18 ದಿನಗಳ ಹಿಂದೆ ನಡ್ಡಾಜೀ ಪೋನ್ ಕರೆ ಗಾಬರಿ, ಸಂತೋಷಕ್ಕೆ ಕಾರಣವಾಗಿತ್ತು: ವಿಜಯೇಂದ್ರ ಬಿಚ್ಚಿಟ್ಟ ಸತ್ಯವೇನು?
ಬೆಂಗಳೂರು, ನವೆಂಬರ್ 30: ನಾನು ಕೂಡ ಈ ಹೊಣೆಯನ್ನು ನಿರೀಕ್ಷೆ ಮಾಡಿರಲಿಲ್ಲ. 18 ದಿನಗಳ ಹಿಂದೆ ಈ ಮಹತ್ತರ ಜವಾಬ್ದಾರಿ ಕೊಡುವುದಾಗಿ ನಡ್ಡಾಜೀ ಫೋನ್ ಕರೆಯ ಮೂಲಕ ತಿಳಿಸಿದ್ದರು. ಅದು ಗಾಬರಿ, ಸಂತೋಷ, ಹೆಮ್ಮೆಗೆ ಕಾರಣವಾಯಿತು. ತಕ್ಷಣ ತಂದೆ, ಯಡಿಯೂರಪ್ಪನವರಿಗೆ ಸಿಹಿ ಕೊಟ್ಟುದನ್ನು ನೆನಪಿಸಿಕೊಂಡರು. ತಂದೆಯವರ ಕಣ್ಣಂಚಿನಲ್ಲಿ ಸಂತೃಪ್ತಿಯ ಆನಂದಭಾಷ್ಪ ಎಂದು ವಿಜಯೇಂದ್ರ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಲು ಪ್ರತಿದಿನ ಪ್ರವಾಸ ಮಾಡಲು ತಂದೆ, ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಅಧ್ಯಕ್ಷತೆ ಲಭಿಸಿದ ಮಾರನೇ ದಿನ ಗಾಂಧಿನಗರ ಬೂತ್ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಇದು ಬಿಜೆಪಿಯಲ್ಲಿ ಮಾತ್ರ ನೋಡಲು ಸಾಧ್ಯ ಎಂದು ತಿಳಿಸಿದರು. ರಾಷ್ಟ್ರೀಯ ಅಧ್ಯಕ್ಷರಿಗೆ ಸಮನಾದ ಗೌರವವನ್ನು ಪಕ್ಷದ ಬೂತ್ ಅಧ್ಯಕ್ಷರಿಗೂ ಕೊಡುವ ಪಕ್ಷ ಬಿಜೆಪಿ ಎಂದು ತಿಳಿಸಿದರು.

