HD Deve Gowda: ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ: ಸುಳಿವು ನೀಡಿದ ಹೆಚ್ ಡಿ ದೇವೇಗೌಡ
ನವದೆಹಲಿ,ಡಿಸೆಂಬರ್ 07: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಪಕ್ಷವನ್ನ ಮುನ್ನಡೆಸುತ್ತಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ಸಾರಥಿಯಾಗಿ ನಿಖಿಲ್ ಕುಮಾರಸ್ವಾಮಿ ಮುನ್ನಡೆಯುವ ಕುರಿತು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಅವರು ಸುಳಿವು ನೀಡಿದ್ದಾರೆ.
ಕಳೆದ ಮೂರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿರುವ ನಿಖಿಲ್ ಕುಮಾರಸ್ವಾಮಿಗೆ ಪಕ್ಷದ ಬಲುದೊಡ್ಡ ಜವಾಬ್ದಾರಿ ವಹಿಸಲು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರು ಮುಂದಾಗಿದ್ದಾರೆ. ಈ ಕುರಿತು ಟಿವಿ9 ಜೊತೆಗೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ. ಈ ಮೂಲಕ ನಿಖಿಲ್ ಜೆಡಿಎಸ್ ರಾಜ್ಯಾಧ್ಯಕ್ಷರಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.

ನಿಖಿಲ್ ಕುಮಾರಸ್ವಾಮಿ ಯುವಕನಿದ್ದಾನೆ. ರಾಜ್ಯದ ಜವಾಬ್ದಾರಿ, ಪಕ್ಷವನ್ನು ಬೆಳೆಸುವುದಕ್ಕೆ ಅನುಭವ ಇದೆ, ಕುಟುಂಬದ ಹಿನ್ನೆಲೆ ಇದೆ, ಆತನಿಗೆ ಹೆಚ್ಚು ಹೊಣೆಗಾರಿಕೆ ಕೊಟ್ಟು ಪಕ್ಷವನ್ನು ಉಳಿಸಿ ಬೆಳೆಸುತ್ತೇವೆ. ನಾನೇ ಹೇಳುತ್ತಿದ್ದೇನೆ, ನಿಖಿಲ್ ಮುಂದೆ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಶಾಸಕರಾಗುವುದು ಒಂದೇ ಪ್ರಶ್ನೆಯಲ್ಲ ಎಂದು ಹೆಚ್ ಡಿ ದೇವೇಗೌಡ್ರು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಲಿದ್ದಾರಂತೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ನಾವು ಈಗಾಗಲೇ ಕಾಂಗ್ರೆಸ್ನಿಂದ ದೂರ ಸರಿದಿದ್ದೇವೆ. ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜತೆಗೇ ಮಾತುಕತೆ ನಡೆಸಲಿದ್ದೇವೆ. ಕೊನೆಯವರೆಗೂ ಎನ್ಡಿಎ ಜತೆಗೇ ಇರಲಿದ್ದೇವೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.
ಇನ್ನೂ ಹಾಸನ ಕಾಂಗ್ರೆಸ್ ಸಮಾವೇಶದ ಕುರಿತು ಮಾತನಾಡಿ, ಹಾಸನ ಕಾಂಗ್ರೆಸ್ ಸಮಾವೇಶದಲ್ಲಿ ಅವರು (ಕಾಂಗ್ರೆಸ್ ನಾಯಕರು) ಏನೇನು ಮಾತನಾಡಿದ್ದರು? ಎಷ್ಟು ಜನ ಸೇರಿದ್ದರು? ಯಾವ್ಯಾವ ಜಿಲ್ಲೆಯಿಂದ ಜನ ಬಂದಿದ್ದರು ಎಂಬ ಎಲ್ಲ ಮಾಹಿತಿ ಸಂಗ್ರಹಿಸಿದ್ದೇನೆ. ಅದಕ್ಕೆಲ್ಲ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ನಮ್ಮ ಪಕ್ಷ ಉತ್ತರ ಕೊಡಲಿದೆ. ನನಗೆ ವಯಸ್ಸಾಯಿತು ಎಂದು ದೇವೇಗೌಡ ಹೇಳಿದ್ದಾರೆ.
ಹಾಸನದಲ್ಲೇ ಸಮಾವೇಶ ಮಾಡಿದ್ದಕ್ಕೆ ನನಗೇನೂ ಬೇಸರವಿಲ್ಲ. ಅವರು ದೇವೇಗೌಡರ ಕುಟುಂಬವನ್ನೇ ಮುಗಿಸುತ್ತೇವೆ ಎಂದರು. ಆದರೆ, ಮುಗಿಸುವುದು ಬಿಡುವುದು ಭಗವಂತನ ಇಚ್ಛೆ ಹಾಗೂ ಜನರ ಇಚ್ಛೆ. ಅದು ಯಾರೋ ಒಬ್ಬರ ಕೈಯಲ್ಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದರು.
ರಾಮನಗರ ಖಾಲಿ ಮಾಡಿಸಿದ್ದೇವೆ, ಹಾಸನ ಖಾಲಿ ಮಾಡಿಸುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ದೇವೇಗೌಡರು ಉತ್ತರಿಸಿ, ಆ ಹೇಳಿಕೆಗಳಿಗೆ ಬೆಲಯಿಲ್ಲ. ಯಾರನ್ನೂ ಯಾರು ಖಾಲಿ ಮಾಡಿಸಲಾಗದು ಎಂದು ತಿಳಿಸಿದರು.












Click it and Unblock the Notifications