Karnataka Budget 2023: ಸಿದ್ದರಾಮಯ್ಯ ಸರ್ಕಾರದ ಹೊಸ ತೆರಿಗೆಗಳ ಬಗ್ಗೆ ತಿಳಿಯಿರಿ
ಬೆಂಗಳೂರು: ದೇಶದಲ್ಲಿ ಅತಿಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯಗಳಲ್ಲಿ ಕರ್ನಾಟಕವೂ ಮುಂಚೂಣಿ ರಾಜ್ಯ. ಈಗ ರಾಜ್ಯ ಸರ್ಕಾರ ಕೂಡ ತನ್ನ ತೆರಿಗೆ ಸಂಗ್ರಹ ಹೆಚ್ಚಿಸಿಕೊಳ್ಳಲು ಹೊಸ ಪ್ರಸ್ತಾವನೆ ಮುಂದಿಟ್ಟಿದೆ. 2023ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ, ಹೊಸ ತೆರಿಗೆಗಳ ಪ್ರಸ್ತಾವನೆ ಮಾಡಿದ್ದಾರೆ. ಅದರ ಇಂಚಿಂಚು ಮಾಹಿತಿ ಇಲ್ಲಿ ತಿಳಿಯಿರಿ.
ಕಾಂಗ್ರೆಸ್ ಸರ್ಕಾರ ಸಾಕಷ್ಟು ಆಶ್ವಾಸನೆ ನೀಡಿ ರಾಜ್ಯದಲ್ಲಿ ಅಧಿಕಾರ ಪಡೆದುಕೊಂಡಿದ್ದು, ಅದರಲ್ಲಿ 5 ಗ್ಯಾರಂಟಿಗಳ ಪಾಲು ಬಹುದೊಡ್ಡದು. ಹೀಗಾಗಿ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಮಹತ್ವದ ಜವಾಬ್ದಾರಿ ಈಗ ಸರ್ಕಾರದ ಮೇಲೆ ಇದೆ. ಈ ಕಾರಣಕ್ಕೆ ರಾಜ್ಯ ಸರ್ಕಾರ ಹಲವು ಕ್ಷೇತ್ರಗಳಲ್ಲಿ ಹೊಸ ತೆರಿಗೆಗಳನ್ನ ಜಾರಿಗೆ ತರಲು ಮುಂದಾಗಿದೆ. ಹಾಗಾದ್ರೆ ಯಾವ ಯಾವ ಕ್ಷೇತ್ರದಲ್ಲಿ ತೆರಿಗೆ ಹೆಚ್ಚಳವಾಗುತ್ತಿದೆ? ಹಾಗೂ ಯಾವ ಇಲಾಖೆಗೆ ಹೆಚ್ಚಿನ ತೆರಿಗೆ ಸಂಗ್ರಹದ ಟಾರ್ಗೆಟ್ ನೀಡಲಾಗಿದೆ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಸಿದ್ದರಾಮಯ್ಯ ಸರ್ಕಾರದ ತೆರಿಗೆ ಪ್ರಸ್ತಾವನೆ
1) ದೊಡ್ಡ ರಾಜ್ಯಗಳ ಪೈಕಿ ಒಂದಾದ ಕರ್ನಾಟಕ ಜಿಎಸ್‌ಟಿ ತೆರಿಗೆ ಸಂಗ್ರಹಣೆ ವಿಚಾರದಲ್ಲಿ, ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.21 ರಷ್ಟು ಬೆಳವಣಿಗೆ ಸಾಧಿಸಿದೆ. ಈ ಮೂಲಕ ಪ್ರಸ್ತುತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕೆಜಿಎಸ್‌ಟಿ ರಾಜಸ್ವ ಸಂಗ್ರಹ 18,962 ಕೋಟಿಗೆ ಏರಿಕೆ ಕಂಡಿದೆ.
2) ಪರಿಣಾಮಕಾರಿ ತೆರಿಗೆ ಆಡಳಿತಕ್ಕಾಗಿ ಹಾಗೂ ವಾಣಿಜ್ಯೋದ್ಯಮಕ್ಕೆ ಉತ್ತಮ ಸಂಪರ್ಕವನ್ನು ನೀಡಲು, ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ 4 ಹೊಸ ವಿಭಾಗಗಳನ್ನ ಶೀಘ್ರದಲ್ಲೇ ಕಾರ್ಯಗತಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಆಶ್ವಾಸನೆ ನೀಡಿದೆ.
3) ವಿಶೇಷವಾಗಿ ಇದೇ ಮೊದಲ ಬಾರಿಗೆ ಅತ್ಯಧಿಕ ತೆರಿಗೆ ಪಾವತಿದಾರರಿಗಾಗಿ ಒಂದು ಪ್ರತ್ಯೇಕ ವಿಭಾಗವನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.

4) ದತ್ತಾಂಶ ವಿಶ್ಲೇಷಣೆಗಾಗಿ & ರಾಜಸ್ವ ಸಂಗ್ರಹಣೆಯನ್ನು ವೃದ್ಧಿಗೊಳಿಸಲು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಲಾಗಿದೆ.
