ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರ ನೇಮಕಕ್ಕೆ, ಕಾರ್ಯಕಾರಿ ಸಮಿತಿ ಸಭೆ
ಬೆಂಗಳೂರು, ಅಕ್ಟೋಬರ್ 26; ಎರಡು ದಿನಗಳ ಕಾಲ ಜೆಡಿಎಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. 13 ರಾಜ್ಯಗಳ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗಲಿದೆ.
ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಮಾಹಿತಿ ನೀಡಿದರು. ಅಕ್ಟೋಬರ್ 27 ಮತ್ತು 28ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ.
ಬುಧವಾರ ಜೆಡಿಎಸ್ ಕೇಂದ್ರ ಕಚೇರಿ ಜೆ. ಪಿ. ಭವನದಲ್ಲಿ ಮಾತನಾಡಿದ ಕುಮಾರಸ್ವಾಮಿ, "ಗುರುವಾರ, ಶುಕ್ರವಾರ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸಭೆ ಇದೆ. ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗಲಿದೆ" ಎಂದರು.
ಪ್ರಸ್ತುತ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ. ರಾಜ್ಯಸಭಾ ಸದಸ್ಯರಾಗಿರುವ ದೇವೇಗೌಡರಿಗೆ ಅನಾರೋಗ್ಯದ ಹಿನ್ನಲೆ ಬೇರೆಯವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಬಹುದು ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ದೇವೇಗೌಡರೇ ಮರು ಆಯ್ಕೆಯಾಗಲಿದ್ದಾರೆ ಎಂಬ ಮಾಹಿತಿ ಇದೆ.
ರಾಜ್ಯ, ರಾಷ್ಟ್ರದ ಸಮಸ್ಯೆಗಳ ಕುರಿತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ನವೆಂಬರ್ 1ರಂದು ಪಕ್ಷದ ಪಂಚರತ್ನ ರಥಯಾತ್ರೆ ಸಹ ಆರಂಭವಾಗಲಿದೆ. ಈ ಕುರಿತು ಸಹ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.

ಮೊದಲ ಪಟ್ಟಿ ಬಿಡುಗಡೆ; ನವೆಂಬರ್ 1ರಂದು ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಅಭಿಷೇಕ ನಡೆಯಲಿದೆ. ಮುಳಬಾಗಿಲಿನಲ್ಲಿ ರೈತ ಸಮಾವೇಶ ನಡೆಯಲಿದೆ. ಅಲ್ಲಿಯೇ ಪಂಚರತ್ನ ರಥಯಾತ್ರೆಗೆ ಚಾಲನೆ ಸಿಗಲಿದೆ.
ನವೆಂಬರ್ 1ರಂದು 2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ 123 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಪಟ್ಟಿಗೆ ಪೂಜೆ ಸಲ್ಲಿಕೆ ಮಾಡಲಾಗಿದೆ.
ಎಚ್. ಡಿ. ಕುಮಾರಸ್ವಾಮಿ ಮಾತನಾಡಿ, "ಕಾಂಗ್ರೆಸ್, ಬಿಜೆಪಿಗಿಂತ ಭಿನ್ನವಾಗಿ ನಮ್ಮ ರಥಯಾತ್ರೆ ನಡೆಯಲಿದೆ. ಜನರ ಕಷ್ಟ ಪರಿಹಾರಕ್ಕಾಗಿ ಕಾಂಗ್ರೆಸ್, ಬಿಜೆಪಿ ಯಾವುದೇ ಕೆಲಸ ಮಾಡಿಲ್ಲ" ಎಂದು ಆರೋಪಿಸಿದರು.












Click it and Unblock the Notifications