ಮಂಗಳವಾರದ ವಿಧಾನಸಭೆ ಕಲಾಪದ ಹೈಲೈಟ್ಸ್
ಬೆಂಗಳೂರು, ಜ.28 : ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ರೈತರ ಬಂಧನ, ಸದನದಲ್ಲಿ ಮಂಗಳವಾರ ಕಾಣಿಸಿಕೊಂಡ ಬಿ.ಎಸ್.ಯಡಿಯೂರಪ್ಪ, ಮರಳು ನೀತಿ ಬಗ್ಗೆ ಸಿಎಂ ಉತ್ತರ, ಕೆಪಿಎಸ್ಸಿ ಹಗರಣದಲ್ಲಿ ಭಾಗಿಯಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವೆ ಸಿಎಂ ಭರವಸೆ, ಐಟಿಐ ಕಾಲೇಜುಗಳಲ್ಲಿ ಒಂದು ವರ್ಷದ ಕೃಷಿ ಕೋರ್ಸ್ ಆರಂಭ ಮುಂತಾದವುಗಳು ಮಂಗಳವಾರದ ವಿಧಾನಸಭೆ ಕಲಾಪದ ಹೈಲೈಟ್ಸ್.
ಮರಳಿನ ಸಮಸ್ಯೆ ಬಗೆಹರಿಯಲಿದೆ : ಇನ್ನೊಂದು ವಾರದಲ್ಲಿ ಮರಳಿನ ಸಮಸ್ಯೆ ಬಗೆಹರಿಯಲಿದೆ ಮತ್ತು ದರವೂ ಕಡಿಮೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾದ್ಯಂತ 1,864 ಮರಳು ನಿಕ್ಷೇಪಗಳನ್ನು ಗುರುತಿಸಲಾಗಿದೆ. ಚದರ ಅಡಿಗೆ 270 ರೂ.ನಿಂದ 930 ರೂ.ಗಳವರೆಗೆ ದರವನ್ನು ನಿಗದಿ ಮಾಡಲಾಗಿದೆ. ಎಲ್ಲಿ, ಯಾವ ರೀತಿ ದರ ವಸೂಲಿ ಮಾಡಬೇಕು, ಯಾವ ರೀತಿ ಸಾಗಾಣಿಕೆ ಮಾಡಬೇಕು ಎಂಬುದನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದರು.

ಕೆಪಿಎಸ್‌ಸಿ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ : ಕೆಪಿಎಸ್‌ಸಿ ನೇಮಕಾತಿ ಹಗರಣದ ವಿರುದ್ಧ ನಡೆಯುತ್ತಿರುವ ಸಿಐಡಿ ತನಿಖೆ 15 ದಿನಗಲ್ಲಿ ಪೂರ್ಣಗೊಳ್ಳಲಿದೆ. ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವಿಧಾಸಭೆಗೆ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ತನ್ವೀರ್ ಸೇಠ್ ಪ್ರಶ್ನೆಗೆ ಉತ್ತರಿಸಿದ ಅವರು, ನೇಮಕಾತಿ ವೇಳೆ ನಕಲಿ ಅನುಭವ ಪತ್ರ ಸಲ್ಲಿಸಿ ಕೆಲಸಕ್ಕೆ ಸೇರಿದ್ದಾರೆ ಎಂಬ ಆರೋಪಗಳಿವೆ. ಸಿಐಡಿ ಈ ಕುರಿತು ತನಿಖೆ ನಡೆಸುತ್ತಿದ್ದು, 15ದಿನಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು. ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು. [ಕೆಪಿಎಸ್ ಸಿ ಹಗರಣದ ವಿರುದ್ಧ ಹೋರಾಟ]
ರಾಷ್ಟ್ರೀಯ ಹೂಡಿಕಾ ವಲಯ ಸ್ಥಾಪನೆಗೆ ಅನುಮತಿ : ಬೀದರ್, ಕೋಲಾರ, ಗುಲ್ಬರ್ಗ ಜಿಲ್ಲೆಗಳಲ್ಲಿ ರಾಷ್ಟ್ರೀಯ ಉತ್ಪಾದನಾ ವಲಯ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಕೇಂದ್ರ ಅನುಮತಿ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಗೆ ತಿಳಿಸಿದ್ದಾರೆ. ಶಾಸಕ ಈಶ್ವರ ಭೀಮಣ್ಣ ಖಂಡ್ರೆ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಪ್ರತಿಯೊಂದು ರಾಷ್ಟ್ರೀಯ ಹೂಡಿಕಾ ವಲಯ ಸ್ಥಾಪನೆಗೆ 12 ಸಾವಿರ ಎಕರೆ ಪ್ರದೇಶ ಅಗತ್ಯವಿದ್ದು, ಇದರಿಂದ ಒಂದು ಲಕ್ಷ ನೇರ ಉದ್ಯೋಗಾವಕಾಶ ಹಾಗೂ ಒಂದೂವರೆ ಲಕ್ಷ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.
ಒಂದು ವರ್ಷದ ಕೃಷಿ ಕೋರ್ಸ್ : ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಐಟಿಐ ಕಾಲೇಜುಗಳಲ್ಲಿ ಒಂದು ವರ್ಷದ ಕೃಷಿ ಕೋರ್ಸ್ ಪ್ರಾರಂಭಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ. ಇಂದಿನ ಯುವಕರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಆದ್ದರಿಂದ ಅವರನ್ನು ಕೃಷಿಯತ್ತ ಆಕರ್ಷಿಸಲು ವಿವಿಗಳಲ್ಲಿ ಡಿಪ್ಲೊಮಾ ಶಿಕ್ಷಣ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ವರ್ಷದಿಂದ ಐಟಿಐ ಕಾಲೇಜುಗಳಲ್ಲೂ ಒಂದು ವರ್ಷದ ಕೃಷಿ ಕೋರ್ಸ್ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.
ಜೋಳ ಖರೀದಿಗೆ ಮಿತಿ ಇಲ್ಲ : ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ಯಾವುದೇ ನಿರ್ಬಂಧ ಇಲ್ಲ, ರೈತರು ಎಷ್ಟೇ ಪ್ರಮಾಣದಲ್ಲಿ ತಂದರೂ ಅದನ್ನು ಸರ್ಕಾರ ಖರೀದಿ ಮಾಡುತ್ತೇದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ 75 ಕ್ವಿಂಟಾಲ್ ಮಿತಿ ನಿಗದಿ ಮಾಡಲಾಗಿತ್ತು. ಸದ್ಯ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ರೈತರಿಂದ ನೇರವಾಗಿ ಖರೀದಿ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ತಾಜ್ಯವನ್ನು ಗೊಬ್ಬರವಾಗಿ ಪರಿವರ್ತನೆ : ನಗರ ಪ್ರದೇಶದ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಿ ರೈತರಿಗೆ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಮಂಗಳವಾರ ವಿಧಾನಪರಿಷತ್ತಿನಲ್ಲಿ ಬಿಜೆಪಿಯ ರಾಮಚಂದ್ರೇ ಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ನಗರ ಪ್ರದೇಶದಲ್ಲಿ ಸಂಗ್ರಹವಾಗುವ 300 ಟನ್ ತ್ಯಾಜ್ಯವನ್ನು ಖರೀದಿ ಮಾಡಿ, ಸಾವಯವ ಗೊಬ್ಬರವಾಗಿ ಪರಿವರ್ತಿಸಿ ರೈತರಿಗೆ ನೀಡಲಾಗುತ್ತಿದೆ ಎಂದರು. ಹೆಚ್ಚು ತ್ಯಾಜ್ಯವನ್ನು ಖರೀದಿಸಿ ಗೊಬ್ಬರ ಉತ್ಪಾದನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯ ಬೆಂಗಳೂರಿನ ರೇಸ್‌ಕೋರ್ಸ್‌ನಲ್ಲಿ 300 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದನ್ನು ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಮೆಟ್ರೋ ಮೊದಲ ಹಂತದ ಕಾಮಗಾರಿ ಪೂರ್ಣ : 2015ರ ಮಾರ್ಚ್ 15ರೊಳಗೆ ನಮ್ಮ ಮೆಟ್ರೋ ಕಾಮಗಾರಿಯ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದ್ದಾರೆ. ಜೆಡಿಎಸ್‌ನ ಚಲುವರಾಯಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಿಎಂ, 48 ಕಿ.ಮೀ.ಉದ್ದದ ಮೊದಲ ಹಂತದ ಮೆಟ್ರೋ ಕಾಮಗಾರಿ 2015 ಮಾರ್ಚ್ 15ರೊಳಗೆ ಪೂರ್ಣಗೊಳ್ಳಲಿದ್ದು, 72 ಕಿ.ಮೀ.ಉದ್ದದ ಎರಡನೆ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಸೂಚನೆ ನೀಡಲಾಗುವುದು ಎಂದರು. ಭೂ ಸ್ವಾಧೀನ, ನೀಲ ನಕ್ಷೆ, ರೈಲ್ವೆ ಇಲಾಖೆಯಿಂದ ಭೂ ವರ್ಗಾವಣೆ, ಮರು ಟೆಂಡರ್ ಸೇರಿದಂತೆ ಮತ್ತಿತರ ಕಾರಣಗಳಿಂದ ನಮ್ಮ ಮೆಟ್ರೋ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸಿಎಂ ಹೇಳಿದರು.
ಪೊಲೀಸರಿಗಾಗಿ 11,500ಮನೆ ನಿರ್ಮಾಣ : ಕರ್ನಾಟಕದಲ್ಲಿ ವಿವಿಧ ಹಂತದ ಅಧಿಕಾರಿಗಳಿಗೆ ವಸತಿ ಸೌಲಭ್ಯ ಒದಗಿಸಲು 11,500 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಶಾಸಕ ಎಚ್.ಎಸ್.ಶಿವಶಂಕರ್ ಪ್ರಶ್ನೆಗೆ ಧ್ವನಿಗೂಡಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸರ್ಕಾರ ಪೊಲೀಸ್ ವಸತಿ ಗೃಹಗಳ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಕೆ.ಜೆ.ಜಾರ್ಜ್, 11,500 ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.












Click it and Unblock the Notifications