ಚುನಾವಣಾ ಹೊತ್ತಲಿ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಬಾಬುರಾವ್ ಚಿಂಚನಸೂರ್: ಬಿಜೆಪಿ ತೊರೆಯಲು ಇಲ್ಲಿದೆ ಕಾರಣ!?
ಮತ್ತೆ ಅಧಿಕಾರಕ್ಕೆ ಬರಲು ಪಣ ತೊಟ್ಟಿದ್ದ ರಾಜ್ಯ ಬಿಜೆಪಿಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಬಿಗ್ ಶಾಕ್ ನೀಡಿದ್ದಾರೆ.
ಯಾದಗಿರಿ, ಮಾರ್ಚ್ 21: 2023 ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದು, ಈ ನಡುವೆ ಮುಂದೆ ಮತ್ತೆ ಅಧಿಕಾರಕ್ಕೆ ಬರಲು ಪಣ ತೊಟ್ಟಿದ್ದ ರಾಜ್ಯ ಬಿಜೆಪಿಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗುಡ್ ಬೈ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಕೋಲಿ ಸಮಾಜದ ಏಕೈಕ ಪ್ರಭಾವಿ ಮುಖಂಡ ದ ಬಾಬುರಾವ್ ಚಿಂಚನಸೂರ್ ಪ್ರಭಾವದಿಂದ ಕಲ್ಯಾಣ ಕರ್ನಾಟಕ ಭಾಗದ ಕೆಲ ಕ್ಷೇತ್ರಗಳಲ್ಲಿ ಕೋಲಿ ಸಮುದಾಯ ಹೆಚ್ಚಾಗಿರುವ ಕಾರಣ ಸುಲಭವಾಗಿ ಗೆಲ್ಲುವ ಕನಸು ಕಂಡಿದ್ದ ಬಿಜೆಪಿ ಪಾಳಯಕ್ಕೆ, ಚಿಂಚನಸೂರ್ ಬಹುದೊಡ್ಡ ಶಾಕ್ ಕೊಟ್ಟಿದ್ದಾರೆ.

ಬಾಬುರಾವ್ ಚಿಂಚನಸೂರ್ ಸೋಮವಾರ ಸಂಜೆ ಏಕಾಏಕಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ರೆಡಿಯಾಗಿದ್ದಾರೆ.
ಬಿಜೆಪಿಗೆ ಬಾಬುರಾವ್ ಚಿಂಚನಸೂರ್ ಗುಡ್ ಬೈ ಹೇಳಿದ್ಯಾಕೆ?
ಇತ್ತಿಚ್ಚಿಗಷ್ಟೇ ಬಿಜೆಪಿ ಬಾಬುರಾವ್ ಚಿಂಚನಸೂರ್ ಅವರನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿತ್ತು. ಆದರೆ ಈ ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ಬಾಬುರಾವ್ ಚಿಂಚನಸೂರ್ ಅವರನ್ನ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಹೇಳಿದೆ ಎಂದು ಹೇಳಲಾಗಿದ್ದು, ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ ಎನ್ನುವ ಅಸಮಾಧಾನವನ್ನ ವ್ಯಕ್ತಪಡಿಸಿದ್ದರು. ಹೀಗಾಗಿ ಪಕ್ಷದಲ್ಲಿ ಗೌರವ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಈ ಹಿಂದೆಯೇ ರಾಜೀನಾಮೆ ನೀಡಲು ಮುಂದಾಗಿದ್ದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ವೈ ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರಿಂದ ಮನವೊಲಿಕೆ ಮಾಡಲಾಗಿತ್ತು. ಇದರಿಂದಾಗಿ ರಾಜೀನಾಮೆಯಿಂದ ಹಿಂದೆ ಸರಿದಿದ್ದ ಬಾಬುರಾವ್ ಚಿಂಚನಸೂರ್ ಸೋಮವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಇನ್ನೂ ಕೆಲ ದಿನಗಳ ಹಿಂದೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ರೋಡ್ ಶೋನಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಂದಲೇ ಚಿಂಚನಸೂರ್ ಗುರುಮಠಕಲ್ ಅಭ್ಯರ್ಥಿ ಎಂದು ಘೋಷಿಸಿದ್ದರು. ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ 12 ದಿನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರೇ ಸೋಲು ಖಚಿತ ಎನ್ನುವುದನ್ನು ಅರಿತ ಚಿಂಚನಸೂರ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಗುರುಮಠಕಲ್‌ನಲ್ಲಿ ಬಾಬುರಾವ್ ಚಿಂಚನಸೂರ್ ಎರಡು ಬಾರೀ ಆಂತರಿಕ ಸಮೀಕ್ಷೆಯನ್ನ ನಡೆಸಿದ್ದು, ಈ ಸರ್ವೆಯಿಂದ 20 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲು ಖಚಿತ ಎಂದು ತಿಳಿದು ಬಂದಿದೆ. ಇನ್ನೂ ಸರ್ವೆ ಆಧಾರಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲು ಬಿಜೆಪಿ ಲೆಕ್ಕಾಚಾರವನ್ನ ಹಾಕಿಕೊಂಡಿದ್ದು, ಈ ಚುನಾವಣಗೆ ಇದೇ ಕಾರಣಕ್ಕೆ ಟಿಕೆಟ್ ಸಿಗುವುದು ಡೌಟ್ ಎನ್ನಲಾಗಿದ್ದು, ಈ ಎಲ್ಲಾ ಬೆಳವಣೆಗೆಗಳಿಗೆ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.
ಇನ್ನೂ ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಕೋಲಿ ಸಮಾಜದ ಮತಗಳೇ ನಿರ್ಣಾಯಕ. ಅದರಲ್ಲೂ ವಿಶೇಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸ್ಪರ್ಧೆ ಮಾಡಲಿರುವ ಚಿತ್ತಾಪುರದಲ್ಲಿ ಕೋಲಿ ಸಮುದಾಯವೇ ನಿರ್ಣಾಯಕವಾಗಿವೆ. ಅತಿ ಹೆಚ್ಚಾಗಿರುವ ಕೋಲಿ ಸಮುದಾಯದ ಮತದಾರರು ಇರುವ ಚಿತ್ತಾಪುರದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದ ಚಿಂಚನಸೂರ ಗ್ರೌಂಡ್ ಲೆವಲ್‌ನಿಂದ ಕೆಲಸ ಮಾಡಿ, ಕಾರ್ಯಕರ್ತರ ಪಡೆ ಕಟ್ಟಿದ್ದಾರೆ.
ಹೀಗಾಗಿ ಪ್ರಿಯಾಂಕ್ ಖರ್ಗೆ ಗೆಲ್ಲಬೇಕಾದ್ರೆ ಚಿಂಚನಸೂರ್ ಕಾಂಗ್ರೆಸ್‌ಗೆ ಅನಿವಾರ್ಯವಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತ ಕಾಂಗ್ರೆಸ್ ಸೇರ್ಪಡೆಗೆ ರೆಡಿಯಾಗಿರುವ ಚಿಂಷನಸೂರು ಕೆಲವು ಕಂಡೀಷನ್‌ಗಳನ್ನ ಹಾಕಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದು, ಇದೇ 25ರಂದು ಮತ್ತೆ ಕೈ ಹಿಡಿಯುತ್ತಾರೆ ಎಂದು ಹೇಳಲಾಗಿದೆ.












Click it and Unblock the Notifications