ಮಂಗಳವಾರದ ಸಚಿವ ಸಂಪುಟ ಸಭೆ ನಿರ್ಣಯಗಳು
ಬೆಂಗಳೂರು, ಜ.29 : ಸರ್ಕಾರ ಕೊನೆಗೂ ಕೆಪಿಎಸ್‌ಸಿ ಹಗರಣದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಸಿಐಡಿ ವರದಿ ಆಧರಿಸಿ ಮಾನವೀಯತೆ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಸದನದಲ್ಲಿಯೂ ಸಿಎಂ ಮಾಹಿತಿ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಕಲಾಪ ಆರಂಭವಾಗುವುದಕ್ಕೂ ಮುನ್ನ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಕೆಪಿಎಸ್‌ಸಿಯ 360 ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಹಗರಣ ಕುರಿತು ಸಿಐಡಿ ತನಿಖಾ ವರದಿ ಪೂರ್ಣ ಪ್ರಮಾಣದಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ, ಹಗರಣದಲ್ಲಿ ಭಾಗಿಯಾದವರ ವಿರುದ್ಧ ಮಾನವೀಯತೆ ಆಧಾರದ ಮೇಲೆ ಕ್ರಮ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು.

ಸದ್ಯ ಆಗಿರುವ ನೇಮಕಾತಿ ರದ್ದುಗೊಳಿಸಿದರೆ, ಸರ್ಕಾರ ಆಡಳಿತಾತ್ಮಕವಾಗಿ ತೊಂದರೆಗೆ ಸಿಲುಕಬಹುದು. ಅಭ್ಯರ್ಥಿಗಳ ಕಾನೂನು ಹೋರಾಟ ನಡೆಸಿದರೆ, ಪ್ರಕರಣ ಇತ್ಯರ್ಥಕ್ಕೆ ಸಮಯಾವಕಾಶ ಬೇಕಾಗುತ್ತದೆ. ಆದ್ದರಿಂದ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವುದರ ಜತೆಗೆ ಅವ್ಯವಹಾರಗಳಿಗೆ ಅವಕಾಶ ಇಲ್ಲದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸಂಪುಟ ಸಭೆಯ ಇತರ ನಿರ್ಧಾರಗಳು
* ಲೋಕಾಯುಕ್ತ ದಾಳಿಗೆ ಒಳಗಾಗಿರುವ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ವಿಷಯದಲ್ಲಿ ಇಲಾಖಾವಾರು ಬಾಕಿ ಇರುವ ಪ್ರಕರಣಗಳಿಗೆ ಶೀಘ್ರ ಅನುಮತಿ ನೀಡುವ ವಿಷಯದ ಬಗ್ಗೆ ಚರ್ಚೆ ನಡೆಯಿತು. ಈ ಕಡತಗಳನ್ನು ಮುಂದಿನ ಸಂಪುಟ ಸಭೆಗೆ ತರಲು ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಲಾಯಿತು.
* ಕೃಷಿ ಬೆಲೆ ಆಯೋಗ ರಚನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರೆಯುವಂತಾಗಲು ಪ್ರಾಯೋಗಿಕವಾಗಿ ಎಪಿಎಂಸಿಗಳಲ್ಲಿ ಉತ್ಪನ್ನಗಳ ಅಡಮಾನ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಅದರಂತೆ ಬೆಲೆ ಕುಸಿತದ ಸಂದರ್ಭದಲ್ಲಿ ರೈತರ ಉತ್ಪನ್ನಗಳನ್ನು ಎಪಿಎಂಸಿಗಳಲ್ಲಿ ಸರ್ಕಾರವೇ ಅಡಮಾನ ಇಟ್ಟುಕೊಂಡು ಶೇ. 50ರಷ್ಟು ಮುಂಗಡ ಹಣವನ್ನು ರೈತರಿಗೆ ಪಾವತಿಸಲಿದೆ.
* ಬಜೆಟ್ ನಲ್ಲಿ ಘೋಷಿಸಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣಕ್ಕಾಗಿ 66ಕೋಟಿ ಮೊತ್ತದ ಟೆಂಡರ್ ಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.












Click it and Unblock the Notifications