜಾತಿ ಸಮುದಾಯ ಪರವಾಗಿ ನಾನು ಇರುತ್ತೇನೆ. ಸಾಮಾಜಿಕ ನ್ಯಾಯದ ಹಿತಾಸಕ್ತಿ ಕಾಪಾಡುತ್ತೇನೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಚಿತ್ರದುರ್ಗದ ಶ್ರೀ ಕೃಷ್ಣ ಯಾದವ ಮಹಾಸಂಸ್ಥಾನ ಮಠದ ಯಾದವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕನ್ನಡ & ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಇತರರಿದ್ದರು.












Click it and Unblock the Notifications