ಈ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇದು ಶೇ 80 ಕಮಿಷನ್‍ನ ಸರಕಾರ. ಈ ಸರಕಾರಕ್ಕೆ ಪ್ರಜ್ಞಾವಂತ ಮತದಾರರು ಪಾಠ ಕಲಿಸುತ್ತಾರೆ. ಕಾಂಗ್ರೆಸ್ ಸರಕಾರ ಕೇವಲ 6 ತಿಂಗಳಲ್ಲಿ ಜನಪ್ರಿಯತೆ ಕಳಕೊಂಡಿದೆ. ಗುಡುಗು, ಸಿಡಿಲು, ಮಳೆ, ಬಿರುಗಾಳಿ ಏನೇ ಬಂದರೂ ಪಕ್ಷದ ಹಿರಿಯರಾದ ಯಡಿಯೂರಪ್ಪ, ಈಶ್ವರಪ್ಪ ಮತ್ತಿತರ ರಾಜ್ಯದ ಎಲ್ಲ ಹಿರಿಯರ ಆಶೀರ್ವಾದ, ಕಾರ್ಯಕರ್ತರ ನೆರವಿನಿಂದ ಬಿಜೆಪಿ ಎಂಬ ವಿಮಾನವನ್ನು ಸೇಫ್ ಆಗಿ ಲ್ಯಾಂಡ್ ಮಾಡಲಿದ್ದೇನೆ ಎಂದರು.
ನಾನು ನನ್ನ 49 ವರ್ಷಕ್ಕೆ ರಾಜ್ಯಾಧ್ಯಕ್ಷ ಆಗಿದ್ದೇನೆ. ಹಿರಿಯರ ಮಾರ್ಗದರ್ಶನ, ಕಾರ್ಯಕರ್ತರ ಪರಿಶ್ರಮದೊಂದಿಗೆ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿ, ರಾಜ್ಯದ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವ ಮೂಲಕ ಮೋದಿಜೀ ಅವರ ಕೈಗಳನ್ನು ಬಲಪಡಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿವೇಶನದ ವೇಳೆ ಬೆಳಗಾವಿ ಭಾಗದ ಜಿಲ್ಲೆಗಳಿಗೆ ಭೇಟಿ ಕೊಡುತ್ತೇನೆ. ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ರಾಜ್ಯದ ಯುವಕರು, ತಾಯಂದಿರು ಸೇರಿ ಎಲ್ಲರೂ ನನಗೆ ಆಶೀರ್ವಾದ ಮಾಡುತ್ತಿದ್ದಾರೆ. ವಿಜಯೇಂದ್ರನಲ್ಲಿ ಯಡಿಯೂರಪ್ಪ ಅವರನ್ನು ಜನರು ನೋಡುತ್ತಿದ್ದಾರೆ. ಆದ್ದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು.

ಕೇಂದ್ರದ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜೀ, ಪ್ರಧಾನಿ ನರೇಂದ್ರ ಮೋದಿಜೀ, ಅಮಿತ್ ಶಾ ಜೀ, ಸಂತೋಷ್ ಅವರು ನನ್ನನ್ನು ಈ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಸಂಘ ಪರಿವಾರದ ಹಿರಿಯರ ಆಶೀರ್ವಾದ, ಯಡಿಯೂರಪ್ಪ ಮತ್ತು ಹಿರಿಯರ ಆಶೀರ್ವಾದ, ಕಾರ್ಯಕರ್ತರ ಪ್ರೀತಿ, ವಿಶ್ವಾಸ, ಮತದಾರರ ಅಶೀರ್ವಾದ ನನ್ನ ಮೇಲಿದೆ ಎಂದು ತಿಳಿಸಿದರು.
ಜಾತಿ ಗಣತಿ ಮಾಡಿದ ಕಾಂತರಾಜ್ ವರದಿಯನ್ನು ಕಾತರದಿಂದ ಸ್ವೀಕರಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಡಿಸಿಎಂ ಸೇರಿ ಅನೇಕ ಸಮಾಜದವರು ಈ ವರದಿಯ ವಿರುದ್ಧ ಇದ್ದಾರೆ. ಅರೆಬರೆ ಬೆಂದ ಅವೈಜ್ಞಾನಿಕ ವರದಿಯನ್ನು ನೀಡಲಾಗಿದೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು. ಬಿಜೆಪಿ ಜಾತಿಗಣತಿ ವಿರೋಧಿಯಲ್ಲ, ಜಾತಿ ಸಮೀಕ್ಷೆ ನ್ಯಾಯಸಮ್ಮತ ಆಗಿರಲಿ ಎಂದು ತಿಳಿಸಿದರು.
ಎಲ್ಲ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗೂಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 28 ಸ್ಥಾನ ಗೆಲ್ಲಲು ಶ್ರಮಿಸಬೇಕು ಎಂದು ತಿಳಿಸಿದರು. ಆ ಮೂಲಕ ಮೋದಿಜೀ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿ ಮಾಡಬೇಕೆಂದು ಕೋರಿದರು.












Click it and Unblock the Notifications