5) 2023-24ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆಯ ಗುರಿ 1,01,000 ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿದೆ. ಇದಿಷ್ಟೂ ವಾಣಿಜ್ಯ ತೆರಿಗೆಯ ಗುರಿಯಾಗಿದ್ದರೆ, ಅಬಕಾರಿ ತೆರಿಗೆಯ ಮಾಹಿತಿಗಾಗಿ ಮುಂದೆ ಇದೆ.
ಬಿಯರ್, ಎಣ್ಣೆ ಮತ್ತಷ್ಟು ದುಬಾರಿ!
1) ಹೌದು, ಈಗ ಮತ್ತೊಮ್ಮೆ ಅಬಕಾರಿ ತೆರಿಗೆಯನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ. ಪ್ರತಿ ಸರ್ಕಾರಗಳು ಬಜೆಟ್ ಮಂಡಿಸಿದಾಗ ಅಬಕಾರಿ ಸುಂಕವನ್ನು ಅಥವಾ ತೆರಿಗೆ ಏರಿಕೆ ಮಾಡುವುದು ಮಾಮೂಲಾಗಿದೆ ಎಂದು ಮದ್ಯ ಪ್ರಿಯರು ಗೊಣಗುತ್ತಿದ್ದಾರೆ.
2) ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರ ಅನುಬಂಧ (ಅ) ರಲ್ಲಿರುವಂತೆ ಹಾಲಿ ಇರುವ ದರಗಳ ಮೇಲೆ ಶೇ. 20ರಷ್ಟು ಹೆಚ್ಚಿಸಲು ಈಗ ರಾಜ್ಯ ಸರ್ಕಾರ ಪ್ರಸ್ತಾಪ ಮಾಡಿದೆ.
3) ಇನ್ನುಮುಂದೆ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 175ರಿಂದ ಶೇಕಡಾ 185ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಅಬಕಾರಿ ಸುಂಕ ದರ ಹೆಚ್ಚಳದ ನಂತರವೂ ನಮ್ಮ ರಾಜ್ಯದಲ್ಲಿ ಮದ್ಯದ ದರವು ನೆರೆ ರಾಜ್ಯಗಳಿಗಿಂತ ಕಡಿಮೆ ಇರುತ್ತದೆ ಎಂಬುದನ್ನ ರಾಜ್ಯ ಸರ್ಕಾರ ಹೇಳಿಕೊಂಡಿದೆ.
4) ಹೆಚ್ಚು ಪರಿಣಾಮಕಾರಿಯಾದ ಜಾರಿ ಮತ್ತು ನಿಯಂತ್ರಣಾ ಕ್ರಮಗಳ ಮೂಲಕ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ ಒಟ್ಟು 36,000 ಕೋಟಿ ರೂಪಾಯಿಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.
5) ಹೀಗೆ ರಾಜ್ಯ ಸರ್ಕಾರ ಅಬಕಾರಿ ಸುಂಕ ಏರಿಕೆ ಮಾಡಿದ ಹಿನ್ನೆಲೆ, ಮೊತ್ತೊಮ್ಮೆ ಎಣ್ಣೆ ಅಂದರೆ ಮದ್ಯದ ಬೆಲೆಯಲ್ಲಿ ಏರಿಕೆಯಾಗುವಂತೆ ಮಾಡಿದೆ. ಇದರ ಜೊತೆಗೆ ನೋಂದಣಿ ಮತ್ತು ಮುದ್ರಾಂಕದಲ್ಲೂ ಬೆಲೆ ಏರಿಕೆ ಗ್ಯಾರಂಟಿ.
ನೋಂದಣಿ ಮತ್ತು ಮುದ್ರಾಂಕದಲ್ಲೂ ಹೆಚ್ಚಳ
1) 2018-19ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸ್ಥಿರಾಸ್ತಿ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ, ದಿನಾಂಕ 01.01.2019ರಿಂದ ಜಾರಿಗೆ ತರಲಾಗಿತ್ತು. ನಂತರ ಕೋವಿಡ್-19 ಕಾರಣದಿಂದ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿರುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
2) ಪ್ರಸ್ತುತ ಸ್ವತ್ತುಗಳು ಭೌತಿಕ ಬದಲಾವಣೆಗೊಂಡು ಮಾರುಕಟ್ಟೆ ದರದಲ್ಲಿ ಹಲವು ವ್ಯತ್ಯಾಸ ಆಗಿರುವ ಕಾರಣ, ಇದನ್ನು ಸರಿಪಡಿಸಲು ಸರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವುದು ಅವಶ್ಯಕ ಎಂದು ಸಿದ್ದರಾಮಯ್ಯ ಸರ್ಕಾರ ಹೇಳಿದೆ.
3) ಈ ಕಾರಣಕ್ಕೆ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಿಸಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಹಿತಿ ನೀಡಿದೆ.
4) 2023-24ನೇ ಸಾಲಿಗೆ ನೋಂದಣಿ & ಮುದ್ರಾಂಕ ಇಲಾಖೆಗೆ 25,000 ಕೋಟಿ ರೂಪಾಯಿಯ ತೆರಿಗೆ ಸಂಗ್ರಹಣೆ ಗುರಿ ನಿಗದಿಪಡಿಸಿದೆ ರಾಜ್ಯ ಸರ್ಕಾರ. ಇದರ ಜೊತೆಗೆ ಸಾರಿಗೆ ಇಲಾಖೆಗೂ ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ.
