Karnataka Budget 2023: ಮದ್ಯದ ಮೇಲಿನ ಸುಂಕದಲ್ಲಿ ಭಾರೀ ಹೆಚ್ಚಳ: ಮದ್ಯಪ್ರಿಯರಿಗೆ ಸಿದ್ದು ಶಾಕ್- ಯಾವುದಕ್ಕೆ ಎಷ್ಟು? ಅಂಕಿಅಂಶ
ಬೆಂಗಳೂರು, ಜುಲೈ 07: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 14 ನೇ ಬಜೆಟ್ ಮಂಡಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಮದ್ಯಪ್ರಿಯರ ಮೇಲೆ ಬರೆ ಎಳೆದಿದ್ದಾರೆ. ಮದ್ಯದ ಮೇಲಿನ ಅಬಕಾರಿ ಸುಂಕದಲ್ಲಿ ಭಾರೀ ಹೆಚ್ಚಳವನ್ನು ಘೋಷಿಸಿದ್ದಾರೆ. ಈ ಮೂಲಕ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದ್ದು, ಹಾಲಿ ದರದ ಮೇಲೆ ಶೇ 20ರಷ್ಟು ಸುಂಕವನ್ನು ಹೆಚ್ಚಿಸಲಾಗಿದೆ. ಪ್ರಮುಖವಾಗಿ, ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದ್ದು, ಶೇ. 175 ರಿಂದ 185ರಷ್ಟು ಏರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯ ಸರ್ಕಾರ ಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕಿಂಗ್ ಫಿಶರ್ ಬಿಯರ್ ದರ 160 ರೂಪಾಯಿಗಳಿಂದ 170 ರೂಪಾಯಿಗಳಿಗೆ ಏರಿಕೆಯಾಗಲಿದೆ. ಬಡ್ ವೈಸರ್ ಬಿಯರ್ ದರವು 198 ರೂಪಾಯಿಗಳಿಂದ 220 ರೂಪಾಯಿಗಳಿಗೆ ಏರಿಕೆಯಾಗಿದೆ. ಯುಬಿ ಬಿಯರ್ ದರ 130 ರೂಪಾಯಿಗಳಿಂದ 135 ರೂಪಾಯಿಗಳಿಗೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.
ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕರ್ನಾಟಕದ ಮದ್ಯ ಮಾರಾಟಗಾರರಿಂದ 35 ಸಾವಿರ ಕೋಟಿ ರೂಪಾಯಿ ಸಂಗ್ರಹ ಮಾಡುವ ಗುರಿಯನ್ನು ಹೊಂದಿತ್ತು. ಆದರೆ, ಕಳೆದ ಸರ್ಕಾರದ ಅವಧಿಯಲ್ಲಿ ಸಂಗ್ರಹವಾಗಿದ್ದು 29 ಸಾವಿರ ಕೋಟಿ ರೂಪಾಯಿ ಮಾತ್ರ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಐದು ಪ್ರಮುಖ ಗ್ಯಾರಂಟಿಗಳನ್ನು ಘೋಷಿಸಿದೆ. ಅದಕ್ಕೆ 52000 ಕೋಟಿಯಷ್ಟು ಹಣವನ್ನು ಹೊಂದಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಆದಾಯವನ್ನು ಹೆಚ್ಚಿಸುವ ಅನಿವಾರ್ಯತೆ ಬಂದೊದಗಿದೆ.
ಈ ಹಿನ್ನೆಲೆಯಲ್ಲಿ ಸಿದ್ದು ಸರ್ಕಾರವು 2023-24 ರ ಅವಧಿಯಲ್ಲಿ ಸುಮಾರು 35000 ಕೋಟಿ ರೂಪಾಯಿಗಳ ಸಂಗ್ರಹಿಸಲು ಮುಂದಾಗಿದೆ.
ಭಾರತದಲ್ಲಿ ತಯಾರಾಗುವ ವಿದೇಶಿ ಮದ್ಯದ (ಐಎಂಎಫ್‌ಎಲ್) ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 20ರಷ್ಟು ಹೆಚ್ಚಿಸಲಾಗಿದೆ.
ಕರ್ನಾಟಕ ಸಿಎಂ ಸಿದ್ದರಾಮಯ್ಯ ಶುಕ್ರವಾರ 3.27 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅನ್ನು ಮಂಡಿಸಿದ್ದಾರೆ. ಶಿಕ್ಷಣಕ್ಕೆ 37,587 ಕೋಟಿ ರೂ. ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ರೂ. 24,166 ಕೋಟಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮೀಸಲಿಡುವುದಾಗಿ ಅವರು ಘೋಷಿಸಿದ್ದಾರೆ. ಇದು ಒಟ್ಟು ಬಜೆಟ್ ಹಂಚಿಕೆಯಲ್ಲಿ ಕ್ರಮವಾಗಿ ಶೇಕಡಾ 11 ಮತ್ತು ಶೇಕಡಾ 7 ರಷ್ಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕಾಗಿ 14,950 ಕೋಟಿ ರೂ.ಗಳನ್ನು ಮೀಸಲಿಡಲು ಸರ್ಕಾರ ಪ್ರಸ್ತಾಪಿಸಿದೆ.
ಕಾಂಗ್ರೆಸ್ ಪಕ್ಷದ ಐದು ಚುನಾವಣಾ ಭರವಸೆಗಳಿಗೆ ನಿಧಿ ಹಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ವಾರ್ಷಿಕವಾಗಿ ಸುಮಾರು 52,000 ಕೋಟಿ ರೂ ಬೇಕಿದೆ ಎಂದಿದ್ದಾರೆ. ಈ ಖಾತರಿಗಳು 1.3 ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications