Arvind Kejriwal Karnataka Visit : ಮಾರ್ಚ್ 4ಕ್ಕೆ ದಾವಣಗೆರೆಗೆ ಅರವಿಂದ್ ಕೇಜ್ರಿವಾಲ್ ಭೇಟಿ
ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಮ್ ಆದ್ಮಿ ಪಕ್ಷ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದು, ಅರವಿಂದ್ ಕೇಜ್ರಿವಾಲ್ ಮಾರ್ಚ್ 4 ರಂದು ರಾಜ್ಯಕ್ಕೆ ಬರಲಿದ್ದಾರೆ.
ಹುಬ್ಬಳ್ಳಿ, ಫೆಬ್ರವರಿ. 08: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಆರಂಭವಾಗಿದೆ. ಈ ಬೆನ್ನಲ್ಲೆ ಈ ಬಾರಿ ಆಮ್ ಆದ್ಮಿ ಪಕ್ಷ ಕೂಡ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಮ್ ಆದ್ಮಿ ಪಕ್ಷ, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಈ ಬಾರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ರಾಜ್ಯ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷದ (ಎಎಪಿ) ವರಿಷ್ಠ ಅರವಿಂದ್ ಕೇಜ್ರಿವಾಲ್ ಮಾರ್ಚ್ 4 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.
ಮಾರ್ಚ್ 4 ರಂದು ದಾವಣಗೆರೆಯಲ್ಲಿ ಆಪ್ ಪಕ್ಷಕ್ಕೆ ನೂತನವಾಗಿ ಆಯ್ಕೆಯಾದ ವಲಯ ಮತ್ತು ಬ್ಲಾಕ್ ಮಟ್ಟದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಈ ಬಗ್ಗೆ ಎಎಪಿಯ ಕಾರ್ಯಾಧ್ಯಕ್ಷ ರವಿಚಂದ್ರ ನೆರಬೆಂಚಿ ಮಾಹಿತಿ ನೀಡಿದ್ದು, "ಆಯೋಜಿಸಿರುವ ಪಕ್ಷದ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಕೇಜ್ರಿವಾಲ್ ಅವರು, ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ" ಎಂದಿದ್ದಾರೆ.
"ಪಕ್ಷಕ್ಕೆ ನೂತನವಾಗಿ ಆಯ್ಕೆಯಾಗಿರುವ ಬ್ಲಾಕ್ ಮತ್ತು ಬೂತ್ ಮಟ್ಟದ 25 ಸಾವಿರ ಪದಾಧಿಕಾರಿಗಳು ಸಮಾವೇಶದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಕ್ಷವು 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ರಾಜ್ಯದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಪ್ರಗತಿಗೆ ಸಂಬಂಧಿಸಿದಂತೆ ಈಗಿರುವ ರಾಜಕೀಯ ಪಕ್ಷಗಳು ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿವೆ" ಎಮದು ಆರೋಪಿಸಿದ್ದಾರೆ.

ದೆಹಲಿಯ ಸಚಿವರು ಹಾಗೂ ಶಾಸಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ದೆಹಲಿಯ ಎಂಟು ಜನರ ತಂಡ ರಾಜ್ಯಕ್ಕೆ ಭೇಟಿ ನೀಡಿ, ಚುನಾವಣಾ ತಯಾರಿ ಬಗ್ಗೆ ಪರಿಶೀಲನೆ ನಡೆಸಿ ಮಾರ್ಗದರ್ಶನ ಮಾಡುತ್ತಿದೆ. ದೆಹಲಿಯ ಆಡಳಿತ ಮಾದರಿಯಲ್ಲಿ ಎಎಪಿ ಪರ್ಯಾಯ ವಿಚಾರಗಳನ್ನು ರೂಪಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಎಎಪಿಯ ಪ್ರಣಾಳಿಕೆಯು ಮಹಿಳೆಯರು, ರೈತರು, ಕಾರ್ಮಿಕರು ಮತ್ತು ಸರ್ಕಾರಿ ನೌಕರರನ್ನು ಕೇಂದ್ರೀಕರಿಸುತ್ತದೆ. ಪ್ರತಿ ಜಿಲ್ಲೆಯ ಆಕಾಂಕ್ಷೆಗಳು ಮತ್ತು ಬೇಡಿಕೆಗಳು ವಿಭಿನ್ನವಾಗಿರುವುದರಿಂದ ಜಿಲ್ಲೆಗಳಿಗೆ ನಿರ್ದಿಷ್ಟ ಪ್ರಣಾಳಿಕೆಗಳನ್ನು ರೂಪಿಸಲು ಸಹ ಪಕ್ಷವು ಪರಿಗಣಿಸುತ್ತಿದೆ. ಪಕ್ಷವು ಅಧಿಕಾರಕ್ಕೆ ಬಂದರೆ ಸರ್ಕಾರಿ ಸಿಬ್ಬಂದಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ತರಲಿದೆ ಎಂದು ರವಿಚಂದ್ರ ನೆರಬೆಂಚಿ ಹೇಳಿದ್ದಾರೆ.












Click it and Unblock the Notifications