ಸಾರಿಗೆ ಇಲಾಖೆಗೆ ತೆರಿಗೆ ಟಾರ್ಗೆಟ್ ಎಷ್ಟು?
1) ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಸರಳ ಮಾಡಲು ಉದ್ದೇಶಿಸಲಾಗಿದೆ.
2) ಹೀಗಾಗಿ ಮೋಟಾರು ವಾಹನ ತೆರಿಗೆ ವ್ಯವಹಾರಗಳ ನಿಖರ ಪರಿಶೀಲನೆಗೆ ಸರಳ ತಂತ್ರಾಂಶ ತರಲಾಗುವುದು. ಪ್ರಸ್ತುತ ಆಯ್ದ ವಾಹನ ವರ್ಗಗಳಿಗೆ ವಿಧಿಸುವ ತೆರಿಗೆ ಪರಿಷ್ಕರಿಸಲಾಗುವುದು ಎಂದು ಸಿದ್ದರಾಮಯ್ಯ ಸರ್ಕಾರ ಹೇಳಿದೆ.
3) 2023-24ನೇ ಆರ್ಥಿಕ ವರ್ಷಕ್ಕೆ ಸಾರಿಗೆ ಇಲಾಖೆಗೆ ಒಟ್ಟು 11,500 ಕೋಟಿ ರೂಪಾಯಿಯ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ
1) ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಖನಿಜ ಮತ್ತು ಉಪಖನಿಜಗಳ ಮೇಲಿನ ಮೇಲ್ವಿಚಾರಣೆ ನಡೆಸಿ ಸುಸ್ಥಿರ, ಸುರಕ್ಷಿತ ಮತ್ತು ವೈಜ್ಞಾನಿಕ ಗಣಿಗಾರಿಕೆ ಉತ್ತೇಜಿಸಿ, ರಾಜಸ್ವ ಸಂಗ್ರಹಣೆ ಹೆಚ್ಚಿಸಲು ಅವಶ್ಯಕ ಸುಧಾರಣೆ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
2) 2023-24ನೇ ಸಾಲಿಗೆ ಗಣಿ & ಭೂವಿಜ್ಞಾನ ಇಲಾಖೆಗೆ 9,000 ಕೋಟಿ ರೂಪಾಯಿ ರಾಜಸ್ವದ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ರಾಜ್ಯದ ಆಯವ್ಯಯ ಅಂದಾಜು 2023-24
1) ರಾಜ್ಯದಲ್ಲಿ 2023-24ನೇ ಸಾಲಿಗೆ ರಾಜಸ್ವ ಜಮೆ 2,38,410 ಕೋಟಿ ರೂಪಾಯಿ ಎಂದು ಅಂದಾಜು ಮಾಡಿದೆ. ಇದರಲ್ಲಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವ ಜಿಎಸ್‌ಟಿ ಪರಿಹಾರವೂ ಒಳಗೊಂಡಂತೆ 1,75,653 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
2) ತೆರಿಗೆಯೇತರ ರಾಜಸ್ವದಿಂದ 12,500 ಕೋಟಿ ರೂಪಾಯಿ ಸಂಗ್ರಹಿಸಲು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆ ಪಾಲಿನ ರೂಪದಲ್ಲಿ 37,252 ಕೋಟಿ ರೂಪಾಯಿ ಸೇರಿದಂತೆ 13,005 ಕೋಟಿ ರೂಪಾಯಿಯನ್ನ ಕೇಂದ್ರ ಸರ್ಕಾರದಿಂದ ಸಹಾಯ ಅನುದಾನ ರೂಪದಲ್ಲಿ ರಾಜ್ಯ ಸರ್ಕಾರವು ನಿರೀಕ್ಷಿಸಿದೆ.
3) ರಾಜಸ್ವ ಜಮೆಗೆ ಪೂರಕವಾಗಿ 85,818 ಕೋಟಿ ರೂಪಾಯಿಯ ಒಟ್ಟು ಸಾಲ, 23 ಕೋಟಿ ರೂಪಾಯಿ ಋಣೇತರ ಸ್ವೀಕೃತಿಗಳು & 228 ಕೋಟಿ ರೂಪಾಯಿ ಸಾಲ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ.
4) ಕರ್ನಾಟಕದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು ಜಮೆ 3,24,478 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
5) 2023-24ನೇ ಸಾಲಿನಲ್ಲಿ ಒಟ್ಟು 2,50,933 ಕೋಟಿ ರೂಪಾಯಿ ರಾಜಸ್ವ ವೆಚ್ಚ, 54,374 ಕೋಟಿ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 22,441 ಕೋಟಿ ರೂಪಾಯಿ ವೆಚ್ಚ ಒಳಗೊಂಡು, ಒಟ್ಟು ವೆಚ್ಚ 3,27,747 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.












Click it and Unblock the Notifications